ಯುವನಿಧಿ ಭಿತ್ತಿಪತ್ರ ಬಿಡುಗಡೆ

ಯುವನಿಧಿ ಭಿತ್ತಿಪತ್ರ ಬಿಡುಗಡೆ

ದಾವಣಗೆರೆ, ಡಿ. 26 – ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆ ಯಡಿ ಯುವನಿಧಿಯ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ನಿರುದ್ಯೋಗ ಭತ್ಯೆ ಯೋಜನೆ ಜಾರಿಗೆ ತರುತ್ತಿದೆ. ಇದರ ಅಂಗವಾಗಿ ನಿರುದ್ಯೋಗಿ ಡಿಪ್ಲೋಮಾ ಪದವೀಧರರಿಗೆ 1,500 ರೂ. ಹಾಗೂ ಪದವೀಧರರಿಗೆ 3,000 ರೂ.ಗಳ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು ಎಂದರು.

2023ರಲ್ಲಿ ಪದವಿ ಇಲ್ಲವೇ ಡಿಪ್ಲೋಮಾ ಪಡೆದು ಆರು ತಿಂಗಳವರೆಗೆ ನಿರುದ್ಯೋಗಿಗಳಾಗಿರುವವರಿಗೆ ಈ ಭತ್ಯೆ ಲಭ್ಯವಿದೆ. ವಿದ್ಯಾಭ್ಯಾಸ ಮುಂದುವರೆಸುತ್ತಿ ರುವವರು ಇಲ್ಲವೇ ಉದ್ಯೋಗಕ್ಕೆ ಸೇರ್ಪಡೆಯಾದವರಿಗೆ ಭತ್ಯೆ ನೀಡುವುದಿಲ್ಲ. ಈ ಬಗ್ಗೆ ತಪ್ಪು ಮಾಹಿತಿ ನೀಡಿದಲ್ಲಿ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಮುಂದಿನ ಎರಡು ವರ್ಷಗಳವರೆಗೆ ಇಲ್ಲವೇ ಉದ್ಯೋಗ ಸಿಗುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಭತ್ಯೆ ಸಿಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

2023ರಲ್ಲಿ ಪದವಿ ಇಲ್ಲವೇ ಡಿಪ್ಲೋಮಾ ಪಡೆದು ಆರು ತಿಂಗಳವರೆಗೂ ನಿರುದ್ಯೋಗಿಗಳಾಗಿರುವವರು ಇಂದಿ ನಿಂದಲೇ ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.

ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲೂ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಜನವರಿಯಿಂದ ಇವರಿಗೆ ನಿರುದ್ಯೋಗ ಭತ್ಯೆ ಸಿಗಲಿದೆ ಎಂದು ವಿವರಿಸಿದರು.

ಅರ್ಜಿ ದಾಖಲಿಸುವ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪದವಿ/ಡಿಪ್ಲೋಮಾ ದಾಖಲಾತಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳ ವಿವರ ಸಲ್ಲಿಸಬೇಕು ಎಂದು ಹೇಳಿದರು.

ಕರ್ನಾಟಕದ ವಾಸಿಗಳು ಹಾಗೂ ಕರ್ನಾಟಕದಲ್ಲಿ ಪದವಿ ಪಡೆದವರು ಮಾತ್ರವೇ ಈ ಯೋಜನೆಗೆ ಅರ್ಹರಾಗಿದ್ದಾರೆ. ಹೊರ ರಾಜ್ಯಗಳಲ್ಲಿ ಪದವಿ ಪಡೆದವರಿಗೆ ಈ ಯೋಜನೆಯಲ್ಲಿ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಇಟ್ನಾಳ್, ಗ್ರಾಮಗಳಲ್ಲಿರುವ ನಿರುದ್ಯೋಗಿ ಪದವೀಧರ/ಡಿಪ್ಲೋಮಾ ಪಡೆದವರು ಬಾಪೂಜಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವನಗೌಡ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಷಣ್ಮುಖಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!