ಸಿರಿಗೆರೆಯಲ್ಲಿ ಕ್ರೀಡಾ ಮೇಳಕ್ಕೆ ಚಾಲನೆ ನೀಡಿದ ತರಳಬಾಳು ಶ್ರೀ
ಸಿರಿಗೆರೆ, ಡಿ. 29- ಆಕಾಶ ಕಾಯಗಳು ಹೇಗೆ ನಿರ್ದಿಷ್ಟವಾಗಿ ಸಂಚರಿಸುತ್ತವೋ ಹಾಗೆ ಜೀವನದಲ್ಲಿ ನಿರ್ದಿಷ್ಟ ದಾರಿ, ಪಥ, ಗುರಿ ಇರಲಿ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ವತಿಯಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗಾಗಿ ಸಿರಿಗೆರೆಯ ಬಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ಕ್ರೀಡಾ ಮೈದಾನದಲ್ಲಿ ಜರುಗಿದ ತರಳಬಾಳು ಕ್ರೀಡಾಮೇಳಕ್ಕೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು.
ಶಾರೀರಿಕವಾಗಿ, ಸದೃಢವಾಗಿ ಇರುವುದರ ಜೊತೆಗೆ ಸ್ಪರ್ಧೆಯ ತುಡಿತ ಎಲ್ಲರಲ್ಲೂ ಇರಬೇಕು. ನಿಮ್ಮ ಬದುಕು ಉದುರುವ ಹಣ್ಣೆಲೆ ಆಗಬಾರದು, ಚಿಗುರೆಲೆಯಂತಿರಬೇಕು. ಜೀವನದಲ್ಲಿ ನಿರ್ದಿಷ್ಟ ಗೊತ್ತು ಗುರಿಗಳನ್ನು ನಿಗದಿಪಡಿಸಿಕೊಂಡು ಸಾಧನಾ ಪಥದ ಕಡೆಗೆ ಸಾಗಬೇಕು ಎಂದು ಹೇಳಿದರು.
ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಪ್ರತಿಯೊಬ್ಬರು ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ಉತ್ತಮ ಆರೋಗ್ಯ, ಧನಾತ್ಮಕ ಪಾಲುಗಾರಿಕೆ ಬಹುಮುಖ್ಯ. ಕ್ರೀಡೆಯು ಸಹ ಒಂದು ಶಿಕ್ಷಣ. ಗೆಲ್ಲುವುದಕ್ಕಿಂತ ಭಾಗವಹಿಸುವುದು ಮುಖ್ಯ ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಬಿ.ಡಿ.ಕುಂಬಾರ್ ಮಾತನಾಡಿ, ಕ್ರೀಡಾ ಪಟುಗಳನ್ನು ರೋಲ್ ಮಾಡಲ್ ಆಗಿ ಸ್ವೀಕರಿಸಬೇಕು ಎಂದರು.
ಏಕಲವ್ಯ ಪ್ರಶಸ್ತಿ ಪುರಸ್ಕೃತ ಬಾಸ್ಕೆಟ್ ಬಾಲ್ ರಾಷ್ಟ್ರೀಯ ಕ್ರೀಡಾಪಟು ಸಂಜಯ್ ರಾಜ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವ, ಕಠಿಣ ಕೆಲಸಗಳನ್ನೂ ಮಾಡುವ ಇಚ್ಛೆ ಇರಬೇಕು. ಕ್ರೀಡೆಯಿಂದ ಬೌದ್ಧಿಕ ಸಾಮರ್ಥ್ಯ ಹಾಗೂ ಏಕಾಗ್ರತೆ ಹೆಚ್ಚುತ್ತದೆ. ಕ್ರೀಡೆಗೆ ಫಿಟ್ನೆಸ್ ಅಗತ್ಯ. ಎಲ್ಲರಿಗೂ ಗೆಲುವಿನ ಕಡೆಗೆ ತುಡಿತವಿರಬೇಕು. ಅಂತಹ ಮಕ್ಕಳನ್ನು ಪೋಷಕರು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮುಖ್ಯಸ್ಥರಾದ ಡಾ. ಕೆ.ವೆಂಕಟೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ರೀಡಾ ಮಾದರಿಗಳ ಪ್ರದರ್ಶನ ಮಾಡಲಾಗಿತ್ತು. ಕರಾಟೆ, ಕುಸ್ತಿ, ಕೇರಳದ ಕಲಾಟಿ, ಲೇಜಿಮ್ಸ್ ಪ್ರದರ್ಶಿಸಿದರು. ಪಥ ಸಂಚಲನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಜಾನಪದ ಕಲಾತಂಡಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಚೆನ್ನೈನ ನಿವೃತ್ತ ಪ್ರೊ. ಜಿ.ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಎಸ್.ಬಿ.ರಂಗನಾಥ್, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್.ಎ. ವಾಮದೇವಪ್ಪ ಇತರರು ಉಪಸ್ಥಿತರಿದ್ದರು.