ಹರಪನಹಳ್ಳಿ, ಡಿ.26- ಭಾರತೀಯತೆಯ ಶಿಕ್ಷಣ ಇಂದು ಅತ್ಯಗತ್ಯವಾಗಿದೆ ಎಂದು ಪತ್ರಕರ್ತ ಅಜಿತ್ ಹನುಮಕ್ಕನವರ್ ಹೇಳಿದರು.
ಪಟ್ಟಣದ ವಿದ್ಯಾನಿಧಿ ಶಿಕ್ಷಣ ಅಕಾಡೆಮಿಯ 5ನೇ ವಾರ್ಷಿಕೋತ್ಸವ ಹಾಗೂ ಸಿಬಿಎಸ್‍ಸಿ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಪುನರುತ್ಥಾನ ಶಿಕ್ಷಣವನ್ನು ಶಾಲೆಯಲ್ಲಿ ಕಲಿಸುವ ಅಗತ್ಯ ಇದೆ. ಮಹಾನಗರಗಳಲ್ಲಿ ಪ್ರಯೋಗಾತ್ಮಕ ಶಿಕ್ಷಣವನ್ನು ನೀಡಲಾಗುತ್ತಿದೆ. ಹಳ್ಳಿಗಳಲ್ಲಿ ವ್ಯಾಮೋಹದ ಶಿಕ್ಷಣದ ಕಡೆಗೆ ಹೋಗುತ್ತಿದ್ದಾರೆ ಎಂದರು.
ಪಠ್ಯಕ್ಕಿಂತ ಹೆಚ್ಚು ಪಠೇತರ ವಿಷಯಗಳನ್ನು ಮಕ್ಕಳಿಗೆ ಕಲಿಸಬೇಕಿದೆ ಎಂದ ಅವರು ಇಂಗ್ಲಿಷ್ ಒಂದು ಭಾಷೆಯಾಗಿದ್ದು, ಅದರ ಮೋಹಕ್ಕೆ ಒಳಗಾಗಬಾರದು ಎಂದು ಅವರು ಹೇಳಿದರು.
ಉಜ್ವಲ ಭಾರತ ಕಟ್ಟಲಿರುವ ಇಂತಹ ಪೀಳಿಗೆಗೆ ಶಿಕ್ಷಣ ಕೊಡುವುದು ಪುಣ್ಯದ ಕೆಲಸ, ಭಾರತದ ಅಮೃತ ಕಾಲದ ಪೀಳಿಗೆಗೆ ಇಂತಹ ವಾತಾವರಣದಲ್ಲಿ ಶಿಕ್ಷಣ ನೀಡುವುದು ಹಾಗೂ ಇಂತಹ ಹಳ್ಳಿಯಂತಹ ವಾತಾವರಣದಲ್ಲಿ ಬೆಳೆಯುತ್ತಿ ರುವುದು ಇಂದಿನ ಮಕ್ಕಳೇ ಭಾಗ್ಯವಂತರು ಎಂದು ತಿಳಿಸಿದರು.
ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜೀವನದಲ್ಲಿ ಮಕ್ಕಳನ್ನು ದೇಶಪ್ರೇಮಿಯಾಗಿ ಬೆಳೆಸಬೇಕಿದೆ, ಜೀವನದಲ್ಲಿ ತತ್ವ, ಸಿದ್ದಾಂತಗಳನ್ನು ಹೇಗೆ ಅಳವಡಿಸಿಕೊಳ್ಳ ಬೇಕು ಎನ್ನುವ ಜ್ಞಾವನ್ನು ಕಲಿಸಬೇಕಿದೆ ಎಂದರು.
ಮಕ್ಕಳಿಗೆ ಕಷ್ಟದ ಅರಿವು ಮಾಡಿಸದಿದ್ದರೆ ಮುಂದೆ ಮಕ್ಕಳ ಜೀವನ ಕಷ್ಟವಾಗಲಿದೆ ಎಂದ ಅವರು, ವಿದ್ಯೆಯ ಜೊತೆಗೆ ಸಂಸ್ಕಾರವನ್ನು ಕಲಿಸುವ ಅಗತ್ಯವಿದೆ ಎಂದರು.
ಇಲ್ಲಿರುವಂತಹ ಸಂಸ್ಕೃತಿ, ಸಂಸ್ಕಾರ, ಅಧ್ಯಾತ್ಮ, ಪರಂಪರೆ ವಿಶೇಷಗಳಿಂದ ಭಾರತ ವಿಶ್ವಕ್ಕೇ ಗುರುವಾಗಿದೆ ಎಂದ ಅವರು ಯಾರು ಆರೋಗ್ಯ, ಸಂಸ್ಕಾರ, ಜ್ಞಾನವಂತರಾಗಿರುತ್ತಾರೆ ಅವರೇ ದೇಶದ ನಿಜವಾದ ಸಂಪತ್ತು ಆಗಿದ್ದಾರೆ ಎಂದು ಹೇಳಿದರು.
ಬಳ್ಳಾರಿ ವಿದ್ಯಾನಿಧಿ ಅಕಾಡೆಮಿ ಪ್ರಾಚಾರ್ಯ ಈಶ್ವರಿ ಕೃಷ್ಣ ಶರ್ಮ ಮಾತನಾಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಚನ್ನನಗೌಡ, ಕಾರ್ಯದರ್ಶಿ ವಾಗೀಶ್, ಆಡಳಿತ ಮಂಡಳಿ ಸದಸ್ಯರಾದ ಕೃಷ್ಣ, ಪ್ರಕಾಶ ಅಂಗಡಿ, ಶಿವಕುಮಾರ್, ಸಂತೋಷ ಜಟ್ಟಿ, ಚನ್ನಬಸವರಾಜ, ಮಂಜುನಾಥ, ವಾಗೀಶ ಇಟ್ಟಗಿ ಸೇರಿದಂತೆ ಇತರರು ಇದ್ದರು.