ಸಾಮಾಜಿಕ ಹೇಡಿತನಕ್ಕೆ ದಂಡ ವಿಧಿಸಬೇಕು
ಬೆಳಗಾವಿಯ ವಂಟಮೂರಿಯಲ್ಲಿ ಬೆತ್ತಲೆ ಪ್ರಕರಣ ನಡೆದಾಗ ಗ್ರಾಮದ ಜನರು ಮೂಕಪ್ರೇಕ್ಷಕರಾಗಿದ್ದರು. ಇದು ಸಾಮಾಜಿಕ ಹೇಡಿತನ. ಇಂತಹ ಹೇಡಿತನಕ್ಕೂ ದಂಡ ವಿಧಿಸುವ ಅಗತ್ಯವಿದೆ ಎಂದು ಮಾನವ ಹಕ್ಕುಗಳ ಪ್ರತಿಪಾದಕ ಲೋಹಿತ್ ನಾಯ್ಕರ ತಿಳಿಸಿದರು.
ಅಪಘಾತ, ಹಲ್ಲೆ ಇತ್ಯಾದಿಗಳು ನಡೆದಾಗ ನೆರವಾಗುವ ನಾಗರಿಕರನ್ನು ಗೌರವಿಸುವ ಹಾಗೂ ಸನ್ಮಾನಿಸುವ ಪದ್ಧತಿ ಹಲವು ದೇಶಗಳಲ್ಲಿದೆ. ಅಂಥದೇ ಪದ್ದತಿಯನ್ನು ಭಾರತದಲ್ಲೂ ಜಾರಿಗೆ ತರಬೇಕು ಎಂದವರು ಹೇಳಿದರು.
ದಾವಣಗೆರೆ, ಡಿ. 21 – ದೇಶಕ್ಕೆ ಈಗ ಕಾನೂನು ನ್ಯಾಯಕ್ಕಿಂತಲೂ ಆರ್ಥಿಕ ಹಾಗೂ ಸಾಮಾಜಿಕ ನ್ಯಾಯದ ಅಗತ್ಯವಿದೆ. ಸಂಪನ್ಮೂಲಗಳು ಕೆಲವೇ ವ್ಯಕ್ತಿಗಳ ಕೈ ಸೇರುವು ದನ್ನು ತಡೆಯಬೇಕಿದೆ ಎಂದು ಮಾನವ ಹಕ್ಕುಗಳ ಪ್ರತಿಪಾದಕ ಲೋಹಿತ್ ನಾಯ್ಕರ ಅಭಿಪ್ರಾಯ ಪಟ್ಟರು.
ನಗರದ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಇಂದು ಆಯೋಜಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.
ದೇಶಕ್ಕೆ ಸ್ವಾತಂತ್ರ ದೊರೆತಾಗ ಆರ್ಥಿಕ ಚಟುವಟಿಕೆಗಳು ಸರ್ಕಾರದ ವಶದಲ್ಲಿದ್ದವು. ಕೆಂಪು ಪಟ್ಟಿ ದೋಷ, ಸ್ವಜನ ಪಕ್ಷಪಾತ ಮುಂತಾದ ಕಾರಣದಿಂದ ಆರ್ಥಿಕ ಚಟುವಟಿಕೆ ಗಳಿಗೆ ಹಿನ್ನಡೆಯಾಯಿತು. ಇದರಿಂದಾಗಿ ಖಾಸಗೀಕರಣಕ್ಕೆ ಸರ್ಕಾರಗಳು ಮುಂದಾದವು. ಈಗ ದೇಶದ ಆಸ್ತಿ ಕೆಲವೇ ವ್ಯಕ್ತಿಗಳ ಕೈ ಸೇರುವಂತಾಗಿದೆ ಎಂದವರು ಹೇಳಿದರು.
ದೇಶದ ಶೇ.90ರಷ್ಟು ಆಸ್ತಿ ಕೇವಲ ಶೇ.1ರಷ್ಟು ಜನಸಂಖ್ಯೆಯ ಕೈಯಲ್ಲಿದೆ. ಶೇ.75ರಷ್ಟು ಆಸ್ತಿ ಕೇವಲ 15-16 ಜನರ ಕೈಯಲ್ಲಿದೆ ಎಂದವರು ಪ್ರತಿಪಾದಿಸಿದರು.
ಕೆಲವೇ ವ್ಯಕ್ತಿಗಳ ಕೈಯಲ್ಲಿ ಆಸ್ತಿ ಸೇರಬಾರದು. ದೇಶದ ಆಸ್ತಿಯು ಎಲ್ಲರಿಗೂ ಸೇರುವಂತಾಗಲು ಹಲವಾರು ಆರ್ಥಿಕ ಮಾದರಿಗಳಿವೆ. ಈ ಬಗ್ಗೆ ಪರಿಶೀಲಿಸಬೇಕಿದೆ ಎಂದು ನಾಯ್ಕರ ತಿಳಿಸಿದರು.
ಬುದ್ಧ, ಬಸವಣ್ಣನವರ ಕಾಲದಿಂದಲೂ ಸಾಮಾಜಿಕ ನ್ಯಾಯ ಪ್ರತಿಪಾದಿಸುತ್ತಾ ಬರಲಾಗು ತ್ತಿದೆ. ಬಸವಣ್ಣನವರು ಕಾಯಕ ಹಾಗೂ ದಾಸೋಹ ತತ್ವದ ಮೂಲಕ ಸಾಮಾಜಿಕ ನ್ಯಾಯ ಸಾರಿದ್ದರು. ಇಂತಹ ಸಾಮಾಜಿಕ ನ್ಯಾಯ ಕಲ್ಪಿಸುವ ಅಗತ್ಯವಿದೆ ಎಂದವರು ಹೇಳಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್, ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಜಿ.ಎಸ್. ಯತೀಶ್ ಉಪಸ್ಥಿತರಿದ್ದರು.
ಸುಷ್ಮಾ ಹಾಗೂ ಆರತಿ ಪ್ರಾರ್ಥಿಸಿದರು. ವಿದ್ಯಾಧರ ವೇದವರ್ಮ ಸ್ವಾಗತಿಸಿದರು.