ದಾವಣಗೆರೆ, ಡಿ.26- ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯು ಹಿಮೊಫಿಲಿಯಾ ಪೀಡಿತ ಯುವಕರಿಗಾಗಿ ಈಚೆಗೆ 5 ದಿನಗಳ ಕಾಲ `ಬ್ಲೂ ಬೆಲ್’ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಶಿಬಿರದಲ್ಲಿ ಕ್ರಿಯಾಶೀಲ ಶಿಬಿರಾರ್ಥಿ ಶ್ರೀಕಾಂತ್ ಗೌಡ ಅವರಿಗೆ `ಮಿಸ್ಟರ್ ಬ್ಲೂಬೆಲ್’ ಪ್ರಶಸ್ತಿಯನ್ನು ನೀಡಲಾಯಿತು.
ಎ.ವಿ.ಕೆ. ಹಾಗೂ ಡಿ.ಆರ್.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜೆ.ಬಿ. ರಾಜ್ ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಸಂಸ್ಥೆಯ ಉಪಾಧ್ಯಕ್ಷ ಬಿ.ಟಿ. ಅಚ್ಯುತ್ ಶಿಬಿರಾರ್ಥಿಗಳಿಗೆ ಶುಭ ಹಾರೈಸಿ ದರು. ಕಾರ್ಯಕ್ರಮದ ಮೊದಲ ದಿವಸ ಜೆಜೆಎಂ ವೈದ್ಯಕೀಯ ಕಾಲೇಜಿನ ಪೆಥಾಲಜಿ ವಿಭಾಗದ ಮುಖ್ಯಸ್ಥ ಡಾ. ವರದೇಂದ್ರ ಕುಲಕರ್ಣಿ ಮಾತನಾಡಿ, ಹಿಮೊಫಿಲಿಯಾ ಮಕ್ಕಳಿಗೆ ಶಿಕ್ಷಣ ಅನಿವಾರ್ಯ ಮತ್ತು ಅವಶ್ಯಕವಾಗಿದೆ ಎಂದು ಹೇಳಿದರು.
ಸೊಸೈಟಿ ಅಧ್ಯಕ್ಷ ಡಾ. ಸುರೇಶ್ ಹನಗವಾಡಿ ಹಿಮೊಫಿಲಿಯಾ ಮತ್ತು ಇನ್ಹಿಬೀಟರ್ ಕುರಿತು ತಿಳಿಸಿಕೊಟ್ಟರು.
ಕಾಲೇಜ್ ಆಫ್ ಡೆಂಟಲ್ ಸೈನ್ಸ್ನ ಡಾ. ರಾಜೇಶ್ವರಿ ಅಣ್ಣಿಗೇರಿ, `ಗುಟ್ಕಾ ಮತ್ತು ತಂಬಾಕು ಜಾಗೃತಿ’, ಸಮೃದ್ಧಿ ಮತ್ತು ಶಕ್ತಿಯುತ ಜೀವನ’ ಕುರಿತು ಅನ್ಮೋಲ್ ಸಂಸ್ಥೆಯ ಅಧ್ಯಕ್ಷ ದಿನೇಶ್ ಸಿ.ಜಿ, ದಾವಣಗೆರೆಯ ಸಂಯುಕ್ತ ಪ್ರಾದೇಶಿಕ ಕೇಂದ್ರದ ಪುನಶ್ಚೇತನ ಅಧಿಕಾರಿ ಕನಗಸಭಾಪತಿ ಅವರು, ಅಂಗವಿಕಲ ಕಾಯ್ದೆಯಡಿ ಬರುವ ಸಾಮಾಜಿಕ ಯೋಜನೆಗಳ ಕುರಿತು ಹಿಮೊಫಿಲಿಯಾ ಪೀಡಿತರು ಪಡೆದುಕೊಳ್ಳಬೇಕಾದ ಹಕ್ಕುಗಳು ಮತ್ತು ಅಂಗವಿಕಲರಿಗಾಗಿ ಇರುವ ಸರ್ಕಾರಿ ಸೌಲಭ್ಯಗಳ ಕುರಿತು ತಿಳಿಸಿಕೊಟ್ಟರು.
ಡಾ. ಮೀರಾ ಹನಗವಾಡಿ ಅವರು `ಸ್ವಯಂ ಚುಚ್ಚುಮದ್ದು’, ಡಾ. ಇ.ಎಂ. ಸುರೇಂದ್ರ ಅವರು `ಒಳ್ಳೆಯ ಆರೋಗ್ಯಕ್ಕಾಗಿ ಒಳ್ಳೆಯ ಜೀವನ ಶೈಲಿ’ ಕುರಿತು ಉಪನ್ಯಾಸ ನೀಡಿದರು. ಸೈನಿಕ ಕರಿಬಸಪ್ಪ, ರವಿಕುಮಾರ್, ಕಿರಣ್, ನವೀನ್ ಹವಳಿ ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಯೋಗ ಗುರು ಶಂಭುಲಿಂಗಯ್ಯ ಶಿಬಿರಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಿದರು. ಸಮಾರೋಪ ಸಮಾರಂಭದಲ್ಲಿ ಸಂಯುಕ್ತ ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಮೀನಾಕ್ಷಿ, ಸಂಸ್ಥೆಯ ಗೌರವಾಧ್ಯಕ್ಷರಾದ ಕಿರುವಾಡಿ ಗಿರಿಜಮ್ಮ ಹಾಗೂ ಪ್ರಕಾಶ್ ಗಡಿಯಾರ್ ಪಾಲ್ಗೊಂಡಿದ್ದರು.