ದಾವಣಗೆರೆ, ಜ. 15- ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಮುಂಜಾನೆ ಗಿನ್ನಿಸ್ ದಾಖಲೆ ಗುರಿಯ ಯೋಗಥಾನ್ನಲ್ಲಿ ಸುಮಾರು 8 ಸಾವಿರಕ್ಕೂ ಅಧಿಕ ಜನರು ಯೋಗ ಪ್ರದರ್ಶನ ನೀಡಿದರು.
ಬೆಳಿಗ್ಗೆ 6 ಗಂಟೆಯಿಂದಲೇ ಯೋಗ ಪ್ರದ ರ್ಶನಕ್ಕೆ ಪ್ರವೇಶ ಆರಂಭವಾಗಿತ್ತು. ಮೈ ಕೊರೆವ ಚಳಿ ನಡುವೆಯೂ ವಿವಿಧ ಶಾಲಾ-ಕಾಲೇಜು ಗಳಿಂದ ಮಕ್ಕಳು ಸೂರ್ಯೋದಯಕ್ಕೂ ಮುನ್ನವೇ ಕ್ರೀಡಾಂಗಣದತ್ತ ದಾಂಗುಡಿ ಇಟ್ಟಿದ್ದರು.
ಸಮಾಜ ಕಲ್ಯಾಣ ಇಲಾಖೆಯಿಂದ ಹಸಿರು ಹಾಸಿನ ವ್ಯವಸ್ಥೆ ಮಾಡಲಾಗಿತ್ತು. ಕೆಲವರು ತಮ್ಮದೇ ಆದ ಯೋಗ ಮ್ಯಾಟ್ ತಂದಿದ್ದರು. ಮತ್ತೆ ಕೆಲವರು ಹಸಿರು ಹಾಸಿನ ಮೇಲೆಯೇ ಯೋಗ ಮಾಡಿದರು. ಪುಟಾಣಿ ಮಕ್ಕಳು, ಶಾಲಾ -ಕಾಲೇಜು ವಿದ್ಯಾರ್ಥಿಗಳು, ಯುವಕ-ಯುವತಿ ಯರು, ಶಿಕ್ಷಕ-ಶಿಕ್ಷಕಿಯರು, ವಿವಿಧ ಇಲಾಖೆ ಅಧಿಕಾರಿಗಳು, ಪುರುಷರು, ಗೃಹಿಣಿಯರೂ ಸೇರಿದಂತೆ ಕೆಲ ವೃದ್ದರೂ ಸಹ ಅತ್ಯುತ್ಸಾಹದಿಂದ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.
ನಾಡಗೀತೆಯೊಂದಿಗೆ ಆರಂಭವಾದ ಪ್ರದರ್ಶನದಲ್ಲಿ 40 ನಿಮಿಷಗಳಲ್ಲಿ 33 ವಿವಿಧ ರೀತಿಯ ಆಸನಗಳನ್ನು ಮಾಡಲಾಯಿತು. ಧ್ವನಿ ಮುದ್ರಿತ ಯೋಗ ಮಾರ್ಗದರ್ಶಕರ ಸೂಚನೆಯಲ್ಲಿ ಹಿನ್ನೆಲೆ ಸಂಗೀತದ ಅಬ್ಬರವೇ ಜೋರಾಗಿ, ಸೂಚನೆ ಅಸ್ಪಷ್ಟವಾಗಿದ್ದರೂ ವೇದಿಕೆ ಮೇಲಿದ್ದವರ ಮಾರ್ಗದರ್ಶನದಲ್ಲಿ ಯೋಗ ಪ್ರದರ್ಶನ ಯಶಸ್ವಿಯಾಯಿತು. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಅಂತ್ಯಗೊಳಿಸಲಾಯಿತು.
ವಿಶ್ವದಾಖಲೆ ಬರೆದ ಯೋಗಥಾನ್
ಬೆಂಗಳೂರು, ಜ. 15 – ರಾಷ್ಟ್ರೀಯ ಯುವ ದಿನದ ಅಂಗವಾಗಿ ರಾಜ್ಯಾದ್ಯಂತ ನಡೆದ ಯೋಗಥಾನ್ ಗಿನ್ನೀಸ್ ದಾಖಲೆ ಸೇರುವ ಪ್ರಯತ್ನದಲ್ಲಿ ಯಶಸ್ಸು ಕಂಡಿದೆ.
ರಾಜ್ಯಾದ್ಯಂತ ಲಕ್ಷಾಂತರ ಜನರು ಏಕ ಕಾಲದಲ್ಲಿ ಯೋಗಾಸನ ನಡೆಸಿದ್ದರು. 2018 ರಲ್ಲಿ ರಾಜಸ್ಥಾನದಲ್ಲಿ ಏಕಕಾಲಕ್ಕೆ 1.60 ಲಕ್ಷ ಜನರು ಯೋಗ ಮಾಡಿದ್ದು ದಾಖಲೆಯಾಗಿತ್ತು.
ಭಾನುವಾರ ಬೆಳಗ್ಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣ ಗೌಡ ಅವರು ಯೋಗಥಾನ್ ಉದ್ಘಾಟಿಸಿದ್ದರು. ಈ ಕಾರ್ಯಕ್ರಮದಲ್ಲಿ ಏಕಕಕಾಲಕ್ಕೆ 6 ಲಕ್ಷಕ್ಕೂ ಹೆಚ್ಚು ಜನ ಯೋಗಾಸನ ಮಾಡಿದ್ದಾರೆ. ಯೋಗಥಾನ್ ವಿಶ್ವದಾಖಲೆ ಸೃಷ್ಟಿಸಿದೆ ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಚೆನ್ನಪ್ಪ, ಎಸ್ಪಿ ಸಿ.ಬಿ. ರಿಷ್ಯಂತ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ಎಂ.ನೆಲವಿಗಿ, ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್ ವೇದಿಕೆ ಮೇಲೆ ಯೋಗ ಪ್ರದರ್ಶನ ಮಾಡಿದರು. ಹಿರಿಯ ಉದ್ಯಮಿ, ಯೋಗ ಒಕ್ಕೂಟದ ಗೌರವಾಧ್ಯಕ್ಷ ಬಿ.ಸಿ. ಉಮಾಪತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಂಸದ ಜಿ.ಎಂ. ಸಿದ್ದೇಶ್ವರ ಯೋಗ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಯೋಗ ನಿತ್ಯದ ಯೋಗವಾಗಬೇಕು. ಆಗ ಮಾತ್ರ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಲು ಸಾಧ್ಯ. ಆಸ್ಪತ್ರೆಗಳಿಗೆ ಹೋಗುವ ಪ್ರಮೇಯಗಳಿಂದ ತಪ್ಪಿಸಿಕೊಳ್ಳಬೇಕಾದರೆ ನಿತ್ಯ ಯೋಗ ಮಾಡಲೇ ಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡುತ್ತಾ, ರಾಷ್ಟ್ರೀಯ ಯೋಗ ದಿನಾ ಚರಣೆಯ ಮುಂದುವರೆದ ಭಾಗವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸೇರಿ 5 ಲಕ್ಷ ಜನರಿಂದ ಯೋಗ ಪ್ರದರ್ಶನ ನಡೆಸಲು ಉದ್ದೇಶಿಸ ಲಾಗಿದ್ದು, ದಾವಣಗೆರೆ ಜಿಲ್ಲೆಗೆ 6 ಸಾವಿರ ಜನರ ಗುರಿ ನೀಡಲಾಗಿತ್ತು. ಗುರಿ ಮೀರಿ ಇಂದು 8 ಸಾವಿರ ಜನರು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಇಂತಹ ಐತಿಹಾಸಿಕ ಕಾರ್ಯಕ್ರಮದಲ್ಲಿ ನಾವೆಲ್ಲಾ ಭಾಗಿಯಾಗಿ ರುವುದು ಹೆಮ್ಮೆಯ ವಿಚಾರ ಎಂದರು.