ದಾವಣಗೆರೆ, ಡಿ. 20 – ಕರ್ನಾಟಕದಲ್ಲಿ ಕನ್ನಡ ರಾಜ್ಯ ಭಾಷೆ ಹಾಗೂ ಆಡಳಿತ ಭಾಷೆಯಾಗಿದೆ. ಮಧ್ಯ ಕರ್ನಾಟಕದ ಜಿಲ್ಲೆಯಾಗಿರುವ ದಾವಣಗೆರೆಯಲ್ಲಿ ಕನ್ನಡದಲ್ಲೇ ಆಡಳಿತ ನಡೆಸಲು ಹೆಚ್ಚು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಭರವಸೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಪೌರ ಕಾರ್ಮಿಕರು ಹಾಗೂ ಆರೋಗ್ಯ ನಿರೀಕ್ಷಕರಿಗೆ ಇಂದು ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂಗ್ಲಿಷ್‌ಗೆ ಸಾವಿರ ವರ್ಷಗಳ ಹಿಂದೆ ಲಿಪಿಯೇ ಇರಲಿಲ್ಲ. ಆದರೆ, ಸಾವಿರ ವರ್ಷಗಳ ಹಿಂದೆ ಕನ್ನಡದಲ್ಲಿ ಲಿಪಿಯಷ್ಟೇ ಅಲ್ಲದೇ ಗ್ರಂಥಗಳನ್ನು ರಚಿಸಲಾಗಿತ್ತು. ಕನ್ನಡ ಸಾಹಿತ್ಯದಲ್ಲಿ ಅಗಾಧ ನೈಪುಣ್ಯತೆ ಇತ್ತು. ಕನ್ನಡ ವಿಶ್ವದ ಭಾಷೆ ಗಳಲ್ಲಿ ರಾಣಿ ಭಾಷೆಯಂತಿದೆ ಎಂದು ತಿಳಿಸಿದರು.
2,400 ವರ್ಷಗಳ ಹಿಂದೆಯೂ ಕನ್ನಡ ಬಳಕೆಯಲ್ಲಿದ್ದ ಹಲವಾರು ಉದಾಹರಣೆಗಳಿವೆ. ಅಶೋಕ ಚಕ್ರವರ್ತಿಯ ಪಾಳಿ ಭಾಷೆಯ ಶಿಲಾಶಾಸನದಲ್ಲೂ ಕನ್ನಡದ ಪದ ಇರುವುದು ಕಂಡು ಬಂದಿದೆ ಎಂದವರು ಹೇಳಿದರು.
ಹಳೆಗನ್ನಡದ ಚಂಪೂ, ಷಟ್ಪದಿ, ಸಾಂಗತ್ಯ, ವಚನಗಳಿಂದ ಹಿಡಿದು ಈಗಿನ ನವ್ಯ, ನವೋದಯ ಹಾಗೂ ದಲಿತದವರೆಗೆ ಸಾಕಷ್ಟು ಸಾಹಿತ್ಯ ಪ್ರಾಕಾರಗಳು ಕನ್ನಡದಲ್ಲಿವೆ. ಈ ಭಾಷಾ ಸೊಗಡನ್ನು ಯುವಕರು ಅರಿಯಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ತಾಯಿಗೆ ವಿಶೇಷ ಗೌರವ ಹಾಗೂ ಮಹತ್ವ ಇದೆ. ಅದೇ ರೀತಿಯಲ್ಲೇ ಮಾತೃಭಾಷೆ ಹಾಗೂ ನಾಡ ಭಾಷೆಯಾದ ಕನ್ನಡಕ್ಕೂ ಮಹತ್ವ ಇದೆ. ಈ ಭಾಷೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಬ್ದಾರಿ ಎಲ್ಲರೂ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡ ಫಲಕಗಳಿಗೆ ಸಂಬಂಧಿಸಿದ ನಿಯಮ ಜಾರಿಗೆ ಶ್ರಮಿಸಿದ ನಗರ ಪಾಲಿಕೆಯ ಪೌರ ಕಾರ್ಮಿಕರು ಹಾಗೂ ಆರೋಗ್ಯ ನಿರೀಕ್ಷಕರನ್ನು ಸನ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಎಂ.ಎಸ್. ರಾಮೇಗೌಡ, ನಗರದಲ್ಲಿ ಈಗಾಗಲೇ ಶೇ.70ರಷ್ಟು ಫಲಕಗಳು ಕನ್ನಡದಲ್ಲಿವೆ. ಉಳಿದ ಫಲಕಗಳ ವಿರುದ್ಧವೂ ಪಾಲಿಕೆ ವತಿಯಿಂದ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲಾದ್ಯಂತ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದ ವೇದಿಕೆ ಮೇಲೆ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಪಾಲಿಕೆ ಉಪ ಮೇಯರ್ ಯಶೋಧ ಹೆಗ್ಗಪ್ಪ, ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನ ಕುಮಾರ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್, ಪಾಲಿಕೆ ಆಯುಕ್ತೆ ರೇಣುಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಕ.ರ.ವೇ. ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಕ.ರ.ವೇ. ಗೌರವಾಧ್ಯಕ್ಷ ವಾಸುದೇವ ರಾಯ್ಕರ್, ಕ.ಸಾ.ಪ. ಜಿಲ್ಲಾ ಅಧ್ಯಕ್ಷ ಬಿ. ವಾಮದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.
ಶ್ರೀನಿವಾಸ ಸ್ವಾಗತಿಸಿದರೆ, ಶ್ರೀಕಾಂತ್ ಭಟ್ ನಿರೂಪಿಸಿದರು.