ವಿಶೇಷ ಚೇತನರ ಕೌಶಲ್ಯಕ್ಕೆ ಅನುಗುಣವಾದ ಸೌಲಭ್ಯ ಸಿಗುವಂತಾಗಲಿ-ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಮ. ಕರೆಣ್ಣವರ್

ವಿಶೇಷ ಚೇತನರ ಕೌಶಲ್ಯಕ್ಕೆ ಅನುಗುಣವಾದ ಸೌಲಭ್ಯ ಸಿಗುವಂತಾಗಲಿ-ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ  ಮ. ಕರೆಣ್ಣವರ್

ದಾವಣಗೆರೆ, ಡಿ. 26-  ವಿಶೇಷ  ಚೇತನರಿಗೆ ಮೀಸಲಾದ ಅನುದಾನದಲ್ಲಿ ಕೇವಲ ತ್ರಿಚಕ್ರದ ಬೈಸಿಕಲ್, ಸ್ಕೂಟರ್ ನೀಡುವುದಷ್ಟೇ ಅಲ್ಲ. 

ಬದಲಾಗಿ ಸ್ವಾವಲಂಬಿ ಜೀವನಕ್ಕೆ ಅನುಕೂಲವಾಗುವಂತಹ ಮತ್ತು ಅವರ ಕೌಶಲ್ಯಕ್ಕೆ ತಕ್ಕನಾದ ಕಂಪ್ಯೂಟರ್, ಜೆರಾಕ್ಸ್ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಎಲ್ಲರಂತೆ ಜೀವನ ನಡೆಸುವ ಅವಕಾಶ ನೀಡಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಮ. ಕರೆಣ್ಣವರ್ ಹೇಳಿದರು.

ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಎನೇಬಲ್ ಇಂಡಿಯಾ, ಸ್ಫೂರ್ತಿ ಸೇವಾ ಸಂಸ್ಥೆ, ರಾಜ್ಯ ಆರ್‌ಪಿಡಿ ಟಾಸ್ಕ್‌ಪೋರ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ ವಿಕಲಚೇತನರ ಹಕ್ಕುಗಳ  ಕಾಯ್ದೆ-2016 ಮತ್ತು ಶೇ. 5 ಅನುದಾನ ಬಳಕೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿಶೇಷ ಚೇತನರಿಗೆ ಮೀಸಲಾದ ಅನುದಾನದಲ್ಲಿ ತ್ರಿಚಕ್ರದ ಬೈಸಿಕಲ್, ಸ್ಕೂಟರ್ ನೀಡುವುದಲ್ಲದೇ ಸ್ವಾವಲಂಬಿ ಬದುಕಿಗೆ ಅಗತ್ಯ ಪರಿಕರಗಳನ್ನು ಮತ್ತು ಇತರೆ ಸೌಲಭ್ಯಗಳನ್ನು ನೀಡಬೇಕಾಗಿದೆ ಎಂದರು.

ದೈಹಿಕವಾಗಿ ನ್ಯೂನತೆ ಇದ್ದರೂ ವಿಶೇಷ ಚೇತನರಿಗೆ ಕೌಶಲ್ಯದ ಕೊರತೆಯಿಲ್ಲ. ಕೌಶಲಕ್ಕೆ ತಕ್ಕ ಸೌಲಭ್ಯ ಕೊಡಬೇಕು. ಮೀಸಲಿಟ್ಟ ಅನುದಾನದ ಸದ್ಭಳಕೆಯಾಗಬೇಕು. ಜೀವನ ಕಟ್ಟಿಕೊಳ್ಳುವ ವಾತಾವರಣ ಕಲ್ಪಿಸಿಕೊಡುವ ಅಗತ್ಯವಿದೆ ಎಂದು ಹೇಳಿದರು.

ವಿಶೇಷ ಚೇತನರಿಗೆ ಶೇ. 5 ರಷ್ಟು ಕನಿಷ್ಠ ಸೌಲಭ್ಯ ಮಾತ್ರವಲ್ಲದೇ ಅಧಿಕ ಸವಲತ್ತುಗಳನ್ನು ನೀಡಬೇಕು. ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಅನುದಾನ ಬರುತ್ತಿದ್ದರೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಇಂತಹ ಸೌಲಭ್ಯಗಳ ಬಗ್ಗೆ ಜನ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

ಸರ್ಕಾರಿ ಕಚೇರಿಗಳಲ್ಲಿ ವಿಶೇಷ ಚೇತನರು ಸರಾಗವಾಗಿ ಓಡಾಡುವ ರಾಂಪ್‌ ಗಳನ್ನು ನಿರ್ಮಾಣ ಮಾಡಬೇಕೆಂದರು.

ಸ್ಫೂರ್ತಿ ಸಂಸ್ಥೆಯ ಸಿಇಓ ರೂಪಾನಾಯ್ಕ ಮಾತನಾಡಿ, ವಿಶೇಷ ಚೇತನರಿಗೆ ಯಾವುದೇ ಅನುಕಂಪ, ಕನಿಕರ ಬೇಡ. ಬದಲಿಗೆ ಅವರಿಗೆ ಸಲಕರಣೆ, ಅಗತ್ಯ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ತ್ರಿಚಕ್ರ ಬೈಸಿಕಲ್, ಸ್ಕೂಟರ್ ಜೊತೆಗೆ ಜೀವನ ನಡೆಸಲು ಬೇಕಾದ ಕೆಲಸವನ್ನು ಸಹ ಕೊಡಿಸಬೇಕಾಗಿದೆ ಎಂದರು.

ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಬಿ. ಮಲ್ಲಾನಾಯ್ಕ, ಜಿಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜಿ. ಪ್ರಕಾಶ್, ಸತ್ಯನಾರಾಯಣ, ಟಾಸ್ಕ್‌ಪೂರ್ಸ್ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ವಿಜಯಲಕ್ಷ್ಮೀ,  ಅರುಣ್ ಕುಮಾರ್, ಕೆ. ಸುಧೀಂದ್ರ ಕುಮಾರ್, ತಾ.ಪಂ. ಇಓ ರಾಮಭೋವಿ ಮತ್ತಿತರರು ಪಾಲ್ಗೊಂಡಿದ್ದರು. 

error: Content is protected !!