ವಚನವನ್ನು ಹಂಚುವ ಪರಿಪಾಠ ರೂಢಿಸಿಕೊಳ್ಳಿ-ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕರೆ

ವಚನವನ್ನು ಹಂಚುವ ಪರಿಪಾಠ ರೂಢಿಸಿಕೊಳ್ಳಿ-ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕರೆ

ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಕಾರ್ತಿಕ ಮಹೋತ್ಸವ
1) ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದ ಆವರಣದಲ್ಲಿರುವ ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರ ದೇವಸ್ಥಾನದಲ್ಲಿ ಸೋಮವಾರ ಏರ್ಪಡಾಗಿದ್ದ ಕಾರ್ತಿಕ ಮಹೋತ್ಸವಕ್ಕೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.

2) ತರಳಬಾಳು ಬಡಾವಣೆ ಶ್ರೀ ಶಿವಕುಮಾರ ಸ್ವಾಮಿ ಮಹಾಮಂಟಪ ಆವರಣದ ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರ ದೇವಸ್ಥಾನದಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಕಾರ್ತಿಕ ಮಹೋತ್ಸವವನ್ನು ನಂದಾದೀಪ ಬೆಳಗುವ ಮೂಲಕ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಉದ್ಘಾಟಿಸಿದರು.


ವಚನವನ್ನು ಹಂಚುವ ಪರಿಪಾಠ ರೂಢಿಸಿಕೊಳ್ಳಿ-ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕರೆ - Janathavaniದಾವಣಗೆರೆ, ಡಿ. 18- ಪ್ರತಿ ನಿತ್ಯ ಬೆಳಿಗ್ಗೆ ಎದ್ದ ತಕ್ಷಣ ನಿಮಗಿಷ್ಟವಾದ ಒಂದೊಂದು ವಚನಗಳನ್ನು ಸ್ನೇಹಿತರು, ಬಂಧುಗಳಿಗೆ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುವ ಪರಿಪಾಠವನ್ನು ಎಲ್ಲರೂ ರೂಢಿಸಿಕೊಳ್ಳಬೇಕೆಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಕರೆ ನೀಡಿದರು.

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದ ಆವರಣದಲ್ಲಿರುವ ಶ್ರೀ ವಿಶ್ವಬಂಧು ಮರುಳಸಿದ್ಧೇಶ್ವರ ಸ್ವಾಮಿ ಕಾರ್ತಿಕೋತ್ಸವದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚನ್ನಬಸವಣ್ಣ ಸೇರಿದಂತೆ ಹನ್ನೆರಡನೇ ಶತಮಾನದ ವಚನಕಾರರ 22 ಸಾವಿರ ವಚನಗಳನ್ನು ಗಣಕಕ್ಕೆ ಅಳವಡಿಸಿ, ಮೊಬೈಲ್ ಮೂಲಕ ಓದಲು ಅವಕಾಶ ಮಾಡಿಕೊಡಲಾಗಿದೆ ಎಂದರು.

ಫೇಸ್‌ಬುಕ್, ವ್ಯಾಟ್ಸಾಪ್, ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣದ ಮೂಲಕ ವಚನಗಳನ್ನು ತಾವು ಆಲಿಸುವ ಮೂಲಕ ತಮ್ಮ ಸ್ನೇಹಿತರಿಗೂ ಕಳುಹಿಸುವಂತೆ ಸಲಹೆ ನೀಡಿದರು.

ವಿಶ್ವಬಂಧು ಮರುಳಸಿದ್ಧ ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿದ್ದ ಮೌಢ್ಯತೆ ಹಾಗೂ ಧಾರ್ಮಿಕ ಶೋಷಣೆಯನ್ನು ಪ್ರತಿರೋಧಿಸಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು ಎಂದು ಹೇಳಿದರು.

ಎಸ್.ಎಸ್. ಕೇರ್ ಟ್ರಸ್ಟ್ ಲೈಫ್ ಟ್ರಸ್ಟಿ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಕೌಟುಂಬಿಕ ವ್ಯವಸ್ಥೆ ಮತ್ತು ಎಸ್.ಎಸ್. ಕೇರ್ ಸೇವಾ ಕಾರ್ಯಗಳನ್ನು ಕುರಿತು ಮಾತನಾಡಿದರು.

ವಿಶ್ವಬಂಧು ಮರುಳಸಿದ್ಧೇಶ್ವರ ದೇವಸ್ಥಾನ ಕಾರ್ತಿಕ ಸಮಿತಿ ಅಧ್ಯಕ್ಷ ರಾಮಗೊಂಡನಹಳ್ಳಿ ಜಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳಾದ ಮಾಗನೂರು ಸಂಗಮೇಶ್ವರ ಗೌಡ್ರು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮತ್ತಿತರರು ಉಪಸ್ಥಿತರಿದ್ದರು. 

ಪ್ರಭುಗೌಡ್ರು ಕಾಕನೂರು ಸ್ವಾಗತಿಸಿದರು. ಶಿಕ್ಷಕ ಸಿ.ಜಿ. ಜಗದೀಶ ಕೂಲಂಬಿ ನಿರೂಪಿಸಿದರು. ಕೃತಿಕಾ ವಂದಿಸಿದರು.

ಅನುಭವ ಮಂಟಪ ಶಾಲೆ,  ಮಾಗನೂರು ಬಸಪ್ಪ ಶಾಲೆ, ಎಲೆಬೇತೂರು ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ, ತರಳಬಾಳು ಪ್ರೌಢಶಾಲೆ ವಿದ್ಯಾರ್ಥಿಗಳು ವಚನ ನೃತ್ಯ ರೂಪಕಗಳನ್ನು ಪ್ರದರ್ಶಿಸಿದರು. 

error: Content is protected !!