ದಾವಣಗೆರೆ, ಆ. 13- ನಗರದ ಪ್ರತಿಷ್ಠಿತ ದಾವಣಗೆರೆ ಕ್ಲಬ್ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡೈನಿಂಗ್ ಹಾಲ್, ದ್ವಿಚಕ್ರ ವಾಹನ ನಿಲ್ದಾಣ ಹಾಗೂ ಹೊಸ ಉಲ್ಲಾಸ ಕಾಮಗಾರಿಗಳನ್ನು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಇಂದು ಸಂಜೆ ಉದ್ಘಾಟಿಸಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಮಲ್ಲಿಕಾರ್ಜುನ್, `ದಾವಣಗೆರೆ ಕ್ಲಬ್ ಮುಂದಿನ ದಿನಗಳಲ್ಲಿ ಫ್ಯಾಮಿಲಿ ಕ್ಲಬ್ ಆಗಲಿ’ ಎಂದು ಆಶಿಸಿದರು.
ಬೆಳಿಗ್ಗೆಯಿಂದ ಸಂಜೆ ವರೆಗೆ ವ್ಯಾಪಾರ ವಹಿವಾಟು ನಡೆಸುವ ಅನೇಕ ಹಿರಿಯರು ಈ ಕ್ಲಬ್ಗೆ ಬಂದು ಮಾನಸಿಕ ನೆಮ್ಮದಿ, ಮನರಂಜನೆ ಪಡೆಯುತ್ತಾರೆ. ಕೇವಲ ಪುರುಷರು ಮಾತ್ರ ಇಲ್ಲಿಗೆ ಬರುತ್ತಾರೆ. ಬೆಂಗಳೂರಿನಲ್ಲಿರುವ ಕ್ಲಬ್ಗಳ ಮಾದರಿಯಲ್ಲಿ ಸದಸ್ಯರ ಪತ್ನಿಯರೂ ಆಗಮಿಸುವಂತಾಗಲಿ. ಈ ಬಗ್ಗೆ ಆಡಳಿತ ಮಂಡಳಿ ಚಿಂತಿಸಲಿ ಎಂದು ಹೇಳಿದರು.
ಕ್ಲಬ್ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ ಸಚಿವರು, ಹೆಚ್ಚಿನ ಜಾಗ ಬೇಕಾದರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾ ರದಿಂದ ಕೊಡಿಸಲಾಗುವುದು. ಈಜುಕೊಳ ಸೇರಿದಂತೆ ವಿವಿಧ ಸೌಲಭ್ಯಗಳನ್ನೊಳಗೊಂಡು ಬೃಹತ್ ಮಟ್ಟದಲ್ಲಿ ಕ್ಲಬ್ ಅಭಿವೃದ್ಧಿಯಾಗಲಿ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ ಮಾತನಾಡಿ, ಕ್ಲಬ್ಗೆ ಡೈನಿಂಗ್ ಹಾಲ್ ಅಗತ್ಯತೆ ಹೆಚ್ಚಾಗಿತ್ತು. ಇದೀಗ ಸುಂದರವಾಗಿ ನಿರ್ಮಾಣವಾಗಿದೆ. ಅಲ್ಲದೇ, ದ್ವಿಚಕ್ರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಯನ್ನೂ ಸಹ ಸುಂದರವಾಗಿ ನಿರ್ಮಿ ಸಲಾಗಿದೆ ಎಂದು ಶ್ಲ್ಯಾಘಿಸಿದರು.
5 ಸಾವಿರ ಕೊಟ್ಟು ಸದಸ್ಯನಾಗಿದ್ದೆ
ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ 5 ಸಾವಿರ ರೂಪಾಯಿ ಕೊಟ್ಟು ದಾವಣಗೆರೆ ಕ್ಲಬ್ ಸದಸ್ಯನಾಗಿದ್ದೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೆನಪಿಸಿಕೊಂಡರು. ಸದಸ್ಯರನ್ನಾಗಿ ಮಾಡುವಂತೆ ಸೋಮನಾಥ ಆರಾಧ್ಯ ಅವರ ಬಳಿ ಕೇಳಿಕೊಂಡಿದ್ದೆ. ನನ್ನ ಜೊತೆ ಇದ್ದ 35 ಸ್ನೇಹಿತರಿಗೂ ಸದಸ್ಯತ್ವ ನೀಡುವಂತೆ ಕೇಳಿದ್ದೆ. ಅವರು ಎಲ್ಲರಿಗೂ ಸದಸ್ಯತ್ವ ನೀಡಿದ್ದರು. ಅವರನ್ನು ಇಂದು ನೆನೆಯಲೇ ಬೇಕಿದೆ ಎಂದು ಎಸ್ಸೆಸ್ಸೆಂ ಹೇಳಿದರು. ಅಂದಿನಿಂದ ಇಂದಿನವರೆಗೂ ಕ್ಲಬ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಿನಪೂರ್ತಿ ಶ್ರಮ ವಹಿಸಿ ದುಡಿದು ಬರುವವರಿಗೆ ಸಂಜೆ ವೇಳೆ ವಿಶ್ರಾಂತಿ ಬೇಕು. ಅದಕ್ಕಾಗಿ ಇಂತಹ ಕ್ಲಬ್ಗಳ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಾ, ಕ್ಲಬ್ನಿಂದ ಮನೆಗೆ ತೆರಳಿದ ಮೇಲೆ ಕುಟುಂಬದವ ರೊಂದಿಗೆ ಜಗಳವಾಡದೆ ಪ್ರೀತಿಯಿಂದ ಇರುವಂತೆಯೂ ಸದಸ್ಯರಿಗೆ ಕಿವಿ ಮಾತು ಹೇಳಿದರು.
ಹಿರಿಯ ಲೆಕ್ಕ ಪರಿಶೋಧಕ ಅಥಣಿ ಎಸ್. ವೀರಣ್ಣ ಮಾತನಾಡಿ, ಕ್ಲಬ್ಗೆ ಸೇರಿದ ಮಳಿಗೆಗಳ ಮೇಲೆ ಕಟ್ಟಡ ನಿರ್ಮಿಸಿ ಮತ್ತಷ್ಟು ಆದಾಯ ಪಡೆಯಬಹುದಾಗಿದೆ. 580 ಸದಸ್ಯರಿದ್ದು, ಕೆಲವರು ಮಾತ್ರ ಕ್ಲಬ್ಗೆ ಆಗಮಿಸುತ್ತಾರೆ. ಕ್ಲಬ್ಗೆ ಬರುವವರ ಸಂಖ್ಯೆ ಹೆಚ್ಚಾಗಲಿ ಎಂದರು.
ದಾವಣಗೆರೆ ಕ್ಲಬ್ ಅಧ್ಯಕ್ಷ ಎ.ಬಿ. ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಕ್ಲಬ್ ಖಜಾಂಚಿ ಲಿಂಗರಾಜ ವಾಲಿ ಹೆಚ್.ಸಿ., ಮಾಜಿ ಅಧ್ಯಕ್ಷ ಎಸ್.ಕೆ. ವೀರಣ್ಣ, ನಿರ್ದೇಶಕರುಗಳಾದ ಬೆಳ್ಳೂಡಿ ಸದಾನಂದ, ರುದ್ರೇಶ್ ಹೆಚ್.ವಿ., ಅಭಿಷೇಕ್ ಬೇತೂರು, ಬಾದಾಮಿ ಮಲ್ಲಿಕಾರ್ಜುನ್, ತಿಮ್ಮರಾಜ ಗುಪ್ತಾ ಎಸ್.ಕೆ. ಉಪಸ್ಥಿತರಿದ್ದರು.
ಗೌರವ ಕಾರ್ಯದರ್ಶಿ ರವಿಶಂಕರ್ ಪಲ್ಲಾಗಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜಯ್ ನಾರಾಯಣ್ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ಎಸ್.ಜಿ. ಉಳುವಯ್ಯ ಸ್ವಾಗತಿಸಿದರು. ನಿರ್ದೇಶಕ ಎಸ್.ಕೆ. ಪ್ರಶಾಂತ್ ಗುಪ್ತಾ ವಂದಿಸಿದರು.