ಶ್ರೀ ಶಿವಯೋಗಿ ಸಿದ್ದರಾಮೇಶ್ವರ ದೇವರ 61ನೇ ರಥೋತ್ಸವ, ಲಿಂ. ಸಿದ್ಧರಾಮೇಶ್ವರ ಮಹಾಸ್ವಾಮಿಗಳ 21ನೇ ಸ್ಮರಣೋತ್ಸವ
ಭೋವಿ ಸಮಾಜಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಕರೆ
ದಾವಣಗೆರೆ, ಆ.21- ಭೋವಿ ಸಮಾಜ ಬಾಂಧವರು ಸಂಘಟನೆಯ ಜತೆಗೆ ಮಕ್ಕಳಿಗೆ ಶಿಕ್ಷಣ ಕೊಡಿಸಲು ಒತ್ತು ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಕರೆ ನೀಡಿದರು.
ಬುಧವಾರ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದಿಂದ ನಗರದ ವೆಂಕಭೋವಿ ಕಾಲೋನಿಯಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ದೇವರ 61ನೇ ರಥೋತ್ಸವ ಹಾಗೂ ಲಿ.ಸಿದ್ದರಾಮೇಶ್ವರ ಮಹಾಸ್ವಾಮೀಜಿ ಯವರ 21ನೇ ಸಂಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭೋವಿ ಸಮಾಜದ ಸಂಘಟನೆಗೆ ಸಿದ್ಧರಾಮೇಶ್ವರ ದೇವರ ರಥೋತ್ಸವವೇ ಸಾಕ್ಷಿಯಾಗಿದೆ. ಸಮುದಾಯಕ್ಕೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸೌಲಭ್ಯ ದೊರೆಯಬೇಕಾದರೆ ಸಮಾಜಬಾಂಧವರು ಮತ್ತಷ್ಟು ಸಂಘಟಿತ ಹೋರಾಟ ನಡೆಸುವ ಅಗತ್ಯವಿದೆ ಎಂದು ಹೇಳಿದರು.
ವಯಸ್ಸಿನಲ್ಲಿ ಚಿಕ್ಕವರಿದ್ದರೂ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರು ಸಮಾಜ ಸಂಘಟನೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಶ್ರೀಗಳು ಒಂದು ಜಾತಿಗೆ ಸೀಮಿತರಾಗದೆ ಎಲ್ಲ ಸಮುದಾಯಗಳ ಮಠಾಧೀಶರನ್ನು ಆಹ್ವಾನಿಸಿ ಆ ಎಲ್ಲ ಸಮಾಜಗಳ ಸಂಘಟನೆಗೂ ಶಕ್ತಿ ತುಂಬುತ್ತಿದ್ದಾರೆ ಎಂದು ಹೇಳಿದರು.
ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡುತ್ತಾ, ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳನ್ನು ಪಡೆದ ಭೋವಿ ಸಮುದಾಯವರು ಪುಣ್ಯವಂತರು. ಭೋವಿ ಸಮಾಜದ ಲಿಂ. ಸಿದ್ದರಾಮೇಶ್ವರ ಸ್ವಾಮೀಜಿ ಸ್ಕೂಟಿ ಮೂಲಕ ಹಳ್ಳಿ-ಹಳ್ಳಿಗೆ ತೆರಳಿ ಜಾಗೃತಿ ಮೂಡಿಸಿದ್ದರು.
ಹಾಗೆಯೇ ಈಗಿನ ಶ್ರೀಗಳು ಸಹ ಸಾಕಷ್ಟು ಜನಜಾಗೃತಿ ಮೂಡಿಸುತ್ತಿದ್ದಾರೆ. ಅವರ ಇಚ್ಛಾಸಕ್ತಿಯಿಂದಾಗಿ ಯಾವುದೇ ಸರ್ಕಾರದ ಸಂಪುಟದಲ್ಲಿ ಭೋವಿ ಸಮಾಜದವರು ಸ್ಥಾನ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಭೋವಿ ಸಮಾಜ ಕಟ್ಟುವ ದಿಸೆಯಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳಿಗೆ ಸಮುದಾಯದವರೂ ಕೈಜೋಡಿಸಬೇಕು ಎಂದು ಕಿವಿಮಾತು ಹೇಳಿದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಶೋಷಿತ ಸಮುದಾಯಗಳಿಗೆ ಧಾರ್ಮಿಕ ನೆಲೆಗಟ್ಟಿನಡಿ ಶಕ್ತಿ ತುಂಬಬೇಕಿದೆ. ಮಧ್ಯಕರ್ನಾಟಕದಲ್ಲಿ ಭೋವಿ ಸಮುದಾಯ ಸದೃಢ ಮತ್ತು ಸಶಕ್ತ ಸಮಾಜವಾಗಿ ಸಂಘಟಿತವಾಗಲು ಸಚಿವ ಶಿವರಾಜ ತಂಗಡಗಿ ಕಾರಣರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶ್ರೀರೇಣುಕಾನಂದ ಸ್ವಾಮೀಜಿ, ಡಾ. ಬಸವ ಕುಮಾರ ಸ್ವಾಮೀಜಿ, ಶ್ರೀ ವೇಮನಾನಂದ ಸ್ವಾಮೀಜಿ, ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಡಾ.ಬಸವ ಮಾಚಿದೇವ ಸ್ವಾಮೀಜಿ, ಶ್ರೀಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ, ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಶ್ರೀ ಇಮ್ಮಡಿ ಬಸವಪ್ರಭು ಕೇತೇಶ್ವರ ಸ್ವಾಮೀಜಿ, ಶ್ರೀ ಶಾಂತಲಿಂಗ ಸ್ವಾಮೀಜಿ, ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ, ಶ್ರೀ ಬಸವ ಮಹಾಲಿಂಗ ಸ್ವಾಮೀಜಿ, ಶ್ರೀ ಬಸವ ಪ್ರಸಾದ ಸ್ವಾಮೀಜಿ, ಶ್ರೀ ಮರುಳಶಂಕರ ಸ್ವಾಮೀಜಿ, ಜಯದೇವ ಸ್ವಾಮೀಜಿ, ಶ್ರೀ ಗುರುಬಸವ ಸ್ವಾಮೀಜಿ, ಕೆಪಿಸಿಸಿ ವಕ್ತಾರ, ಭೋವಿ ಸಮುದಾಯದ ಮುಖಂಡ ಡಿ. ಬಸವರಾಜ್, ಎಚ್. ಜಯಣ್ಣ ಮತ್ತಿತರರಿದ್ದರು.