ಕೆ.ಆರ್. ಮಾರುಕಟ್ಟೆಯಲ್ಲಿನ ನೂತನ ಮಳಿಗೆಗಳು ಪಾಲಿಕೆಗೆ ಹಸ್ತಾಂತರ
ದಾವಣಗೆರೆ, ಜ.5- ಸ್ಮಾರ್ಟ್ ಸಿಟಿ ಯೋಜನೆ ಯಡಿ ಸಾಕಷ್ಟು ಹಣ ಖರ್ಚು ಮಾಡಿ ನಿಮಗಾಗಿ ಮಳಿಗೆಗಳನ್ನು ನಿರ್ಮಿಸಿ ಕೊಡಲಾಗಿದೆ. ವ್ಯಾಪಾರ ಮಾಡುವ ಜೊತೆಗೆ ಮಾರುಕಟ್ಟೆಯ ಸ್ವಚ್ಛತೆಯನ್ನೂ ಕಾಪಾಡಿಕೊಳ್ಳಿ ಎಂದು ವ್ಯಾಪಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹೇಳಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 25.50 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಟ್ಟಡದಲ್ಲಿ ರುವ ಮಳಿಗೆಗಳನ್ನು ಎಪಿಎಂಸಿಯಿಂದ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಸಂಸದ ಸಿದ್ದೇಶ್ವರ ಹಾಗೂ ಶಾಸಕ ರವಿಂದ್ರ ನಾಥ್ ಅವರು ಇಲ್ಲಿನ ವ್ಯಾಪಾರಿಗಳ ಕಷ್ಟವನ್ನು ನನ್ನ ಗಮನಕ್ಕೆ ತಂದಿದ್ದರು. ರಸ್ತೆ ಬದಿಯಲ್ಲಿಯೇ ವ್ಯಾಪಾರ ಮಾಡುವವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡ ಬೇಕೆಂದು ತಿಳಿಸಿದ್ದರು. ಅವರ ಒತ್ತಾಸೆ ಮೇರೆಗೆ ಇದೀಗ ನೂತನ ಸುಸಜ್ಜಿತ ಮಳಿಗೆಗಳು ನಿರ್ಮಾಣಗೊಂಡಿವೆ ಎಂದರು.
ಮಳಿಗೆ ನಿರ್ಮಾಣದ ಜೊತೆಗೆ ಪಾರ್ಕಿಂಗ್ ಸೇರಿದಂತೆ, ಮೂಲಭೂತ ಸೌಕರ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದೆ. ಇದರ ಸದುಪಯೋಗ ಪಡೆದು ಕೊಳ್ಳಿ. ಜೊತೆಗೆ ನಿಮ್ಮ ಮನೆಯಂತೆಯೇ ಭಾವಿಸಿ ಸ್ವಚ್ಛವಾಗಿ ಇಟ್ಟುಕೊಳ್ಳಿ. ನಾನು ಮತ್ತೊಮ್ಮೆ ಬಂದು ಇಲ್ಲಿನ ಸ್ವಚ್ಷತೆಯನ್ನು ಗಮನಿಸುತ್ತೇನೆ ಎಂದು ಹೇಳಿದರು.
25.50 ಕೋಟಿ ರೂ. ವೆಚ್ಚದ ಸುಸಜ್ಜಿತ ಕಟ್ಟಡ
254 ಮಳಿಗೆ, ಮೇಲ್ಗಡೆ ಪಾರ್ಕಿಂಗ್, ಲಿಫ್ಟ್ ಸೌಲಭ್ಯ
ದಾವಣಗೆರೆ ಕೆ.ಆರ್. ಮಾರುಕಟ್ಟೆಯಲ್ಲಿ 2554.32 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಪ್ರಿಕ್ಯಾಸ್ಟಿಂಗ್ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಈ ಕಟ್ಟಡವು ನೆಲ ಮಹಡಿಯಲ್ಲಿ 10×10 ಅಡಿ ಅಳತೆಯುಳ್ಳ 138 ಮಳಿಗೆಗಳು, ಮೊದಲನೇ ಮಹಡಿಯಲ್ಲಿ 10×10 ಅಡಿ ಅಳತೆಯ 116 ಮಳಿಗೆಗಳು ಸೇರಿ ಒಟ್ಟು 254 ಮಳಿಗೆಗಳನ್ನು ಹೊಂದಿದೆ.
ಎರಡನೇ ಮಹಡಿಯಲ್ಲಿ 50 ಲಘು ವಾಹನಗಳು ಹಾಗೂ 200 ದ್ವಿಚಕ್ರ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಮೇಲ್ಛಾವಣಿಯನ್ನು ಅಂಗ್ಯುಲರ್ ಟ್ರಿಸ್ ಹಾಗೂ ಗ್ಯಾಲ್ವಾನಿಯಂ ಶೀಟ್ಗಳಿಂದ ನಿರ್ಮಾಣ ಮಾಡಲಾಗಿದೆ. ಮುಚ್ಚು ಹರಾಜು ಕಟ್ಟೆಯಲ್ಲಿ ನೆಲ ಮಹಡಿಯಲ್ಲಿ 2 ಕಡೆ ಹಾಗೂ ಮೊದಲ ಮಹಡಿಯಲ್ಲಿ 2 ಕಡೆ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ಕಲ್ಪಿಸಲಾಗಿದೆ.
ವಿದ್ಯುತ್ ಸೌಲಭ್ಯ ಹಾಗೂ 2 ಲಿಫ್ಟ್ಗಳನ್ನೂ ಅಳವಡಿಸಿದ್ದು, ಮುಂದೆ ಎಲಿವೇಟರ್ ಅಳವಡಿಸಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಗುರುವಾರ ಇಲ್ಲಿನ ಮಳಿಗೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಎಪಿಎಂಸಿಯಿಂದ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಮಹಾನಗರ ಪಾಲಿಕೆಯವರು ನೂತನ ಮಳಿಗೆಗಳನ್ನು ಅರ್ಹರಿಗೆ ಮಾತ್ರ ನೀಡಬೇಕು ಎಂದು ಹೇಳಿದರು.
ನಬಾರ್ಡ್ ನಿಂದ ಶೇ.90 ಹಾಗೂ ಎಪಿಎಂಸಿ ಯಿಂದ ಶೇ.10ರಷ್ಟು ಹಣ ಸೇರಿ ಒಟ್ಟು ಇಪ್ಪತ್ತೈದು ವರೆ ಕೋಟಿ ರೂ. ವೆಚ್ಚದಲ್ಲಿ 254 ಮಳಿಗೆಗಳನ್ನು ನಿರ್ಮಿಸಲಾಗಿದೆ. ಯಾರದೋ ಒತ್ತಡಕ್ಕೆ ಮಣಿದು ಅಪ್ಪನಿಗೊಂದು, ಮಗನಿಗೊಂದು, ಹೆಂಡತಿಗೊಂದು ಎಂದು ಒಂದೇ ಕುಟುಂಬದವರಿಗೆ ಮೂರ್ನಾಲ್ಕು ಮಳಿಗೆಗಳನ್ನು ವಿತರಿಸಬೇಡಿ. ನಿಜವಾಗಿ ವ್ಯಾಪಾರ ಮಾಡುವವರಿಗೆ ಮಾತ್ರ ಒಬ್ಬರಿಗೆ ಒಂದು ಮಳಿಗೆ ನೀಡಬೇಕು ಎಂದು ಹೇಳಿದು.
ಐದು, ಹತ್ತು ಮಳಿಗೆ ಪಡೆದು ಬೇರೆಯವರಿಗೆ ಬಾಡಿಗೆಗೆ ನೀಡಿ ಹಣ ಮಾಡಿಕೊಳ್ಳುವ ದಂಧೆ ನಡೆಯುತ್ತದೆ. ನನಗೂ ಐದು ಮಳಿಗೆಗಳನ್ನು ಕೊಡಿ ಎಂದು ಅನೇಕರು ಕೇಳಿದ್ದಾರೆ. ನಾನು ನಿರಾಕರಿಸಿದ್ದೇನೆ. ಪಾಲಿಕೆಯಿಂದ ಮಳಿಗೆಗಳನ್ನು ವಿತರಿಸಿದ ಪಟ್ಟಿಯನ್ನು ನನಗೆ ನೀಡಬೇಕು ಎಂದು ಸೂಚಿಸಿದರು.
ಬಡವರಿಗೆ ಅನುಕೂಲವಾಗಲೆಂದು ನಾವು ಪ್ರಾಮಾಣಿಕವಾಗಿ ಶ್ರಮಿಸಿ, ಮಳಿಗೆಗಳನ್ನು ನಿರ್ಮಿಸಿದ್ದೇವೆ. ಹಾಗೆಯೇ ಜಿಲ್ಲಾಧಿಕಾರಿಗಳು, ಪಾಲಿಕೆ ಮೇಯರ್ ಹಾಗೂ ಸದಸ್ಯರು, ಆಯುಕ್ತರೂ ಸಹ ಪ್ರಾಮಾಣಿಕವಾಗಿ ಅರ್ಹರಿಗೆ ಮಳಿಗೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಅವಧಿಯೊಳಗೆ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಸ್ಮಾರ್ಟ್ ಸಿಟಿ ವ್ಯವಸ್ಥಾಪಕರು ಯಾವುದೇ ಸಬೂಬು ಹೇಳಬಾರದು ಎಂದ ಸಿದ್ದೇಶ್ವರ್, ಜನವರಿ ತಿಂಗಳೊಳಗೆ ಖಾಸಗಿ ಬಸ್ ನಿಲ್ದಾಣ, ಫೆಬ್ರವರಿ ಮೊದಲ ವಾರದಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಹಾಗೂ ಬೇತೂರು ಬಸ್ ನಿಲ್ದಾಣ ಲೋಕಾರ್ಪಣೆಗೆ ಸಿದ್ಧವಾಗಬೇಕು. ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಎ.ಚನ್ನಪ್ಪ, ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ, ಆಯುಕ್ತ ವಿಶ್ವನಾಥ ಮುದಜ್ಜಿ, ಸದಸ್ಯ ಕೆ.ಎಂ. ಸುರೇಶ್, ದೂಡಾ ಅಧ್ಯಕ್ಷ ಎ.ವೈ ಪ್ರಕಾಶ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಉಪ ವಿಭಾಗಾಧಿಕಾರಿ ದುರ್ಗಶ್ರೀ, ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ಜೆ.ಪ್ರಭು, ಎಪಿಎಂಸಿ ಕಾರ್ಯದರ್ಶಿ ಕೆ.ಸಿ. ದೊರೆಸ್ವಾಮಿ ಇತರರು ಉಪಸ್ಥಿತರಿದ್ದರು.