ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ಗೆ ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕ್ಲಾಸ್
ದಾವಣಗೆರೆ, ಆ. 13 – ಉತ್ತರ ಕರ್ನಾಟಕದ ಜಿಲ್ಲಾ ಸಹಕಾರ ಬ್ಯಾಂಕುಗಳು ರೈತರಿಗೆ ದೊಡ್ಡ ಪ್ರಮಾಣದಲ್ಲಿ ಸಾಲ ಕೊಟ್ಟು ಪ್ರಗತಿಗೆ ನೆರವಾಗುತ್ತಿವೆ. ಈ ದಿಸೆಯಲ್ಲಿ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿ.ಸಿ.ಸಿ.) ಹಿಂದೆ ಬಿದ್ದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲಾ ಸಹಕಾರಿಗಳಿಂದ ನೂತನ ಸಚಿವ ಹಾಗೂ ಶಾಸಕರಿಗೆ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಬಿಜಾಪುರ ಸೇರಿದಂತೆ ಹಲವು ಜಿಲ್ಲಾ ಬ್ಯಾಂಕುಗಳು ರೈತರಿಗೆ ಹೆಚ್ಚಿನ ಸಾಲ ಕೊಡುತ್ತಿವೆ. ರೈತರು ಅಭಿವೃದ್ಧಿ ಕಾಣುತ್ತಿದ್ದಾರೆ. ಇದೇ ರೀತಿಯ ಅಭಿವೃದ್ಧಿಗೆ ದಾವಣಗೆರೆ ಬ್ಯಾಂಕ್ ಸಹಕರಿಸಬೇಕು. ಪರಿಶಿಷ್ಟರು ಹಾಗೂ ಬಡವರಿಗೆ ಹೆಚ್ಚಿನ ಸಾಲ ಕೊಡಬೇಕು ಎಂದರು.
ಉತ್ತರ ಕರ್ನಾಟಕದ ಬ್ಯಾಂಕುಗಳು 4-5 ಸಾವಿರ ಕೋಟಿ ರೂ. ಸಾಲ ಕೊಡುತ್ತಿವೆ. 400ರಿಂದ 500 ಕೋಟಿ ರೂ. ಲಾಭ ಗಳಿಸುತ್ತಿವೆ. ದಾವಣಗೆರೆ ಜಿಲ್ಲಾ ಸಹಕಾರಿ ಬ್ಯಾಂಕ್ 1,100 ಕೋಟಿ ರೂ.ಗಳ ಸಾಲ ಕೊಟ್ಟಿದೆ ಎಂದವರು ಹೇಳಿದರು.
ಡಿ.ಸಿ.ಸಿ. ಬ್ಯಾಂಕ್ ಕಂಪ್ಯೂಟರೀಕರಣ ಇನ್ನೂ ಆಗಿಲ್ಲ. ಈ ಕೆಲಸ ತ್ವರಿತ ಆಗಬೇಕಿದೆ. ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕುಗಳ ಜೊತೆ ಮಾತನಾಡಿದರೆ ಸಾಕಷ್ಟು ಹಣ ಸಿಗುತ್ತದೆ. ಈ ಹಣ ಪಡೆದು ರೈತರಿಗೆ ಸಾಲವಾಗಿ ನೀಡಬೇಕು ಎಂದರು.
ಬಿಜೆಪಿ ಅವಧಿಯಲ್ಲಿ ಕೆಲಸ ಮಾಡದೇ ಬಿಲ್ ಪಡೆಯಲಾಗಿದೆ. ಈ ರೀತಿಯ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಶಿಕ್ಷೆ ನೀಡಿದಾಗ, ಮುಂದೆ ತಪ್ಪಾಗದಂತೆ ತಡೆಯಬಹುದು.
– ಶಾಸಕ ಶಾಮನೂರು ಶಿವಶಂಕರಪ್ಪ
ಸಹಕಾರಿ ಸಂಘಗಳ ಆಡಳಿತ ಮಂಡಳಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಪ್ರತ್ಯೇಕವಾಗಿ ಎರಡು ಸೀಟು ನೀಡಬೇಕು. ಪರಿಶಿಷ್ಟರಿಗೆ ಸಮರ್ಪಕವಾಗಿ ಸಾಲ ಸೌಲಭ್ಯ ಸಿಗುವಂತಾಗಬೇಕು.
– ಶಾಸಕ ಕೆ.ಎಸ್. ಬಸವಂತಪ್ಪ
ರೈತರ ಬದುಕು ಸಹಕಾರದಿಂದ ಹಸನಾಗಲು ಸಾಧ್ಯ. ಸಹಕಾರಿ ವಲಯ ಸಂಘಟಿತವಾಗಿ ಸರ್ಕಾರದಿಂದ ಅಗತ್ಯ ಸೌಲಭ್ಯಗಳನ್ನು ಪಡೆಯುವ ಜೊತೆಗೆ, ರೈತರಿಗೂ ನೆರವು ತಲುಪಿಸಬೇಕು.
– ಶಾಸಕ ಬಿ. ದೇವೇಂದ್ರಪ್ಪ
ದಾವಣಗೆರೆಯಲ್ಲಿ ಪ್ರತ್ಯೇಕ ಹಾಲಿನ ಒಕ್ಕೂಟ ರೂಪುಗೊಳ್ಳಬೇಕಿದೆ. ಹಾಲಿನ ಪ್ರೋತ್ಸಾಹ ಧನವನ್ನು 10 ರೂ.ಗಳಿಗೆ ಹೆಚ್ಚಿಸಬೇಕು. 13 ಸಾವಿರ ರೈತರಿಗೆ ಸಾಲ ಮನ್ನಾ ಲಾಭ ಇನ್ನೂ ತಲುಪಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು.
– ಶಾಸಕ ಡಿ.ಜಿ. ಶಾಂತನಗೌಡ
ಸಹಕಾರಿ ಸೊಸೈಟಿ ಹಾಗೂ ಬ್ಯಾಂಕುಗಳು ಲೆಕ್ಕದಲ್ಲಿ ಶಿಸ್ತು ಹೊಂದಿದಾಗ ಹಾಗೂ ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡಿದಾಗ ಪ್ರಗತಿ ಸಾಧ್ಯ. ಮಹಾರಾಷ್ಟ್ರ ಹಾಗೂ ಗುಜರಾತ್ಗಳನ್ನು ಹಿಂದಿಕ್ಕಿ ಕರ್ನಾಟಕದ ಸಹಕಾರ ವಲಯವು ಪ್ರಗತಿ ಕಾಣಬೇಕು.
– ಶಾಸಕ ಬಿ.ಪಿ. ಹರೀಶ್
ರೈತರಿಗೆ ಸಹಕಾರಿ ವಲಯವೇ ಬೆನ್ನೆಲುಬಾಗಿದೆ. ರೈತರಿಗೆ ಐದು ಲಕ್ಷ ರೂ.ಗಳವರೆಗೆ ಬಡ್ಡಿ ರಹಿತ ಸಾಲದ ಯೋಜನೆ ಸರ್ಕಾರ ಪ್ರಕಟಿಸಿದ್ದು, ಇದನ್ನು ರೈತರಿಗೆ ತಲುಪಿಸಬೇಕು. ಸಮಯಕ್ಕೆ ಸರಿಯಾಗಿ ಸಾಲ ನವೀಕರಿಸಬೇಕು.
– ಶಾಸಕ ಬಸವರಾಜ್ ಶಿವಗಂಗಾ
ಹಾಲು ಒಕ್ಕೂಟ, ಹಸು ಸಬ್ಸಿಡಿ
ಆರು ವರ್ಷಗಳ ಹಿಂದೆಯೇ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳನ್ನು ಸೇರಿಸಿ ಪ್ರತ್ಯೇಕ ಹಾಲಿನ ಒಕ್ಕೂಟ ಸ್ಥಾಪಿಸಲು ಮುಂದಾಗಿದ್ದೆ. ಆದರೆ, ಅದಕ್ಕೂ ಅಡ್ಡಿಪಡಿಸಿದರು. ಸರ್ಕಾರ ಬದಲಾದ ನಂತರ ಇಲ್ಲಿಯವರೆಗೂ ಯೋಜನೆಯಲ್ಲಿ ಪ್ರಗತಿಯಾಗಿಲ್ಲ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಬೇಸರ ವ್ಯಕ್ತಪಡಿಸಿದರು.
ಈಗ ಹಾಲಿನ ಒಕ್ಕೂಟ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಜೊತೆಗೆ, ಹಸು ಖರೀದಿಗೆ 40 ಸಾವಿರ ರೂ.ಗಳ ಸಬ್ಸಿಡಿ ಕೊಡಿಸುವ ಜವಾಬ್ದಾರಿ ನನ್ನದು. ಜಿಲ್ಲೆಯಲ್ಲಿ 5-10 ಸಾವಿರ ಹಸುಗಳ ಖರೀದಿಗಾದರೂ ಸಬ್ಸಿಡಿ ಕೊಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನೂ ತಲುಪದ ಮನ್ನಾ ಹಣ
ಕೊಡಗನೂರು ಪತ್ತಿನ ಸಹಕಾರ ಸಂಘದಲ್ಲಿ ಲೆಕ್ಕ ಪರಿಶೋಧನೆ ಮಾಡಿಸದ ಕಾರಣ ರೈತರ ಸಾಲ ಮನ್ನಾ ಹಣ ಬಾಕಿ ಉಳಿದಿದೆ. ಅದರ ಬಡ್ಡಿಯೂ ಬೆಳೆದಿದೆ. ರೈತರು ಹಳೆ ಸಾಲ ತೀರಿಸಲಾಗದೇ, ಹೊಸ ಸಾಲ ಪಡೆಯಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಸಹಕಾರಿ ವಲಯದ ಮುಖಂಡರ ವರ್ತನೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಯಾವ ಪಕ್ಷ ಅಧಿಕಾರದಲ್ಲಿರುತ್ತದೋ ಅತ್ತ ಕಡೆ ಹೋಗುತ್ತಿದ್ದೀರಿ. ಯಾವ ಪಕ್ಷದ ಕಡೆಯೂ ಗುರುತಿಸಿಕೊಳ್ಳದೇ ಸಹಕಾರಿ ಪಕ್ಷವಾಗಿದ್ದು ಕೆಲಸ ಮಾಡಬೇಕು ಎಂದರು.
ಜಿಲ್ಲಾ ಸಹಕಾರ ಒಕ್ಕೂಟಕ್ಕೆ ನಿವೇಶನ ಬೇಕೆಂಬ ಮನವಿ ಸಲ್ಲಿಸಿರುವ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಈ ಹಿಂದೆಯೇ ನಿವೇಶನ ಕೊಡಲಾಗಿತ್ತು. ಆದರೆ, ನಿಮ್ಮಲ್ಲಿನ ಸಂಘರ್ಷದಿಂದ ಪ್ರಸ್ತಾವನೆ ಅಲ್ಲೇ ನಿಂತಿತು. ಆ ರೀತಿ ಆಗಬಾರದು ಎಂದು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ ಮಾತನಾಡಿ, ಪತ್ತಿನ ಸಹಕಾರ ಸಂಘಗಳಿಗೆ ನಿವೇಶನ ಹಾಗೂ ಸುಸಜ್ಜಿತ ಕಟ್ಟಡ ಕಲ್ಪಿಸಬೇಕು. ಸಾಲ ಮನ್ನಾದ ಬಾಕಿ ಉಳಿದಿರುವ 8.57 ಕೋಟಿ ರೂ.ಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಿದರು.
ವೇದಿಕೆಯ ಮೇಲೆ ಶಾಸಕರಾದ ಶಾಮನೂರು ಶಿವಶಂಕರಪ್ಪ, ಡಿ.ಜಿ. ಶಾಂತನಗೌಡ, ಬಿ.ಪಿ. ಹರೀಶ್, ಬಸವರಾಜ ವಿ. ಶಿವಗಂಗಾ, ಬಿ. ದೇವೇಂದ್ರಪ್ಪ, ಕೆ.ಎಸ್. ಬಸವಂತಪ್ಪ, ಮಾಜಿ ಶಾಸಕ ಎಸ್. ರಾಮಪ್ಪ, ಹಿರಿಯ ಸಹಕಾರಿ ಎನ್.ಜಿ. ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.