ಮಾಯಕೊಂಡ, ಡಿ. 17 – ಜೀವನ ಹಾಳು ಮಾಡುವ ಮದ್ಯದಂಗಡಿಗೆ ಹೋಗುವ ಬದಲು, ಗುಡಿಗೆ ಹೋಗಿ ದೇವರ ಆರಾಧಿಸುವುದು ಅಭ್ಯಾಸ ಮಾಡಿಕೊಂಡು ನೆಮ್ಮದಿ ಕಂಡುಕೊಳ್ಳಬೇಕು. ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಕರೆ ನೀಡಿದರು.
ಇಲ್ಲಿಗೆ ಸಮೀಪದ ಬಾವಿಹಾಳು ಗ್ರಾಮದಲ್ಲಿ ಇಂದು ಏರ್ಪಾಡಾಗಿದ್ದ ಕರಿಯಮ್ಮ ದೇವಿ ದೇವಸ್ಥಾನ ಉದ್ಘಾಟನೆ ಹಾಗು ಕಳಸಾರೋಹಣ ಕಾರ್ಯಕ್ರಮದಲ್ಲಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ಬಸವಾದಿ ಶರಣರು ದೇಹವನ್ನೇ ಪವಿತ್ರವಾದ ಗುಡಿಯನ್ನಾಗಿಸಿಕೊಳ್ಳಬೇಕು ಎಂದಿದ್ದಾರೆಯೇ ವಿನಾಃ ಗುಡಿ ಸಂಸ್ಕೃತಿ ವಿರೋಧಿಸಿಲ್ಲ, ಎಂದರು.
ಹದಗೆಟ್ಟ ಬಾವಿಹಾಳ್- ಸಿರಿಗೆರೆ ರಸ್ತೆ, ತರಳಬಾಳು ಜಗದ್ಗುರುಗಳ ಕೋಪ 3 ತಿಂಗಳಲ್ಲಿ ದುರಸ್ತಿಗೆ ತಾಕೀತು
ಸಿರಿಗೆರೆ-ಬಾವಿಹಾಳ್ ರಸ್ತೆ ದುರಾ ವಸ್ಥೆಗೆ ತರಳಬಾಳು ಜಗದ್ಗುರುಗಳು ಮಾಜಿ ಶಾಸಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಸರಿಪಡಿಸಲು ಹಾಲಿ ಶಾಸಕರಿಗೆ ತಾಕೀತು ಮಾಡಿ ಬಿಸಿ ಮುಟ್ಟಿಸಿದರು.
ಸಿರಿಗೆರೆಯಿಂದ ಬಾವಿಹಾಳು ಬರುವ ರಸ್ತೆ ತೀರಾ ಹದಗೆಟ್ಟಿದೆ. ಪ್ರೊ. ಲಿಂಗಣ್ಣ ಐದು ವರ್ಷ ಶಾಸಕರಾಗಿದ್ದಾಗಲೂ ರಸ್ತೆ ನಿರ್ಮಾಣ ವಾಗದಿರುವುದು ನಾಚಿಕೆಗೇಡು. 1.85 ಕೋಟಿ ರೂ. ಮೀಸಲಿಟ್ಟರೂ ಕೆಲಸ ಮಾಡ ದಿರುವ ಇಂಜಿನಿಯರ್ ಮೇಲೆ ಕ್ರಮ ಕೈಗೊಳ್ಳಬೇಕಿತ್ತು ಎಂದು ಗುಡುಗಿದರು.
ನೂತನ ಶಾಸಕ ಬಸವಂತಪ್ಪ ಈ ರಸ್ತೆ ಕಾಮಗಾರಿಯನ್ನು ಮೂರು ತಿಂಗಳಲ್ಲಿ ಮುಗಿಸಿ, ಈ ಭಾಗದ ಜನರಿಗೆ ಅನುಕೂಲ ಮಾಡಬೇಕು. ಬಸವಂತಪ್ಪನವರೂ ಕಾಮಗಾರಿ ಮುಗಿಸದಿದ್ದರೆ, ಮುಂದಿನ ಕಾರ್ಯಕ್ರಮಗಳಲ್ಲಿ ನಮ್ಮ ಜೊತೆ ವೇದಿಕೆ ಹಂಚಿಕೊಳ್ಳುವಂತಿಲ್ಲ ಎಂದು ಜಗದ್ಗುರುಗಳು ತಾಕೀತು ಮಾಡಿದರು.
ಜಗದ್ಗುರುಗಳ ಆದೇಶ ಪಾಲಿಸುವೆ : ಶಾಸಕ ಬಸವಂತಪ್ಪ
ಗುರುಗಳ ಆದೇಶದಂತೆ ಸಿರಿಗೆರೆ-ಬಾವಿಹಾಳು ರಸ್ತೆಯನ್ನು ಮೂರು ತಿಂಗಳಲ್ಲಿ ಮುಗಿಸಿ, ಗುರುಗಳ ಆಶಯ ನೆರವೇರಿಸುವುದಾಗಿ ಶಾಸಕ ಬಸವಂತಪ್ಪ ವೇದಿಕೆಯಲ್ಲಿ ಭರವಸೆ ನೀಡಿದರು.
ಗಣೇಶ ಪ್ರತಿಷ್ಠಾಪನೆ, ಪೂಜೆ ವಿಷಯ ಅನಗತ್ಯ ಸದ್ದು ಮಾಡುತ್ತಿದೆ. ಕೆಲವರು ಗಣೇಶ ಪೂಜೆ ನಮ್ಮ ಸಂಪ್ರದಾಯವಲ್ಲ ಎಂದು ಜನರಲ್ಲಿ ಗೊಂದಲವುಂಟುಮಾಡು ತ್ತಿರುವುದು ಅಸಮಂ ಜಸ. ತಮ್ಮಿಚ್ಛೆಯಂತೆ ಧಾರ್ಮಿಕ ಅನುಸರಣೆ ನಮ್ಮ ಸಂವಿಧಾನ ದಲ್ಲಿಯೇ ಧಾರ್ಮಿಕ ಸ್ವಾತಂತ್ರ್ಯ ನೀಡಿದೆ. ದೇವರ ಪೂಜಿಸುವ ನಂಬಿಕೆಗೆ ಅವರಿಗೇ ಸೇರಿದ್ದು, ಎಂದು ಪ್ರತಿಪಾದಿಸಿದರು.
ರಾಜ್ಯದ ನೀರಾವರಿ ಯೋಜನೆಗಳು ಹೆಚ್ಚು ಹೆಚ್ಚು ರೈತರಿಗೆ ತಲುಪಬೇಕಿದೆ. ಭರಮಸಾಗರ ಹಾಗು ಜಗಳೂರು ಭಾಗದ ಕೆರೆಗಳಿಗೆ ನೀರಾವರಿ ಆಗದಿದ್ದರೆ ಆ ಭಾಗದ ರೈತರು ಈ ವರ್ಷ ಉಂಟಾಗಿರುವ ಬರದಲ್ಲಿ ಉಳಿಯುತ್ತಿರಲಿಲ್ಲ. ಈಗಾಗಲೇ ಆವರಿಸಿರುವ ಬರಕ್ಕೆ, ರೈತರ ಪಾಡಂತೂ ಹೇಳತೀರದಾಗುತ್ತಿತ್ತು. ನೀರಾವರಿ ಯೋಜನೆಗಳ ಯಶಸ್ಸಿಗೆ, ಎಲ್ಲ ಸರ್ಕಾರಗಳ ಸಹಕಾರ ಇದೆ. ಸಂಸದ ಸಿದ್ದೇಶ್ವರ ಕೂಡಾ ಸಹಕಾರ ನೀಡಿದ್ದಾರೆ. ಇನ್ನು ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಗಬೇಕಿದೆ, ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಕೆ.ಎಸ್. ಬಸವಂತಪ್ಪ, ಮಾಜಿ ಶಾಸಕ ಪ್ರೊ. ಎನ್. ಲಿಂಗಣ್ಣ, ನರಗನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಆಶಾ ನಾಗರಾಜ, ಸದಸ್ಯರಾದ ಕಲ್ಲೇಶಪ್ಪ, ಮೀನಾಕ್ಷಮ್ಮ, ಅಕ್ಕಮ್ಮ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮುಖಂಡರಾದ ನೀಲಕಂಠಪ್ಪ, ಮರುಳಸಿದ್ದಪ್ಪ, ರುದ್ರಪ್ಪ. ಬಸವರಾಜಪ್ಪ, ರತ್ನಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಾವಿಹಾಳು ಕುಮಾರ್ ನಿರೂಪಿಸಿದರು.