ಜೀವನ ಅವಕಾಶಗಳ ಆಗರ, ಅನುಭವಗಳ ಸಾಗರ-ಕದಳಿ ವೇದಿಕೆ ವಾರ್ಷಿಕೋತ್ಸವದಲ್ಲಿ `ಕದಳಿ ಶ್ರೀ’ ಪ್ರಶಸ್ತಿ ಸ್ವೀಕರಿಸಿದ ಪ್ರೊ.ಟಿ. ನೀಲಾಂಬಿಕೆ

ಜೀವನ ಅವಕಾಶಗಳ ಆಗರ, ಅನುಭವಗಳ ಸಾಗರ-ಕದಳಿ ವೇದಿಕೆ ವಾರ್ಷಿಕೋತ್ಸವದಲ್ಲಿ `ಕದಳಿ ಶ್ರೀ’ ಪ್ರಶಸ್ತಿ ಸ್ವೀಕರಿಸಿದ ಪ್ರೊ.ಟಿ. ನೀಲಾಂಬಿಕೆ

ದಾವಣಗೆರೆ, ಜ. 9- ಜೀವನ ಅವಕಾಶಗಳ ಆಗರ ಹಾಗೂ ಅನುಭವಗಳ ಸಾಗರ ಎಂದು ಕದಳಿ ಶ್ರೀ ಪ್ರಶಸ್ತಿ ಪುರಸ್ಕೃತೆ, ವಾಗ್ಮಿ, ರಂಗಕಲಾವಿದೆ ಪ್ರೊ.ಟಿ. ನೀಲಾಂಬಿಕೆ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಕದಳಿ ಮಹಿಳಾ ವೇದಿಕೆ 15ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ `ಕದಳಿ ಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಜೀವನದಲ್ಲಿ ಬರುವ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಅವಕಾಶ ದೊರೆತಾಗ ಮುನ್ನುಗ್ಗುವಂತೆ ಪ್ರೇರಣೆ ನೀಡಲು ಗುರುವಿರಬೇಕು. ಅದು ಹೆತ್ತವರಾಗಲೀ, ಶಿಕ್ಷಕರಾಗಲೀ ಅಥವಾ ಯೋಗಿಯೇ ಆಗಿರಲಿ ಎಂದರು. ಮನು ಷ್ಯನಿಗೆ ಜೀವನದಲ್ಲಿ ಉತ್ಸಾಹ ಇಲ್ಲದೇ ಇದ್ದರೆ ಜೀವನ ವ್ಯರ್ಥ ಎಂದು ಹೇಳಿದರು.

ಮಕ್ಕಳಲ್ಲಿ ಚಿಂತನಾ ಶಕ್ತಿ, ಪ್ರಶ್ನಿಸುವ ಮನೋಭಾವ ಬೆಳೆಸಬೇಕು. ಪ್ರಶ್ನೆ ಕೇಳಿದರೆ ನನಗೆ ಉತ್ತರ ಗೊತ್ತಿಲ್ಲ ಎಂದು ಹೇಳುವ ಮೂಲಕ ಅವರಲ್ಲಿನ ಚಿಂತನಾ ಶಕ್ತಿಗೆ ತಣ್ಣೀರು ಹಾಕುವ ಕೆಲಸ ಮಾಡಬಾರದು. ಉತ್ತರ ಗೊತ್ತಿರದ ಪಕ್ಷದಲ್ಲಿ ತಿಳಿದು ಹೇಳಬೇಕು ಎಂದು ಇದೇ ವೇಳೆ ನೀಲಾಂಬಿಕೆ ಅವರು ಪೋಷಕರಿಗೆ ಸಲಹೆ ನೀಡಿದರು.

ಗದಗದ ಆದಿಶಕ್ತಿ ನಗರ ಅಧ್ಯಾತ್ಮ ವಿದ್ಯಾಶ್ರಮದ ಡಾ.ನೀಲಮ್ಮ ತಾಯಿ ಅಸುಂಡಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಪ್ರೊ.ಸುಧಾ ಹುಚ್ಚಣ್ಣನವರ್, ರಾಜ್ಯ ಸಮಿತಿ ಉಪ ಸಂಚಾಲಕರಾದ ಪ್ರಮೀಳಾ ನಟರಾಜ್, ಸಲಹಾ ಸಮಿತಿ ಸದಸ್ಯರಾದ ಕಿರುವಾಡಿ ಗಿರಿಜಮ್ಮ, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ವೇದಿಕೆ ಮೇಲಿದ್ದರು.

ಇದೇ ವೇಳೆ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನೂತನ ಪದಾಧಿಕಾರಿಗಳ ಪದಗ್ರಹಣ, ಅಭಿನಂದನಾ ಕಾರ್ಯಕ್ರಮ ನೆರವೇರಿತು.

ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷೆ ಗಾಯತ್ರಿ ವಸ್ತ್ರದ್ ಸ್ವಾಗತಿಸಿದರು. ಜಿಲ್ಲಾಧ್ಯಕ್ಷೆ ವಿನೋದ ಅಜಗಣ್ಣನವರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿ ದಾನಿಗಳಾದ ಯಶಾ ದಿನೇಶ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿಕೊಟ್ಟರು. ಪೂರ್ಣಿಮಾ ಪ್ರಸನ್ನ ಕುಮಾರ್ ದತ್ತಿ ದಾನಿಗಳನ್ನು  ಪರಿಚಯಿಸಿದರು. ಸೌಮ್ಯ ಸತೀಶ್ ಅಭಿನಂದನಾ ಕಾರ್ಯಕ್ರಮ ನಡೆಸಿಕೊಟ್ಟರು. ನಂದಿನಿ ಗಂಗಾಧರ್ ಸೇವಾ ಕಾರ್ಯಕ್ರಮ ನಡೆಸಿಕೊಟ್ಟರು. ಮಮತಾ ನಾಗರಾಜ್, ವಸಂತ ಕೆ.ಆರ್. ನಿರೂಪಿಸಿದರು. ವಾಣಿ ರಾಜ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ರತ್ನಾ ಸಿ. ರೆಡ್ಡಿ ವಂದಿಸಿದರು.

error: Content is protected !!