ವಿರಕ್ತ ಮಠದಲ್ಲಿನ ‘ಶರಣ ಚರಿತಾಮೃತ ಪ್ರವಚನ’ದ ಉದ್ಘಾಟನೆಯಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಶ್ಲ್ಯಾಘನೆ
ದಾವಣಗೆರೆ, ಆ. 17- ಅಕ್ಷರ ಮತ್ತು ಅನ್ನ ದಾಸೋಹಕ್ಕೆ ರಾಜ್ಯದಲ್ಲೇ ಚಿತ್ರದುರ್ಗ ಮುರುಘಾಮಠವು ಮಾದರಿಯಾಗಿದೆ. 1911 ರಲ್ಲಿ ಪ್ರಾರಂಭವಾದ ಶ್ರಾವಣ ಮಾಸದ ‘ಶರಣ ಚರಿತಾಮೃತ ಪ್ರವಚನ’ ನಿರಂತರವಾಗಿ ನಡೆದುಕೊಂಡು ಬಂದು ಇಂದಿಗೆ 113 ನೇ ವರ್ಷಕ್ಕೆ ಕಾಲಿರಿಸಿದ್ದು, ಇದೊಂದು ಸ್ಮರಣೀಯ ಕಾರ್ಯಕ್ರಮ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಬಣ್ಣಿಸಿದರು.
ನಗರದ ವಿರಕ್ತಮಠದಲ್ಲಿ ಬಸವ ಕೇಂದ್ರ, ಶ್ರೀ ಮುರುಘರಾಜೇಂದ್ರ ವಿರಕ್ತಮಠ, ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ದಾವಣಗೆರೆ ಇವರ ವತಿಯಿಂದ ಹಮ್ಮಿಕೊಂಡಿರುವ `ಶರಣ ಚರಿತಾಮೃತ ಪ್ರವಚನ’ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮುರುಘಾ ಮಠವು ಶಿಕ್ಷಣ ಮತ್ತು ಅನ್ನ ದಾಸೋಹಕ್ಕೆ ಹೆಸರಾಗಿದ್ದು, ಸಮಾಜಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿದೆ. ಡಾ. ಮುರುಘಾ ಶರಣರ ಸಮಾಜ ಸೇವಾ ಕಾರ್ಯವನ್ನು ಸ್ಮರಿಸಬೇಕಾಗಿದೆ. ಹಾಲಿ ಉಸ್ತುವಾರಿ ವಹಿಸಿಕೊಂಡಿರುವ ಶ್ರೀ ಬಸವ ಪ್ರಭು ಸ್ವಾಮೀಜಿ ಕೂಡ ಮುರುಘಾ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದು, ಅವರ ಸೇವೆ ಶ್ಲಾಘನೀಯ ಎಂದರು.
ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿನ ಮುರುಘಾಮಠದ ಅಮೋಘ ಸೇವೆಯನ್ನು ಯಾರೂ ಕೂಡ ಮರೆಯುವಂತಿಲ್ಲ. ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.
ಜನರ ಮನಸ್ಸಿಗೆ ತಿಳಿವಳಿಕೆ ನೀಡುವ ಸದುದ್ಧೇಶ ಪ್ರವಚನದ್ದು, ಸಂಸ್ಕಾರ ಮತ್ತು ಸಂಸ್ಕೃತಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಕೂಡ ಇದೆ. ಮುಂದಿನ ಪೀಳಿಗೆಗೆ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದರು.
ಭರಮಸಾಗರ ಎಸ್‌ಎಂಎಲ್ ಮೋಟಾರ್ಸ್ ಮಾಲೀಕ ಹೆಚ್.ಎನ್. ತಿಪ್ಪೇಸ್ವಾಮಿ ಮಾತನಾಡಿ, ನಾಡಿನ ವಿರಕ್ತ ಮಠಗಳು ಮುರುಘಾ ಪರಂಪರೆ ಯನ್ನು ನಿರಂತರವಾಗಿ ಮುಂದುವರೆಸಿಕೊಂಡು ಬರುತ್ತಿದ್ದು, ಅಧ್ಯಾತ್ಮಿಕ ಪ್ರವಚನಗಳ ಮೂಲಕ ಜನರಿಗೆ ಮಾನಸಿಕ ನೆಮ್ಮದಿ ನೀಡುವ ಕೆಲಸ ಮಾಡುತ್ತಾ ಬಂದಿವೆ. ವಸತಿ ಮತ್ತು ದಾಸೋಹ ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಬದುಕು ಸುಗಮವಾಗಿ ಸಾಗಲು ಕಾಯಕ ಬೇಕು. ಆ ಕಾಯಕ ಯಾವುದಾದರೂ ಆಗಲಿ ಅದರೊಳಗೆ ಆನಂದವನ್ನು ಕಂಡರೆ, ಅದಕ್ಕಿಂತ ಬೇರೆ ಕೈಲಾಸವಿಲ್ಲ ಎಂದರು.
ಜೀವನದ ಖಿನ್ನತೆ, ಅತಿಯಾದ ಹೊಯ್ದಾಟಕ್ಕೆ ಒಳಗಾದ ಇಂದಿನ ಯುವ ಸಮುದಾಯ, ದುಡಿಯುವ ಜನರು, ವ್ಯಾಪಾರಸ್ಥರು, ಗೃಹಿಣಿಯರು, ವೃತ್ತಿಪರರು, ವಿದ್ಯಾರ್ಥಿಗಳು ಹೀಗೆ ವಿವಿದ ಸ್ತರದಲ್ಲಿರುವವರಿಗೂ ಶರಣ ಚರಿತಾಮೃತ ಪ್ರವಚನ ನಿರಾಳದ ಬದುಕಿಗೆ ಅಡಿಪಾಯವನ್ನು ಒದಗಿಸುತ್ತದೆ ಎಂದು ಹೇಳಿದರು.
ಮನಸ್ಸು ಅರಳಿಸುವ ಮಾತುಗಳೇ ಪ್ರವಚನ. ಇಂತಹ ನುಡಿಗಳನ್ನು ಕೇಳಿದಾಗ ಶಾರೀರಿಕ ಆರೋಗ್ಯವನ್ನು ಪಡೆಯುವುದರೊಂದಿಗೆ ಮಾನಸಿಕ, ಸಾಮಾಜಿಕ, ಅಧ್ಯಾತ್ಮಿಕ ಆರೋಗ್ಯವನ್ನು ಸಾಧಿಸಿ ನೆಮ್ಮದಿ ಸಂತೃಪ್ತಿಯ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂದರು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಮುರುಘ ರಾಜೇಂದ್ರ ವಿದ್ಯಾವರ್ಧಕ ಫಂಡ್ ಕಾರ್ಯದರ್ಶಿ ಎಂ. ಜಯಕುಮಾರ್, ಶಿವಯೋಗಾಶ್ರಮ ಟ್ರಸ್ಟ್ ಕಾರ್ಯದರ್ಶಿ ಅಂದನೂರು ಮುಪ್ಪಣ್ಣ, ವಿರಕ್ತ ಮಠದ ಧರ್ಮದರ್ಶಿ ಸಮಿತಿ ಕಾರ್ಯದರ್ಶಿ ಕಣಕುಪ್ಪಿ ಮುರುಗೇಶಪ್ಪ ಮತ್ತಿತರರು ಉಪಸ್ಥಿತರಿದ್ದರು.
ಹುಬ್ಬಳ್ಳಿಯ ಆಯುರ್ವೇದ ವೈದ್ಯ ಡಾ. ಎನ್.ಬಿ. ನಾಗರಹಳ್ಳಿ `ಶರಣ ಚರಿತಾಮೃತ ಪ್ರವಚನ’ ನಡೆಸಿಕೊಟ್ಟರು. ಬಸವ ಕಲಾ ಲೋಕದ ಅರುಣ, ಅಭಿಷೇಕ ವಚನ ಗಾಯನ ನಡೆಸಿಕೊಟ್ಟರು. ಕುಂಟೋಜಿ ಚನ್ನಪ್ಪ ಸ್ವಾಗತಿಸಿದರು. ಫಾರೂಖ್ ನಿರೂಪಿಸಿದರು.