ದಾವಣಗೆರೆ, ಅ. 24 – ಶಿಕ್ಷಣ ಈಗ ಜ್ಞಾನದಿಂದ ಆವಿಷ್ಕಾರದ ಕಡೆ ಸಾಗುತ್ತಿದೆ. ಅದಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳೂ ಆವಿಷ್ಕಾ ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಬೆಂಗಳೂರಿನ ಐ.ಐ.ಎಸ್.ಸಿ. ನಿವೃತ್ತ ಉಪನ್ಯಾಸಕ ಡಾ. ಡಿ.ಕೆ. ಸುಬ್ರಮಣ್ಯಂ ಹೇಳಿದ್ದಾರೆ.
ನಗರದ ಬಿಐಇಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ (ಐಇಇಇ) ಪ್ರಥಮ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂಜಿನಿಯರಿಂಗ್ ವಲಯ ಯಾವುದೇ ಗಡಿ ಹೊಂದಿಲ್ಲ. ಕೃತಕವಾಗಿ ವಿವಿಧ ವಿಭಾಗಗಳಿಗೆ ಗಡಿಗಳನ್ನು ರೂಪಿಸಲಾಗಿದೆ. ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಇತ್ಯಾದಿ ವಿಭಾಗಗಳು ಸಂಪೂರ್ಣ ಸ್ವತಂತ್ರವಾಗಿಲ್ಲ. ಅವುಗಳು ಪರಸ್ಪರ ಅವಲಂಬಿ ಎಂದು ತಿಳಿಸಿದರು.
ಯಾವುದೇ ಆವಿಷ್ಕಾರಕ್ಕೆ ಹಲವು ವಲಯಗಳ ಜ್ಞಾನ ಅಗತ್ಯವಾಗಿದೆ. ಹೀಗಾಗಿ ಬಹುಶಾಸ್ತ್ರೀಯ ಅಧ್ಯಯನಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದು ಹೇಳಿದರು. ಸಾಧಾರಣ ಫ್ಯಾನ್ ಒಂದನ್ನು ರೂಪಿಸುವಲ್ಲಿ ಇಂಜಿನಿಯ ರಿಂಗ್ ವಲಯದ ನಾಲ್ಕು ವಿಭಾಗಗಳು ಭಾಗಿಯಾಗಿ ರುತ್ತವೆ. ಹೀಗಾಗಿ ಇಂಜಿನಿ ಯರಿಂಗ್ ವಿದ್ಯಾರ್ಥಿಗಳು ತಮ್ಮ ಸಮಯದ ಶೇ.10 ರಷ್ಟನ್ನಾದರೂ ಬಹುಶಿಸ್ತೀಯ ಅಧ್ಯಯನಕ್ಕೆ ಮೀಸಲಿಡಬೇಕು. ಅನ್ವೇಷಣೆಗೆ ಅಗತ್ಯವಾದ ಕೌಶಲ್ಯ ಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಮಣಿಪಾಲದ ಡಿ.ಒ.ಟಿ. ನೆಟ್ ಸಂಶೋಧನೆ ಹಾಗೂ ತರಬೇತಿ ವಿಭಾಗದ ನಿರ್ದೇಶಕ ಡಾ. ಯು.ಸಿ. ನಿರಂಜನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಇಂಜಿನಿಯರಿಂಗ್ ವಿಭಾಗ ಗಳನ್ನು ಜೊತೆ ಸೇರಿಸುವುದು ಹೆಚ್ಚಾಗುತ್ತಿದೆ. ಇದಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳೂ ಬದಲಾಗಬೇಕು ಎಂದು ಕಿವಿಮಾತು ಹೇಳಿದರು.
ತಿಂಗಳ ಮೊಬೈಲ್ ಬಿಲ್ ಸೈಟ್ನಷ್ಟೇ ದುಬಾರಿಯಾಗಿದ್ದಾಗ
ದಾವಣಗೆರೆಯಲ್ಲಿ ಮೊದಲು ಮೊಬೈಲ್ ಸೇವೆ ಆರಂಭಿಸಿದ್ದ ಸ್ಪೈಸ್ ಎಂಬ ಕಂಪನಿ. ಆಗ ಒಳ ಬರುವ ಕರೆಗಳಿಗೆ 16 ರೂ.ಗಳನ್ನು ಪಾವತಿಸಬೇಕಿತ್ತು. ಆ ಕಾಲದಲ್ಲಿ ತಮ್ಮ ತಿಂಗಳ ಮೊಬೈಲ್ ಬಿಲ್ 40 ಸಾವಿರ ರೂ.ಗಳವರೆಗೆ ತಲುಪುತ್ತಿತ್ತು ಎಂದು ಬಿಐಇಟಿ ಪ್ರಾಂಶುಪಾಲ ಹೆಚ್.ಬಿ. ಅರವಿಂದ ಹೇಳಿದರು. ಈಗ ಮೊಬೈಲ್ ಬಿಲ್ 600 ರೂ. ದಾಟುವುದಿಲ್ಲ. ಬಹುಶಃ ಭಾರತದಲ್ಲಿ ಇಷ್ಟೊಂದು ಬೆಲೆ ಕಡಿಮೆ ಆಗಿರುವ ಸೇವೆ ಅಂದರೆ ಇದೊಂದೇ ಇರಬೇಕು. ಆ ಕಾಲದಲ್ಲಿ ತಿಂಗಳಿಗೆ ಆಗುತ್ತಿದ್ದ ಮೊಬೈಲ್ ಬಿಲ್ ವೆಚ್ಚದಲ್ಲಿ ಶಾಮನೂರಿನಲ್ಲಿ ಒಂದು ನಿವೇಶನವನ್ನೇ ಖರೀದಿಸಬಹುದಿತ್ತು ಎಂದು ಚಟಾಕಿ ಹಾರಿಸಿದರು.
ಬೆಂಗಳೂರಿನ ಕಸ್ಟಮ್ ಫಿಟ್ ಎ.ಐ. ಸಹಸ್ಥಾಪಕ ಹಾಗೂ ಸಿಇಒ ಬಿ.ವಿ. ಅಶ್ವಿನ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗ ಪಡೆಯಲು ಅಗತ್ಯ ಕೌಶಲ್ಯ ಬೆಳೆಸಿಕೊಳ್ಳುವ ಜೊತೆಗೆ ಉದ್ಯೋಗ ಸೃಷ್ಟಿಯುವ ಉದ್ಯಮಿಗಳೂ ಆಗಬೇಕಿದೆ. ನವೋದ್ಯಮಗಳನ್ನು ಸ್ಥಾಪಿಸಲು ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದರು.
ವೇದಿಕೆಯ ಮೇಲೆ ಮಲೇಷಿಯಾದ ಟೆಕ್ನೊಲೊಜಿ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಪವರ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಉಪನ್ಯಾಸಕ ಡಾ. ಚೀ ವಿ ತಾನ್, ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪ್ರಾಂಶುಪಾಲ ಡಾ. ಹೆಚ್.ಬಿ. ಅರವಿಂದ್, ಬಿಐಇಟಿಯ ಡಾ. ಬಿ. ಪೂರ್ಣಿಮ, ಡಾ. ಹೆಚ್.ಪಿ. ವಿನುತ ಮತ್ತಿತರರು ಉಪಸ್ಥಿತರಿದ್ದರು.