ಶಾಸ್ತ್ರೀಯ ಸಂಗೀತಕ್ಕೆ ಸಿಕ್ಕ ಪ್ರೋತ್ಸಾಹ ಜಾನಪದ ಹಾಡುಗಾರಿಕೆಗೆ ಸಿಗುತ್ತಿಲ್ಲ

ಶಾಸ್ತ್ರೀಯ ಸಂಗೀತಕ್ಕೆ ಸಿಕ್ಕ ಪ್ರೋತ್ಸಾಹ ಜಾನಪದ ಹಾಡುಗಾರಿಕೆಗೆ ಸಿಗುತ್ತಿಲ್ಲ

ಮಲೇಬೆನ್ನೂರು, ಡಿ.26- ಹಾಡುಗಾರರು ಈ ನಾಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಸಾಂಸ್ಕೃತಿಕ ರೂವಾರಿಗಳು ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ಎ.ಬಿ.ರಾಮಚಂದ್ರಪ್ಪ ಹೇಳಿದರು.

ಅವರು ಸೋಮವಾರ ಹನಗವಾಡಿ ಸಮೀಪದ ಪ್ರೊ. ಬಿ. ಕೃಷ್ಣಪ್ಪ ಭವನದಲ್ಲಿ ಕರುನಾಡ ಹಾಡುಗಾರರ ಬಳಗ, ಸತೀಶ್ ಜಾರಕಿಹೊಳಿ ಫೌಂಡೇಷನ್ ಹಾಗೂ ಮಾನವ ಬಂಧುತ್ವ ವೇದಿಕೆಯಿಂದ ಹಮ್ಮಿಕೊಂಡಿದ್ದ `ನಮ್ಮ ನಾಡು ನಮ್ಮ ಹಾಡು – 2023′ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವರ್ಣ ಪಾರಮ್ಯ ಎಂಬುದು ಕೇವಲ ಸಾಮಾಜಿಕವಾಗಿ ಉಳಿದಿಲ್ಲ. ಅದು ಎಲ್ಲಾ ರಂಗಗಳಲ್ಲೂ ತನ್ನ ಪಾರಮ್ಯ ಕಾಪಾಡಿಕೊಂಡಿದೆ. ಕಲೆಯಲ್ಲೂ ಈ ತಾರತಮ್ಯ ಕಾಣಬಹುದು. ರಾಜಪ್ರಭುತ್ವ ತಂತಿವಾದ್ಯಕ್ಕೆ ನೀಡಿದಷ್ಟು ಪ್ರೋತ್ಸಾಹವನ್ನು ಚರ್ಮ ವಾದ್ಯಕ್ಕೆ ನೀಡಲಿಲ್ಲ. ಯಕ್ಷಗಾನಕ್ಕೆ ಸಿಕ್ಕಷ್ಟು ಪ್ರೋತ್ಸಾಹ ಸಣ್ಣಾಟ, ದೊಡ್ಡಾಟಗಳಿಗೆ ಸಿಕ್ಕಿಲ್ಲ. ಶಾಸ್ತ್ರೀಯ ಸಂಗೀತಕ್ಕೆ ಸಿಕ್ಕ ಪ್ರೋತ್ಸಾಹ ಜಾನಪದ ಹಾಡುಗಾರಿಕೆಗೆ ಸಿಗುತ್ತಿಲ್ಲ. ಹಾಗಾಗಿ ಜಾನಪದ ಕಲಾವಿದರ ಬದುಕು ಸಂಕಟದಲ್ಲಿದೆ. ಈ ಕಲೆಗಳು ಸಂಕಟದ ಸ್ಥಿತಿ ಎದುರಿಸುತ್ತಿವೆ. ಈ ತಾರತಮ್ಯಗಳು ಇಲ್ಲವಾದಾಗ ಎಲ್ಲಾ ಕಲೆಗಳು ಬೆಳೆಯಲು ಸಾಧ್ಯ ಎಂದರು.

ಈ ನಾಡನ್ನು ಕಟ್ಟಿದ, ಈ ಕಲೆಗಳು ಸಂಕಟದ ಸ್ಥಿತಿ ಎದುರಿಸುತ್ತಿವೆ. ಈ ತಾರತಮ್ಯಗಳು ಇಲ್ಲವಾದಾಗ ಎಲ್ಲಾ ಕಲೆಗಳು ಬೆಳೆಯಲು ಸಾಧ್ಯ ಎಂದರು.

ಕರುನಾಡ ಬಳಗದ ಗೌರವಾಧ್ಯಕ್ಷ ಗ್ಯಾರಂಟಿ ರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಬಂಧುತ್ವ ಫೌಂಡೇಷನ್‌ನ ರಾಘು ದೊಡ್ಡಮನಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಪಿ.ಬಿ.ಚಂದ್ರಪ್ಪ, ಕಲೀಂ ಭಾಷಾ, ಎಂ.ಗುರುಸಿದ್ದಸ್ವಾಮಿ, ಮಹಾಲಿಂಗಪ್ಪ ಅಲಹಾಳ್, ಹೆಗ್ಗೆರೆ ರಂಗಪ್ಪ, ಪುರಂದರ್ ಲೋಕಿಕೆರೆ, ಐರಣಿ ಚಂದ್ರು, ಜಗಳೂರಿನ ಎ.ಕೆ.ಓಬಪ್ಪ ಮತ್ತಿತರರು ಉಪಸ್ಥಿತರಿದ್ದರು.

ಈ ವೇಳೆ ಕಲಾ ಸಾಧಕರಾದ ಸಂಗೀತ ಕಲಾವಿದ ಚೀಲೂರಿನ ಕೊಂಡಯ್ಯದಾಸ್,  ಕೀಲು – ಕುದುರೆ ಕಲಾವಿದ ನರಸನಹಳ್ಳಿ ಬಸವರಾಜ್, ರಂಗಭೂಮಿ  ಕಲಾವಿದ ತೋರಣಗಟ್ಟೆ ತಿರುಕಪ್ಪ, ಬೀದಿ ನಾಟಕ ಕಲಾವಿದರಾದ ಕೆ.ಎನ್.ಹಳ್ಳಿಯ ರಂಗಮ್ಮ, ಭಜನೆ ಕಲಾವಿದ ಲೋಕಿಕೆರೆ ಪಸಪ್ಪರ ಚಂದ್ರಪ್ಪ ಮತ್ತು ವಾದ್ಯ ಕಲಾವಿದ ಲೋಕಿಕೆರೆ ತಾಳೆದರ ಹಾಲಪ್ಪ ಅವರಿಗೆ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

error: Content is protected !!