ದಾವಣಗೆರೆ, ಜ.5- ಡಾ.ಶಿವರಾಜ್ ಕುಮಾರ್ ಅವರು ತಮ್ಮ 125ನೇ ಸಿನಿಮಾ `ವೇದ’ ಪ್ರಚಾರಕ್ಕಾಗಿ ಗುರುವಾರ ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಚಿತ್ರತಂಡ ದೊಂದಿಗೆ ನಗರಕ್ಕೆ ಆಗಮಿಸಿದ್ದರು.
ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿಗೆ ಪೂಜೆ ಸಲ್ಲಿಸಿದ ಅವರು, ನಂತರ ತೆರೆದ ವಾಹನದ ಮೂಲಕ ಅಶೋಕ ಚಿತ್ರಮಂದಿರಕ್ಕೆ ತೆರಳಿ, ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿದರು.
`ನಾ ಸುಮ್ನೆ ಬಂದ್ರೆ ಅತಿಥಿ, ಹುಡ್ಕೊಂಡ್ ಬಂದ್ರೆ ನಿಮ್ಗಳ ತಿಥಿ’, `ಟಗರು ಕೋಪ ಬಂದ್ರೆ ಎಗರು’
ಡೈಲಾಗ್ ಹೇಳುವ ಮೂಲಕ
ಪ್ರೇಕ್ಷಕರನ್ನು ರಂಜಿಸಿದರು, ಅಷ್ಟೇ ಅಲ್ಲ, `ಆಡಿಸಿಯೇ ನೋಡು, ಬೀಳಿಸಿಯೇ ನೋಡು…’ `ಎಲ್ಲಿಂದ ಬಂದ್ನಪ್ಪೋ …’ ಹಾಡುಗಳನ್ನು ಹೇಳಿ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡರು.
ನನ್ನ 125ನೇ ಚಿತ್ರ ವೇದದಲ್ಲಿ ಉತ್ತಮ ಸಂದೇಶವಿದೆ. ಮಹಿಳೆಯರಿಗಾಗಿ ಮಾಡಿದ ಚಿತ್ರವಿದು. ಮಹಿಳೆಯರನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಚಿತ್ರ ಮಹಿಳೆಯರಲ್ಲಿ ಧೈರ್ಯ ತುಂಬಲಿದೆ ಎಂದು ಹೇಳಿದರು.
ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್
ಸಿಕ್ಕಿದೆ. ಸಿನಿಮಾದ ಸಂದೇಶವನ್ನು ಜನತೆ ಚೆನ್ನಾಗಿ ಸ್ವೀಕರಿಸಿದ್ದಾರೆ, ಅದು ಹೆಮ್ಮೆಯ ವಿಚಾರ. ಕುಟುಂಬ ಸಹಿತ ಕುಳಿತು ನೋಡಬೇಕಾದ ಸಿನಿಮಾ ಇದು ಎಂದು ಹೇಳಿದರು.
ಚಿತ್ರ ನೂರು ದಿನ ಓಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶಿವರಾಜ್ ಕುಮಾರ್, ನೂರನೇ ದಿನದ ಸಂಭ್ರಮಕ್ಕೆ ಮತ್ತೊಮ್ಮೆ ದಾವಣಗೆರೆಗೆ ಬರುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಭಿಮಾನಿಗಳು ಬೃಹತ್ ಹಾರ ಹಾಕಿ ಶಿವಣ್ಣ ಅವರನ್ನು ಅಭಿನಂದಿಸಿದರು.
ಚಿತ್ರದ ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್, ಶಿವಣ್ಣನ ಮಗಳಾಗಿ ನಟಿಸಿರುವ ಅದಿತಿ ಸಾಗರ್, ಗಾನವಿ ಲಕ್ಷ್ಮಣ್, ಚಿತ್ರಮಂದಿರದ ಲಕ್ಷ್ಮೀಕಾಂತ ರೆಡ್ಡಿ, ವ್ಯವಸ್ಥಾಪಕ ಕರಿಸಿದ್ದಯ್ಯ, ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಯೋಗೀಶ್ ಇತರರು ಉಪಸ್ಥಿತರಿದ್ದರು.