ಜೀವನದ ಅಗ್ನಿ ಪರೀಕ್ಷೆಯಲ್ಲಿ ಮೌಲ್ಯಗಳನ್ನು ಕಳೆದುಕೊಳ್ಳದಿರಲು ತರಳಬಾಳು ಶ್ರೀ ಹಿತನುಡಿ

ಜೀವನದ ಅಗ್ನಿ ಪರೀಕ್ಷೆಯಲ್ಲಿ ಮೌಲ್ಯಗಳನ್ನು ಕಳೆದುಕೊಳ್ಳದಿರಲು ತರಳಬಾಳು ಶ್ರೀ ಹಿತನುಡಿ

ಶ್ರೀ  ತರಳಬಾಳು ಜಗದ್ಗುರು ರೆಸಿಡೆನ್ಷಿಯಲ್ ಸ್ಕೂಲ್ ವಾರ್ಷಿಕೋತ್ಸವ ಸಮಾರಂಭದಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ

ದಾವಣಗೆರೆ, ಜ. 17- ಜೀವನದ ಅಗ್ನಿ ಪರೀಕ್ಷೆಯಲ್ಲಿ ಆದರ್ಶ, ಮೌಲ್ಯಗಳನ್ನು ಎಂದಿಗೂ ಕಳೆದುಕೊಳ್ಳಬೇಡಿ ಎಂದು ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ನಗರದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಳ್ಳ ಲಾಗಿದ್ದ ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಷಿಯಲ್ ಸ್ಕೂಲ್ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಆದರ್ಶಗಳು ಹೆಚ್ಚಾಗಿರುತ್ತವೆ. ಇಂದು `ವೈದ್ಯರಾಗಿ ಬಡವರ ಸೇವೆ ಮಾಡುತ್ತೇನೆ’ ಎಂದು ಹೇಳುವ ನೀವು ಭವಿಷ್ಯದಲ್ಲಿ ಇಂತಹ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದು ಸುಲಭವಲ್ಲ ಎಂದು ಎಚ್ಚರಿಸಿದರು.

ಜೀವನದಲ್ಲಿ ಅನೇಕ ಅಗ್ನಿ ಪರೀಕ್ಷೆಗಳು ಎದುರಾಗುತ್ತವೆ. ಅನೇಕರನ್ನು ನಂಬಿ ಮೋಸ ಹೋಗಿ ಪಾಠ ಕಲಿಯುವಂತಹ ಘಟನೆಗಳೂ ನಡೆಯುತ್ತವೆ. ಹಾಗೆಂದ ಮಾತ್ರಕ್ಕೆ ಮೌಲ್ಯಗಳನ್ನು ಕಳೆದುಕೊಳ್ಳಬಾರದು. ವಿಶಾಲ ಅಂತಃಕರಣ, ತ್ಯಾಗ ಬುದ್ದಿಯನ್ನು ಭವಿಷ್ಯದ ಜೀವನದಲ್ಲಿ ರೂಢಿಸಿಕೊಂಡವರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳಾಗಿ ಶಾಲೆಯಲ್ಲಿ ಪಾಠ ಓದಿ ಪರೀಕ್ಷೆ ಬರೆದು ಅಂಕ ಗಳಿಸುತ್ತೀರಿ. ಆದರೆ ಜೀವನದಲ್ಲಿ ಪರೀಕ್ಷೆ ಬರೆದು ಪಾಠ ಕಲಿಯ ಬೇಕಾಗುತ್ತದೆ. ನಿಮ್ಮ ಬದುಕಿನಲ್ಲಿ ಏನೇ ಸವಾ ಲುಗಳು ಎದುರಾದರೂ ನಿಮ್ಮ ಅಂತರಂಗದ ದನಿ ಯನ್ನು ಆಲಿಸಬೇಕು ಎಂದು ಶ್ರೀಗಳು ಹೇಳಿದರು.

ಅನುಭವ ಮಂಟಪ ಶಾಲೆಯಲ್ಲಿ ಓದಿದ ಮಕ್ಕಳು ಜಗತ್ತಿನ ಎಲ್ಲಾ ಕಡೆಯೂ ಸಿಗುತ್ತಾರೆ. ಬೆಂಗಳೂರಿನ ಯಾವುದೇ ಹೈಟೆಕ್ ಆಸ್ಪತ್ರೆಯಲ್ಲಿ ಇಲ್ಲಿ ಕಲಿತು ಹೋದ ವೈದ್ಯರೇ ಸಿಗುತ್ತಾರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಮುಂದಿನ ದಿನಗಳಲ್ಲಿ ಚಂದ್ರ ಲೋಕಕ್ಕೆ ಹೋಗುವ ವ್ಯವಸ್ಥೆಯಾದರೂ ಅಲ್ಲಿಯೂ ನಮ್ಮ ಮಕ್ಕಳೇ ಮೊದಲಿಗರಾಗಿರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡುತ್ತಾ, ಎಲ್ಲಾ ಮಕ್ಕಳೂ ಒಂದೇ ರೀತಿ ಇರುವುದಿಲ್ಲ. ಪ್ರತಿ ಮಗುವಿನಲ್ಲೂ ಒಂದೊಂದು ಬಗೆಯ ಸುಪ್ತ ಪ್ರತಿಭೆ ಅಡಗಿರುತ್ತದೆ. ಯಾವ ಅಭಿರುಚಿ ಮಗುವಿನಲ್ಲಿರುತ್ತದೋ ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.

ಬ್ರಿಟೀಷರು ದೇಶ ಬಿಟ್ಟು ಹೋದಾಗ ಶೈಕ್ಷಣಿಕ ಸ್ಥಿತಿ ಕೆಳಮಟ್ಟದಲ್ಲಿತ್ತು. ಈ ಸಂದರ್ಭದಲ್ಲಿ ಸರ್ಕಾರದಿಂದ ಮಾಡಲು ಕಷ್ಟವಾದ ಕೆಲಸವನ್ನು ಮಠಮಾನ್ಯಗಳು ಮಾಡಿದವು. ಅನೇಕ ವಿದ್ಯಾಸಂಸ್ಥೆಗಳನ್ನು ತೆರೆದು ಬಡವರಿಗೆ ಊಟ, ವಸತಿ, ವಿದ್ಯೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಅಂತಹ ಒಂದು ಮಠದಲ್ಲಿಯೇ ನಾನೂ ಸಹ ಓದಿ ಇಂದು ಜಿಲ್ಲಾಧಿಕಾರಿಯಾಗಿದ್ದೇನೆ. ಈ ರಾಜ್ಯದ ಮಠಗಳ ಮೇಲೆ ನನಗೆ ಅಪಾರ ಗೌರವವಿದೆ ಎಂದು ಹೇಳಿದರು.

ತರಳಬಾಳು ಜಗದ್ಗುರುಗಳು ಮೆಡಿಕಲ್ ಅಥವಾ ಇಂಜಿನಿಯರಿಂಗ್ ಕಾಲೇಜು ತೆರೆಯದೇ, ಗ್ರಾಮೀಣ ಪ್ರದೇಶಗಳ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಗ್ರಾಮಾಂತರ ಪ್ರದೇಶದಲ್ಲಿ ಶಾಲಾ-ಕಾಲೇಜು ತೆರೆದು ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆಯಲ್ಲಿ ನಾವೆಲ್ಲರೂ ಸಕ್ರಿಯವಾಗಿ ಭಾಗವಹಿಸಿ ನಾಡನ್ನು ಉಜ್ವಲವಾಗಿಸಲು ಶ್ರಮಿಸೋಣ ಎಂದರು.

ಶ್ರೀ ತರಳಬಾಳು ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲ ಕೆ.ಸೋಮಸೇಖರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಪ್ರಾಂಶುಪಾಲರುಗಳಾದ ಹೆಚ್.ಎನ್. ಪ್ರದೀಪ್, ರವಿಕುಮಾರ್ ಹೆಚ್.ಎಸ್., ಮಂಜುಳಾ ಕೆಬಿ. ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕು.ಲಲಿತಾ ಎಂ., ಕು.ಸಹನಾ ಕೆ.ಎಸ್. ಸ್ವಾಗತಿಸಿದರು. ಕು.ನಂದಿನಿ ಪಿ., ಕು.ರೇಷ್ಮಾ ಜಿ. ಶಾಲಾ ವಾರ್ಷಿಕ ವರದಿ ವಾಚಿಸಿದರು.  ಕು.ಅನಘ ವಿ. ಉಪಾಧ್ಯಾಯ, ಕು.ಜಯಲಕ್ಷ್ಮಿ ಸಿ. ಕಾರ್ಯಕ್ರಮ ನಿರೂಪಿಸಿದರೆ, ಕು.ಗಂಗಾ ಟಿ.ಡಿ., ಕು.ಹಂಸಾ ಎಸ್. ಮಹಡಿ ವಂದಿಸಿದರು.

error: Content is protected !!