ಡಿಎಸ್ಎಸ್ ನೇತೃತ್ವದಲ್ಲಿ ಡಾ. ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ
ದಾವಣಗೆರೆ, ಜ.10- ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗಾಗಿ ಸಲ್ಲಿಕೆಯಾಗಿರುವ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸುವಂತೆ ಆಗ್ರಹಿಸಿ ನಗರದಲ್ಲಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಕೃಷ್ಣಪ್ಪ ಸ್ಥಾಪಿತ ಬಣದ ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದರು.
ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಕೆಲಕಾಲ ಧರಣಿ ನಡೆಸಿ, ನಂತರ ಬೇಡಿಕೆಗಳ ಈಡೇರಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನ್ಯಾಯಮೂರ್ತಿ ಸದಾಶಿವ ಅವರು ಸತತ ಏಳು ವರ್ಷಕ್ಕೂ ಹೆಚ್ಚು ಕಾಲ ಪರಿಶಿಷ್ಟ ಜಾತಿಗಳ ಸಾಮಾಜಿಕ ಶೈಕ್ಷಣಿಕ ಮತ್ತು ಉದ್ಯೋಗದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ 2012ರಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು. ವರದಿ ಸಲ್ಲಿಕೆಯಾಗಿ 10 ವರ್ಷಗಳೇ ಕಳೆದರೂ ಸಹ ಯಾವ ಸರ್ಕಾರಗಳೂ ಕೂಡ ವರದಿಯನ್ನು ಅಂಗೀಕರಿಸಿ, ಕೇಂದ್ರಕ್ಕೆ ಕಳುಹಿಸಿಲ್ಲ. ವರದಿಯನ್ನು ಸರ್ಕಾರ ತಕ್ಷಣವೇ ಅಂಗೀಕರಿಸಿ 341(3) ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ಚಿಂತಕ ಪ್ರೊ. ಎ.ಬಿ. ರಾಮಚಂದ್ರಪ್ಪ ಆಗ್ರಹಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಜನಪರ ಸಂಘಟನೆಗಳೆಲ್ಲಾ ಒಂದಾಗಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಯಾಗಬೇಕೆಂದು ಹೋರಾಟ ಮಾಡಿದ್ದರ ಪರಿಣಾಮ ಈ ಹಿಂದಿನ ಧರ್ಮಸಿಂಗ್ ನೇತೃತ್ವದ ಸರ್ಕಾರ ಒಂದು ಆಯೋಗವನ್ನು ರಚನೆ ಮಾಡಿ ಆ ಆಯೋಗದ ಅಧ್ಯಕ್ಷರನ್ನಾಗಿ ನ್ಯಾಯಮೂರ್ತಿ ಎ.ಜೆ. ಸದಾಶಿವರವರನ್ನು ನೇಮಕ ಮಾಡಿತ್ತು. ಆಯೋಗ ವರದಿ ನೀಡಿ ದಶಕ ಕಳೆದರೂ ಯಾವ ಸರ್ಕಾರಗಳು ವರದಿ ಜಾರಿ ಮಾಡದೇ ಪರಿಶಿಷ್ಟ ಜಾತಿಯನ್ನು ಕಡೆಗಣಿಸಿವೆ ಎಂದು ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಬೇತೂರು ಗ್ರಾಮ ಪಂಚಾಯಿತಿಗೆ ಸೇರಿದ ಸರ್ವೆ ನಂ. 170 ರ ವಿಸ್ತೀರ್ಣ ಸುಮಾರು 8 ಎಕರೆ 20 ಗುಂಟೆ ಗೋಮಾಳ ಜಾಗದಲ್ಲಿ ಬಿ.ಚಿತ್ತಾನಹಳ್ಳಿ ಹಾಗೂ ಕಲ್ಪನಹಳ್ಳಿ ಯಲ್ಲಿ ವಾಸವಾಗಿರುವ ನಿವೇಶನ ರಹಿತ ಪರಿಶಿಷ್ಟ ಜಾತಿಯ ಬಡ ಕುಟುಂಬದವರಿಗೆ ನಿವೇಶನ ಮಂಜೂರು ಮಾಡಿ ಹಕ್ಕು ಪತ್ರ ನೀಡಬೇಕು. ಗೋಣಿವಾಡ ಸರ್ವೇ ನಂ: 40/2 ರಲ್ಲಿ ದೇವರ ಹೆಸರಿಗೆ ಹರಾಜು ಮಾಡಿರುವ ಜಮೀನನ್ನು ಸುಮಾರು 70 ವರ್ಷ ಗಳಿಂದ ದಲಿತ ಕುಟುಂಬಗಳು ಉಳುಮೆ ಮಾಡಿ ಕೊಂಡು ಬರುತ್ತಿದ್ದು, ಈ ಜಾಗವನ್ನು ಸ್ಮಶಾನಕ್ಕೆ ನೀಡುವ ಹುನ್ನಾರ ನಡೆದಿದೆ. ಈ ಕೂಡಲೇ ಇದನ್ನು ನಿಲ್ಲಿಸಿ ದಲಿತ ಕುಟುಂಬಗಳಿಗೆ ಖಾತೆ ಮತ್ತು ಪಹಣಿ ನೀಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಲಿಂಗರಾಜು ಎಂ, ಅಣಜಿ ಹನುಮಂತಪ್ಪ, ಪ್ರದೀಪ್, ಮಂಜುನಾಥ್, ಹಾಲುವರ್ತಿ ಮಹಾಂತೇಶ್, ಸಣ್ಣ ಅಜ್ಜಯ್ಯ, ಪ್ರದೀಪ್, ವಿಜಯಲಕ್ಷ್ಮಿ, ನಿಂಗಪ್ಪ, ಮಂಜುನಾಥ್ ಲೋಕಿಕೆರೆ, ಗುಮ್ಮನೂರು ಹನುಮಂತಪ್ಪ, ಖಾಲಿದ್, ಮಂಜುನಾಥ್ ಕೈದಾಳೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.