ದಾವಣಗೆರೆ, ಡಿ.18 – ಪೂರ್ವ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ದಾವಣಗೆರೆ ತಂಡ ಚಾಂಪಿಯನ್ ಪ್ರಶಸ್ತಿಗೆ ಪಾತ್ರವಾಗಿದೆ. ಹಾವೇರಿ ಜಿಲ್ಲೆಯ ಹಾನಗಲ್ ವಿಭಾಗದ ಎಸ್.ಆರ್. ಶ್ರೀಧರ್ ಅವರು ಐದು ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ದಾವಣಗೆರೆಯ ಶ್ವಾನ ದಳದ ಶ್ವಾನವಾದ §ಸಿಂಧು¬ ಮೊದಲ ಸ್ಥಾನ ಪಡೆದುಕೊಂಡಿದ್ದು, ಕೆ.ಎಂ. ಪ್ರಕಾಶ್ ಅವರು ಈ ಶ್ವಾನದ ನಿರ್ವಾಹಕರಾಗಿದ್ದಾರೆ.
ಒಟ್ಟು 18 ವಿಭಾಗಗಳಲ್ಲಿ ನಡೆದ ಕರ್ತವ್ಯ ಕೂಟ ಸ್ಪರ್ಧೆಯಲ್ಲಿ 4 ಜಿಲ್ಲೆಗಳ 150 ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಪೊಲೀಸರ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳಾದ ವಿಧಿ ವಿಜ್ಞಾನ, ಅಪರಾಧ ಕಾಯ್ದೆ, ಬೆರಳಚ್ಚು, ವೈದ್ಯಕೀಯ ಪರೀಕ್ಷೆ, ಅಪರಾಧ ಸ್ಥಳದ ಛಾಯಾಗ್ರಹಣ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಸ್ಪರ್ಧೆ ಆಯೋಜಿಸಲಾಗಿತ್ತು. ಪೂರ್ವ ವಲಯ ವ್ಯಾಪ್ತಿಯ ದಾವಣಗೆರೆ, ಚಿತ್ರದುರ್ಗ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಸಿಬ್ಬಂದಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ಕರ್ತವ್ಯ ಕೂಟದ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಪೂರ್ವ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಕೆ.ತ್ಯಾಗರಾಜನ್, ಇಲ್ಲಿ ಜಯ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಪೊಲೀಸ್ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಕೂಟದಲ್ಲಿ ವಿಜೇತರಾಗಿ ಬಹುಮಾನ ಪಡೆಯುವುದ ಕ್ಕಿಂತ, ಸಿಬ್ಬಂದಿ ಪಾಲ್ಗೊಳ್ಳುವಿಕೆ ಅತೀ ಮುಖ್ಯ. ಕಳೆದ ಬಾರಿ ನಡೆದ ಕೂಟದಲ್ಲಿ ಹೆಚ್ಚು ಜನರು ಭಾಗವಹಿಸಿದ್ದರು. ಮುಂದಿನ ವರ್ಷದ ಕೂಟದಲ್ಲಿ ಕನಿಷ್ಠ 200 ಸಿಬ್ಬಂದಿ ಭಾಗವಹಿಸುವಂತೆ ನೋಡಿಕೊಳ್ಳಬೇಕಿದೆ. ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಸಂತೋಷ್ ಉಪಸ್ಥಿತರಿದ್ದರು.