ಹರಜಾತ್ರೆ: ಪ್ರಾಣ ಬಿಡುವ ಮಾತುಗಳನ್ನಾಡದಂತೆ ಸ್ವಾಮೀಜಿಗಳಿಗೆ ಶಿವಶಂಕರಪ್ಪ ಮನವಿ
ಹರಿಹರ, ಜ. 15- ಪ್ರಾಣ ಬಿಟ್ಟೇವು ಮೀಸಲಾತಿ ಬಿಡುವುದಿಲ್ಲ ಎಂಬ ಮಾತುಗಳನ್ನು ಆಡುವ ಬದಲು ತಾಳ್ಮೆಯಿಂದ ಮೀಸಲಾತಿ ಪಡೆಯಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದ ಪಂಚಮಸಾಲಿ ಗುರುಪೀಠದ ಆವರಣದಲ್ಲಿ ನಡೆಯುತ್ತಿರುವ ಹರಜಾತ್ರಾ ಮಹೋತ್ಸವದಲ್ಲಿ ಪಂಚಮ ಸಾಲಿ ಗುರುಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾ ಸ್ವಾಮಿಗಳ ಪಂಚಮ ಪೀಠಾರೋಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವೀರಶೈವ ಸಮಾಜದ ಒಳಪಂಗಡಗಳಷ್ಟೇ ಅಲ್ಲದೇ ಇತರೆ ಹಿಂದುಳಿದ ವರ್ಗಗಳ ಸಮುದಾಯದವರು ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಟ ಮಾಡುತ್ತಿವೆ. ಸರ್ಕಾರ ಈ ವಿಷಯದಲ್ಲಿ ಮಲಗಿಲ್ಲ. ಸಾಧಕ – ಬಾಧಕಗಳ ಬಗ್ಗೆ ಗಮನ ಹರಿಸುತ್ತಿದೆ ಎಂದರು.
ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೇ ಸರ್ಕಾರ ಇದ್ದರೂ ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸುವುದರ ಬಗ್ಗೆ ಯೋಚನೆ ಮಾಡುತ್ತವೆ. ಈ ಬಗ್ಗೆ ನಮ್ಮಲ್ಲಿ ಪ್ರಯತ್ನ ಹಾಗೂ ನಂಬಿಕೆ ಇರಬೇಕು ಎಂದರು.
ಕೇಂದ್ರ ಸರ್ಕಾರದಿಂದ ವೀರಶೈವ ಲಿಂಗಾಯತರಿಗೆ ಒ.ಬಿ.ಸಿ. ಸೌಲಭ್ಯಗಳು ದೊರೆಯಬೇಕಿದೆ. ಇದಕ್ಕಾಗಿ ಮಹಾಸಭಾ ಒತ್ತಾಯ ಮಾಡಲಿದೆ. 2ಎ ಮೀಸಲಾತಿ ಹೆಚ್ಚಳಕ್ಕೆ ಬೆಂಬಲ ನೀಡಲಿದೆ ಎಂದವರು ಹೇಳಿದರು.
ಪಂಚಮಸಾಲಿ ಸಮಾಜದ ಮುಖಂಡರು ಒಬ್ಬರು ಒಂದೊಂದು ರೀತಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಇದ ರಿಂದ ಸಮಾಜ ಹರಿದು ಹೋಗುತ್ತದೆ ಎಂದವರು ಎಚ್ಚರಿಸಿದರು.
ಪಂಚಮಸಾಲಿ ಗುರುಪೀಠಾಧ್ಯಕ್ಷ ಶ್ರೀ ವಚನಾನಂದ ಮಹಾಸ್ವಾಮೀಜಿ ಮಾತನಾಡಿ, ಮೀಸಲಾತಿಯ ನಿರ್ಣಾಯಕ ಹಂತದಲ್ಲಿ ನಾವು ಇದ್ದೇವೆ. ಪ್ರಾಣ ಬಿಟ್ಟೇವು, ಆದರೆ ಮೀಸ ಲಾತಿ ಬಿಡೆವು ಎಂದು ಮಾತಿಗೆ ಬದ್ಧವಾಗಿರುವೆ ಎಂದರು.
ಮೀಸಲಾತಿ ಸಿಗುವವರೆಗೆ ನಮಗೆ ನೀಡಿರುವ ಬೆಳ್ಳಿ ಸಿಂಹಾಸನವನ್ನು ಏರುವುದಿಲ್ಲ ಮತ್ತು ತುಲಾ ಭಾರವನ್ನು ಸ್ವೀಕರಿಸುವುದಿಲ್ಲ. ಮೀಸಲಾತಿ ಸಿಕ್ಕ ದಿನದಂದು ಪೀಠಾರೋಹಣದಲ್ಲಿ ತೃಪ್ತಿಯನ್ನು ಕಾಣುವುದಾಗಿ ಹೇಳಿದರು.
ಪ್ರಾಸ್ತಾವಿಕವಾಗಿ ಹರ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಪಾಟೀಲ್ ಮಾತನಾಡಿದರು.
ಈ ವೇಳೆ ಪುಟಾಣಿ ಕನ್ನಡದ ಗಾನ ಕೋಗಿಲೆ ಮಹಾನ್ಯಾ ಅವರ ಕಾಂತಾರ, ಶಿಶುನಾಳ ಶರೀಫ ಚಲನಚಿತ್ರ ಹಾಡುಗಳ ರಸದೌತಣ ಹಾಗೂ ಪ್ರಕಾಶ್ ಜೈನ ದಾಸರಹಳ್ಳಿಯವರ ಸಂಗೀತದ ಹಾಡುಗಳು ಸಭಿಕರ ಗಮನವನ್ನು ಸೆಳೆದವು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಹಗರಿಬೊಮ್ಮನಹಳ್ಳಿ ಶಾಖಾ ಮಠದ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ಇಳಕಲ್ ವಿಜಯ ಮಹಾಂತೇಶ್ವರ ಮಠದ ಶ್ರೀ ಗುರು ಮಹಾಂತ ಮಹಾ ಶಿವಯೋಗಿಗಳು, ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ತೇಜಸ್ವಿ ಪಾಟೀಲ್, ಪಂಚಮಸಾಲಿ ಸಮಾಜದ ಮಾಜಿ ಅಧ್ಯಕ್ಷ ಬಾವಿ ಬೆಟ್ಟಪ್ಪ, ಬಸವರಾಜ್ ದಿಂಡೂರು, ಹರ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರಕಾಶ್ ಪಾಟೀಲ್, ಹರಪನಹಳ್ಳಿ ವೀಣಾ ಮಹಾಂತೇಶ್, ನಂಜನಗೌಡ್ರು ಹರಪನಹಳ್ಳಿ, ಎನ್.ಜಿ. ನಾಗನಗೌಡ್ರು, ವೀರೇಂದ್ರ ಪಾಟೀಲ್, ಹನಗವಾಡಿ ಗ್ರಾಪಂ ಅಧ್ಯಕ್ಷೆ ಕೆ.ಪಿ ಕವಿತಾ, ಉಪಾಧ್ಯಕ್ಷ ಎಸ್.ಎಂ. ರೇವಣಸಿದ್ದಪ್ಪ, ಧರ್ಮದರ್ಶಿಗಳಾದ ಪಿ.ಡಿ. ಶಿರೂರು, ಬಿ.ಸಿ. ಉಮಾಪತಿ, ಚಂದ್ರಶೇಖರ್ ಪೂಜಾರ್, ಜಿ.ಬಿ. ಹಾಲೇಶಗೌಡ, ದೇವೇಂದ್ರಪ್ಪ, ಅಜ್ಜಪ್ಪ ವಕೀಲರು, ಶಶಿಧರ್, ಪೂಜಾರ್, ವೀರೇಂದ್ರ ಗುಳಿಗಿ, ಬೇಳೂರು ಅಂಜಿನಪ್ಪ, ಚೆನ್ನಪ್ಪ ರೆಡ್ ಕ್ರಾಸ್ ಸಂಸ್ಥೆ, ಬಂಗಾರ ಸೋಮಣ್ಣ ಲಿಂಗರಾಜ್ ಸಂತೆಬೆನ್ನೂರು, ತೇಜಸ್ವಿ ಪಾಟೀಲ್, ಲತಾ ಮಲ್ಲಿಕಾರ್ಜುನ ಹರಪನಹಳ್ಳಿ ಮತ್ತಿತರರು ಹಾಜರಿದ್ದರು.
ಸ್ವಾಗತ ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ರಶ್ಮಿ ಕುಂಕೋದ್, ಪ್ರಾರ್ಥನೆ ಕು. ನಿಕಿತಾ, ನಿರೂಪಣೆ ಚೈತ್ರ ತಿಪ್ಪೇಸ್ವಾಮಿ ಹೊನ್ನಾಳಿ ಮಾಡಿದರು.
– ಎಂ. ಚಿದಾನಂದ ಕಂಚಿಕೇರಿ, [email protected]