ಜಿಲ್ಲೆಯಲ್ಲಿ ಈಗ 14 ಲಕ್ಷ ಮತದಾರರು

ಜಿಲ್ಲೆಯಲ್ಲಿ ಈಗ 14 ಲಕ್ಷ ಮತದಾರರು

ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ಯುವ ಮತದಾರರೇ ಹೆಚ್ಚು ಸೇರ್ಪಡೆ

ದಾವಣಗೆರೆ, ಜ. 5- ಜಿಲ್ಲೆಯ ಮತ ದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪೂರ್ಣಗೊಂಡಿದ್ದು, ಅಂತಿಮ ಪಟ್ಟಿಯಲ್ಲಿ ಮತದಾರರ ಸಂಖ್ಯೆ 17,276ರಷ್ಟು ಹೆಚ್ಚಾಗಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 14.05 ಲಕ್ಷ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ನವೆಂಬರ್ 9ರಂದು ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ 13,88,434 ಮತದಾರರಿದ್ದರು. ಅಂತಿಮ ಪಟ್ಟಿಯಲ್ಲಿ 14,05,710 ಮತದಾರರಿದ್ದಾರೆ ಎಂದು ಹೇಳಿದರು.

ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 1,89,209, ಹರಿಹರದಲ್ಲಿ 2,02,813, ದಾವಣಗೆರೆ ಉತ್ತರದಲ್ಲಿ 2,32,014, ದಕ್ಷಿಣದಲ್ಲಿ 2,04,442, ಮಾಯಕೊಂಡದಲ್ಲಿ 1,87,676, ಚನ್ನಗಿರಿಯಲ್ಲಿ 1,95,797 ಹಾಗೂ ಹೊನ್ನಾಳಿಯಲ್ಲಿ 1,93,763  ಮತದಾರರಿದ್ದಾರೆ.

ಪುರುಷ ಮತದಾರರ ಸಂಖ್ಯೆ 7,05,23, ಮಹಿಳಾ ಮತದಾರರು 7,00,357 ಹಾಗೂ ಇತರರು 120. ಜಿಲ್ಲೆಯಲ್ಲಿ ಪ್ರತಿ ಸಾವಿರ ಪುರುಷ ಮತದಾರರಿಗೆ 993 ಮಹಿಳಾ ಮತದಾರರಿದ್ದಾರೆ ಎಂದವರು ಹೇಳಿದರು.

ತಿದ್ದುಪಡಿಗಿದೆ ಅವಕಾಶ : 2023ರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕಕ್ಕೆ 10 ದಿನದ ಮುಂಚಿನವರೆಗೂ ತಿದ್ದುಪಡಿ ಹಾಗೂ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಯುವ ಸೇರ್ಪಡೆಯೇ ಹೆಚ್ಚು : ಪರಿಷ್ಕರಣೆ ವೇಳೆ ಸೇರ್ಪಡೆಯಾದವರಲ್ಲಿ ಯುವ ಮತದಾರರೇ ಹೆಚ್ಚಾಗಿದ್ದಾರೆ. 18 ಹಾಗೂ 19 ವರ್ಷದ 13,973 ಮತದಾರರು ಸೇರ್ಪಡೆಯಾಗಿದ್ದಾರೆ. ಈ ವಯೋಮಾನದ ಮತದಾರರ ಸಂಖ್ಯೆ ಜಿಲ್ಲೆಯಲ್ಲೀಗ 23,139.

ಶೇ.74.3ರ ಆಧಾರ್ ಜೋಡಣೆ : ಇದುವರೆಗೂ 10.44 ಲಕ್ಷ ಮತದಾರರ ಮಾಹಿತಿಯನ್ನು ಆಧಾರ್‌ಗೆ ಜೋಡಣೆ ಮಾಡಲಾಗಿದೆ. ಇದು ಒಟ್ಟು ಮತದಾರರ ಶೇ.74.3ರಷ್ಟಾಗಿದೆ.

ಯುವ ಸೇರ್ಪಡೆ ಅಭಿಯಾನ : 18 ವರ್ಷ ತುಂಬಲಿರುವ ಯುವ ಮತದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಶುಕ್ರವಾರದಿಂದ ಅಭಿಯಾನ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಾಪಶಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಉಪ ವಿಭಾಗಾಧಿಕಾರಿ ದುರ್ಗಾಶ್ರೀ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಚುನಾವಣಾ ಸಮನ್ವಯ ಅಧಿಕಾರಿ ರೇಷ್ಮ ಹಾನಗಲ್ ಉಪಸ್ಥಿತರಿದ್ದರು.

error: Content is protected !!