ಭಾನುವಳ್ಳಿ : ರಾತ್ರೋರಾತ್ರಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ : ಹೆದ್ದಾರಿ ತಡೆದು ಪ್ರತಿಭಟನೆ

ಭಾನುವಳ್ಳಿ : ರಾತ್ರೋರಾತ್ರಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ : ಹೆದ್ದಾರಿ ತಡೆದು ಪ್ರತಿಭಟನೆ

ಮಲೇಬೆನ್ನೂರು, ಜ.9- ವಾಲ್ಮೀಕಿ ವೃತ್ತದ ಪಕ್ಕದಲ್ಲೇ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ರಾತ್ರೋರಾತ್ರಿ ಪ್ರತಿಷ್ಠಾ ಪಿಸಿರುವುದನ್ನು ಖಂಡಿಸಿ ಬೆಳ್ಳಂಬೆಳಗ್ಗೆಯೇ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಘಟನೆ ಭಾನುವಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಂದಿಗುಡಿ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದ ರಾಜಾ ವೀರ ಮದಕರಿ ನಾಯಕ ಮಹಾದ್ವಾರದ ಬಳಿ ವ್ಯಕ್ತಿಯೊಬ್ಬರ ಮನೆ ಮುಂಭಾಗದಲ್ಲಿ ಒಂದು ಕೋಮಿನ ಯುವಕರು ಸೋಮವಾರ ತಡರಾತ್ರಿ ಸಿಮೆಂಟ್‌ ಕಟ್ಟೆ ಕಟ್ಟಿ ಅದರ ಮೇಲೆ ಸಂಗೊಳ್ಳಿ ರಾಯಣ್ಣನ ಸಣ್ಣ ಪ್ರತಿಮೆಯನ್ನು ಪ್ರತಿಷ್ಟಾಪಿಸಿ, ರಾಷ್ಟ್ರ ಬಾವುಟವನ್ನೂ ಕಟ್ಟಿದ್ದಾರೆ. 

ಮಂಗಳವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಇದನ್ನು ನೋಡಿ ಶಾಕ್‌ ಆದ ಇನ್ನೊಂದು ಕೋಮಿನ ನೂರಾರು ಜನ ಸೇರಿಕೊಂಡು ನಂದಿಗುಡಿ ರಸ್ತೆಯನ್ನು ಬಂದ್‌ ಮಾಡಿ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿದರು.ಭಾನುವಳ್ಳಿ : ರಾತ್ರೋರಾತ್ರಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ : ಹೆದ್ದಾರಿ ತಡೆದು ಪ್ರತಿಭಟನೆ - Janathavani

ಮಲೇಬೆನ್ನೂರು ಪಿಎಸ್‌ಐ ಪ್ರಭು ಕೆಳಗಿನಮನಿ ಅವರು ಸ್ಥಳಕ್ಕೆ ಆಗಮಿಸಿ, ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಇದಕ್ಕೆ ಒಪ್ಪದಿದ್ದಾಗ ಮತ್ತು ಪ್ರತಿಭಟನೆ ಜೋರಾಗುತ್ತಿರುವ ವಿಷಯ ತಿಳಿದ ಎಎಸ್ಪಿ ವಿಜಯಕುಮಾರ್‌, ಸಂತೋಷ್‌, ಗ್ರಾಮಾಂತರ ಡಿವೈಎಸ್ಪಿ ಬಸವರಾಜ್‌, ಸಿಪಿಐ ದೇವಾನಂದ್‌, ಹರಿಹರ ತಾ.ಪಂ. ಇಓ ರಮೇಶ್‌, ಕಂದಾಯ ನಿರೀಕ್ಷಕ ಆನಂದ್‌, ಗ್ರಾ.ಪಂ. ಅಧ್ಯಕ್ಷ ಮಹೇಶ್‌ ಪಟೇಲ್‌, ಪಿಡಿಓ ಬೀರೇಶ್‌, ಗ್ರಾಮಲೆಕ್ಕಾಧಿಕಾರಿ ಶಿವಪ್ರಕಾಶ್‌, ಗ್ರಾ.ಪಂ. ಕಾರ್ಯದರ್ಶಿ ಉಮೇಶ್‌ ಸ್ಥಳಕ್ಕೆ ಆಗಮಿಸಿ, ಪ್ರತಿಭಟನೆ ನಡೆಸುತ್ತಿರುವವರ ಜೊತೆ ಮಾತನಾಡಿದರು. 

ನಂತರ ಬೀರಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಇಟ್ಟಿರುವ ಸಮಾಜದವರ ಜೊತೆ ಸುದೀರ್ಘ ಚರ್ಚೆ ನಡೆಸಿ, ಹೀಗೆ ಏಕಾಏಕಿ ಪ್ರತಿಮೆ ಇಟ್ಟಿರುವುದು ಸರಿಯಲ್ಲ. ಸ್ವಂತ ಜಾಗವಾಗಿದ್ದರೂ ಸ್ವಾತಂತ್ರ್ಯ ಹೋರಾಟಗಾರರಾದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಇಡಲು ಇಲಾಖೆಯವರ ಅನುಮತಿ ಪಡೆದುಕೊಳ್ಳಬೇಕು. ನಾಳೆ ಪ್ರತಿಮೆಗೆ ಯಾರಾದರೂ ದಕ್ಕೆ ಮಾಡಿದರೆ ಯಾರು ಹೊಣೆ ಎಂದು ಪ್ರಶ್ನಿಸಿ ಪ್ರತಿಮೆಯನ್ನು ತೆರವುಗೊಳಿಸುವಂತೆ ಮನವಿ ಮಾಡಿದರು. ಆದರೆ, ಪ್ರತಿಮೆ ತೆರವು ಮಾಡಲು ಸಮಾಜದವರು ಒಪ್ಪಲಿಲ್ಲ. ನಾವು ನಮ್ಮ ಸ್ವಂತ ಜಾಗದಲ್ಲಿ ಪ್ರತಿಮೆ ಇಟ್ಟಿದ್ದೇವೆ. ಇದರಿಂದ ಬೇರೆಯವರಿಗೆ ತೊಂದರೆ ಆಗಲ್ಲ ಎಂಬ ವಾದ ಮಂಡಿಸಿದರು ಎನ್ನಲಾಗಿದೆ.

ಪ್ರತಿಭಟನೆ ನಡೆಸಿದ ಇನ್ನೊಂದು ಸಮಾಜದ ಮುಖಂಡ ಟಿ. ಪುಟ್ಟಪ್ಪ ಮಾತನಾಡಿ, 1999 ರಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪುಣ್ಯಾನಂದ ಪುರಿ ಶ್ರೀಗಳ ಸಾನ್ನಿಧ್ಯದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಅಂದಿನ ಸಚಿವ ಹೆಚ್‌. ಶಿವಪ್ಪ ಅವರು ಈ ವೃತ್ತವನ್ನು ಉದ್ಘಾಟಿಸಿರುವ ಬಗ್ಗೆ ದಾಖಲೆಗಳಿವೆ. ಇದು ಆಗಿ ಈಗ 24 ವರ್ಷಗಳಾಗಿವೆ. ಇಷ್ಟು ದಿವಸ ಸುಮ್ಮನಿದ್ದ ನಮ್ಮ ಸಹೋದರ ಸಮಾಜದ ಕೆಲವರು ಕಳೆದ 2-3 ತಿಂಗಳಿನಿಂದಲೂ ವಾಲ್ಮೀಕಿ ವೃತ್ತದ ಬಳಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸುವ ಪ್ರಯತ್ನ ಮಾಡಿದ್ದರು.

ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಪ್ರತಿಷ್ಠಾಪಿಸಲು ನಮ್ಮ ವಿರೋಧವಿಲ್ಲ. ಆದರೆ ಇಲ್ಲಿ ಬೇಡ, ಇಲ್ಲಿಂದ ಸ್ವಲ್ಪ ದೂರದಲ್ಲಿ ಇನ್ನೊಂದು ಸರ್ಕಲ್‌ ಇದೆ. ಅಲ್ಲಿ ಪ್ರತಿಷ್ಟಾಪಿಸಿ ಇಲ್ಲಿ ಈಗಾಗಲೇ ವಾಲ್ಮೀಕಿ ವೃತ್ತ ಇದೆ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳ ಗಮನಕ್ಕೆ ಅದನ್ನು ತಂದೆವು. ಈಗ ಏಕಾಏಕಿ ಅನಧಿಕೃತವಾಗಿ ಪ್ರತಿಮೆ ಪ್ರತಿಷ್ಟಾಪಿಸುವ ಮೂಲಕ ಗ್ರಾಮದಲ್ಲಿರುವ ಸಾಮರಸ್ಯಕ್ಕೆ ದಕ್ಕೆ ಉಂಟು ಮಾಡಿದ್ದಾರೆ ಎಂದು ಪುಟ್ಟಪ್ಪ ಬೇಸರ ವ್ಯಕ್ತಪಡಿಸಿದರು.

ಏತನ್ಮಧ್ಯೆ, ಉಪವಿಭಾಗಾಧಿಕಾರಿ ಶ್ರೀಮತಿ ದುರ್ಗಾಶ್ರೀ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಮೆ ಪ್ರತಿಷ್ಟಾಪಿಸಿರುವುದನ್ನು ಪರಿಶೀಲಿಸಿ, ನಂತರ ಗ್ರಾ.ಪಂ. ಕಛೇರಿಯಲ್ಲಿ ಎರಡೂ ಸಮಾಜದ ಮುಖಂಡರ ಸಭೆ ನಡೆಸಿದರು.  

ಹರಿಹರ ತಾ. ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಜಿಗಳಿ ರಂಗಪ್ಪ, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಬಿಳಸನೂರು ಚಂದ್ರಪ್ಪ, ಬೆಣ್ಣೇರ ನಂದ್ಯೆಪ್ಪ, ಕೊಕ್ಕನೂರಿನ ಸೋಮಶೇಖರ್‌, ಹರಿಹರದ ಭರತ್‌, ಪಾರ್ವತಿ ಬೋರಯ್ಯ, ಗೌರಮ್ಮ, ಹರಳಹಳ್ಳಿ ಮಂಜು, ಉಕ್ಕಡಗಾತ್ರಿ ಮಂಜು, ಗ್ರಾಮದ ಮುಖಂಡರಾದ ಸಿದ್ದಪ್ಪ ದೊಡ್ಡಮನಿ, ಮಹಾಂತೇಶ್‌ ಕಮಲಾಪುರ, ಕರಿಬಸಪ್ಪ ದೊಡ್ಡಮನಿ, ಕಡೇಮನಿ ನಾಗರಾಜ್‌, ಶ್ರೀನಿವಾಸ್‌, ಲಕ್ಷ್ಮಪ್ಪ ದಿಬ್ದಹಳ್ಳಿ, ಬಿ. ಹನುಮಂತಪ್ಪ, ನಾರಾಯಣಪ್ಪ, ಬಸಾಪುರದ ಮಂಜಪ್ಪ, ಗ್ರಾ.ಪಂ ಸದಸ್ಯರಾದ ಗಿರಿಜಮ್ಮ ಜಯ್ಯಪ್ಪ, ಶಿವು ಬೆಳಕೊಂಡರ, ಟಿ.ಪಿ. ಧನ್ಯಕುಮಾರ್‌ ಸೇರಿದಂತೆ ನೂರಾರು ಮಹಿಳೆಯರು, ಯುವಕರು ಧರಣಿಯಲ್ಲಿ ಭಾಗವಹಿಸಿದ್ದರು.

error: Content is protected !!