ದಾವಣಗೆರೆ, ಡಿ. 20- ಔಷಧ ಕ್ಷೇತ್ರದಲ್ಲಿ ಅಕ್ರಮವಾಗಿ ನಡೆಯುತ್ತಿದೆ ಎನ್ನಲಾದ ಮಾರಾಟ ದಂಧೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ಸದಸ್ಯರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು.
ಸಂಘದ ಪ್ರಮುಖ ಕೆ.ಹೆಚ್. ಆನಂದರಾಜ್ ಮಾತನಾಡಿ, ಖಾಸಗಿ ಬಹುರಾಷ್ಟ್ರೀಯ ಕಂಪನಿಗಳು ಭ್ರಷ್ಟ ವ್ಯವಸ್ಥೆಯ ಮೂಲಕ ತಮ್ಮ ಲಾಭಕೋರತನದಿಂದ ಜನರಿಗೆ ಅವಶ್ಯಕವಾದ ಔಷಧಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಮೂಲಕ ಅದನ್ನು ಬಳಸುವ ರೋಗಿಗಳ ಆರೋಗ್ಯವನ್ನು ಮತ್ತಷ್ಟು ಹಾಳು ಮಾಡುತ್ತಿವೆ ಎಂದರು.
ಜನರ ಆರೋಗ್ಯವನ್ನು ರಕ್ಷಿಸಬೇಕಾದ ಕೇಂದ್ರ ಸರ್ಕಾರವು ಕಂಡು ಕಾಣದಂತೆ ವರ್ತಿಸುತ್ತಿದೆ. ಮಾತ್ರವಲ್ಲ ಸಾರ್ವಜನಿಕ ವಲಯದ ಔಷಧಿ ಕಂಪನಿಗಳನ್ನು ಮುಚ್ಚುವ ಮೂಲಕ ಖಾಸಗಿ ಕಂಪನಿಗಳ ಲಾಭಕೋರತನವನ್ನು ಸರ್ಕಾರವೇ ಬೆಂಬಲಿಸುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.
ಈ ವ್ಯವಸ್ಥೆಯಿಂದ ಖಾಸಗಿ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಇಚ್ಛೆ ಬಂದಷ್ಟು ಔಷಧಿಗಳ ಬೆಲೆಗಳ ಏರಿಕೆಗೆ ಅವಕಾಶ ನೀಡಿದಂತಾಗಿದೆ. ಔಷಧಿಗಳ ಎಂಆರ್ಪಿ ಮೇಲೆ ಪ್ರತಿ ವರ್ಷ ಶೇ. 10 ರಷ್ಟು ಬೆಲೆ ಹೆಚ್ಚಿಸುವ ಅವಕಾಶವನ್ನು ಕೇಂದ್ರ ಸರ್ಕಾರ ಮಾಡಿದೆ. ಇದರಿಂದಾಗಿ ಇಡೀ ಆರೋಗ್ಯ ಕ್ಷೇತ್ರವೇ ಖಾಸಗಿಯವರ ದಾಳಕ್ಕೆ ಸಿಲುಕಿದೆ. ಇದರ ಪರಿಣಾಮ ಅಲ್ಲಿ ಚಿಕಿತ್ಸೆ ಪಡೆಯುವುದು ಸಂಪೂರ್ಣ ಹಣದ ಮೇಲೆ ನಿಂತಿದೆ. ಇದರಿಂದ ರೋಗಿಗಳ ಜೀವ ಸದಾ ಅಪಾಯದಲ್ಲಿದೆ ಎಂದು ತಿಳಿಸಿದರು.
ಔಷಧಿ ಮಾರಾಟ ಪ್ರತಿನಿಧಿಗಳಿಗೆ ಯಾವುದೇ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಇಲ್ಲ. ಇಲ್ಲಿ ಕಾರ್ಮಿಕ ಕಾನೂನು ಉಲ್ಲಂಘನೆ ಎಂಬುದು ನಿತ್ಯ ನಡೆಯುತ್ತಲೇ ಇದೆ. ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿರುವ ಔಷಧ ಕಂಪನಿಗಳ ದಾಖಲೆಗಳನ್ನು ಪರಿಶೀಲಿಸಲು ಸಂಘಟನೆಯಿಂದ ಒತ್ತಾಯ ಮಾಡಲಾಗಿದ್ದರೂ ಸಹ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಕಾರ್ಮಿಕ ಕಾನೂನು ತಿದ್ದುಪಡಿ ಮಾಡುವ ಮೂಲಕ ಕಾರ್ಮಿಕರನ್ನು ಶೋಷಣೆ ಮಾಡಿ ಮಾಲೀಕರನ್ನು ಪೋಷಣೆ ಮಾಡುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಿರುವುದರಿಂದ ಮಾರಾಟ ಪ್ರತಿನಿಧಿಗಳ ರಕ್ಷಣೆಗೆ ಇದ್ದಂತಹ ಎಸ್ಪಿಇ ಕಾಯ್ದೆ ರದ್ದಾಗಲಿದೆ ಎಂದರು.
ಆಸ್ಪತ್ರೆಗಳಲ್ಲಿ ಔಷಧ ಮಾರಾಟ ಪ್ರತಿನಿಧಿಗಳ ಪ್ರವೇಶ ನಿರ್ಬಂಧ ಹೇರಿರುವುದು. ಸೇವಾ ಷರತ್ತುಗಳು ಮತ್ತು ಕೆಲಸದ ಅವಧಿಯನ್ನು ನಿಗದಿ ಮಾಡದೇ ಜಿಪಿಆರ್ಎಸ್ ಮತ್ತು ಜಿಯೋ ಟ್ಯಾಗಿಂಗ್ ಮೂಲಕ ಗೌಪ್ಯತೆ ಬಹಿರಂಗಪಡಿಸುವ ಮೂಲಕ ಸುಮಾರು 13 ರಿಂದ 15 ಗಂಟೆಗಳ ಕಾಲ ಕೆಲಸ ಮಾಡಿಸುವ ಮೂಲಕ ಮಾರಾಟ ಪ್ರತಿನಿಧಿಗಳ ಮೇಲೆ ನಡೆಯುತ್ತಿರುವ ಶೋಷಣೆಯು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಲೋಹಿತಾಶ್ವ, ವೆಂಕಟೇಶ್, ಶಶಿ ಆಚಾರ್, ಆಫ್ರೋಜ್ ಮತ್ತಿತರರು ಭಾಗವಹಿಸಿದ್ದರು.