ದಾವಣಗೆರೆ, ಆ.13- ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಸುಭದ್ರ ಸಮಾಜ ಕಟ್ಟಲು ಆದರ್ಶಗಳೇ ದಾರಿದೀಪ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜೆ ಹಾಗೂ ಜನ ಜಾಗೃತಿ ಧರ್ಮ ಸಮಾವೇಶದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯು ವುದೇ ನಿಜವಾದ ಧರ್ಮ. ಸಂವೇದನಾಶೀಲ ಜೀವನಕ್ಕೆ ವೀರಶೈವ ಧರ್ಮ ಕೊಟ್ಟ ಕೊಡುಗೆ ಅಮೋಘ. ಶಿಕ್ಷಣ ಆರೋಗ್ಯ ಮತ್ತು ಅಭಿವೃದ್ಧಿ ವಿಚಾರಗಳಲ್ಲಿ ರಾಜಕೀಯ ಪ್ರವೇಶ ಒಳ್ಳೆಯದಲ್ಲ ಎಂದು ಹೇಳಿದರು.
ನೀರಿಲ್ಲದ ನದಿ, ಅತಿಥಿಯಿಲ್ಲದ ಮನೆ, ಫಲವಿಲ್ಲದ ವೃಕ್ಷ ಹೇಗೆ ವ್ಯರ್ಥವೋ ಹಾಗೆಯೇ ಜೀವನದಲ್ಲಿ ಗುರು ಮತ್ತು ಗುರಿ ಇಲ್ಲದಿದ್ದರೆ ಬಾಳು ನಿರರ್ಥಕವಾಗುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಧರ್ಮದ ಸಂವಿಧಾನದಲ್ಲಿ ನಿರೂಪಿಸಿದ್ದಾರೆ. ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ವೀರಶೈವ ಧರ್ಮ ವೃಕ್ಷ ಬೇರಾದರೆ ಶಿವಶರಣರು ಆ ವೃಕ್ಷದ ಹೂ ಹಣ್ಣು ಇದ್ದಂತೆ. ಸಮನ್ವಯ ಚಿಂತನೆಗಳಿಂದ ಸಮಾಜ ಸುಭದ್ರಗೊಳ್ಳಬೇಕಾಗಿದೆ ಎಂದರು.
ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಗದುಗಿನ ಡಾ|| ಗುರುಸ್ವಾಮಿ ಕಲಕೇರಿ ಅವರಿಗೆ `ಸ್ವರ ಸಾಹಿತ್ಯ ಸಂಜೀವಿನಿ’ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಜಿ.ಎಸ್.ಅನಿತ್ ಕುಮಾರ್ ಅವರಿಗೆ ‘ಶಿಕ್ಷಣ ಸೇವಾ ಧುರೀಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಣ್ವಕುಪ್ಪಿ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಖಾದಿ ಖಾಕಿ ಮತ್ತು ಖಾವಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದರೆ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯವಾಗುವುದು ಎಂದರು.
ನೇತೃತ್ವ ವಹಿಸಿದ ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಜಿಡ್ಡುಗಟ್ಟಿದ ಭಾವನೆಗಳನ್ನು ಕಳೆದು ಸಾತ್ವಿಕ ನೆಲೆಗಟ್ಟಿನ ಮೇಲೆ ಬೆಳೆಯುವ ಜನ ಸಮುದಾಯದಲ್ಲಿ ಅಧ್ಯಾತ್ಮ ತತ್ವಗಳ ಮೂಲಕ ಸಾಮರಸ್ಯ ಸದ್ಭಾವನೆಗಳನ್ನು ಬೆಳೆಸುವುದೇ ಗುರು ಪೀಠಗಳ ಗುರಿಯಾಗಿದೆ ಎಂದರು. ಮಳಲಿ ಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲೋಕಸಭಾ ಸದಸ್ಯ ಜಿ.ಎಂ.ಸಿದ್ಧೇಶ್ವರ ಮಾತನಾಡಿ, ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಘೋಷವಾಕ್ಯವಿದ್ದರೆ ಅದು ಪಂಚಾಚಾರ್ಯ ಪರಂಪರೆಯಲ್ಲಿ ಮಾತ್ರ ಎಂದು ಹೇಳಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಚರಿಸುವ ರಂಭಾಪುರಿ ಶ್ರೀಗಳು ಜನರಿಗೆ ಮಾರ್ಗದರ್ಶನ ಮಾಡುತ್ತಾ, ಧರ್ಮ ಜಾಗೃತಿ ಮೂಡಿಸುತ್ತಿದ್ದಾರೆ. ಇಷ್ಟಲಿಂಗ ಪೂಜೆಯ ಮಹತ್ವ ಸಾರುತ್ತಿರುವುದು ಶ್ಲ್ಯಾಘನೀಯ ಕಾರ್ಯ. ಶ್ರೀಗಳ ಮಾರ್ಗದರ್ಶನದಲ್ಲಿ ತಾವು ಕೆಲಸ ಮಾಡುವುದಾಗಿ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ, ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ದಾವಣಗೆರೆ ಘಟಕದ ಅಧ್ಯಕ್ಷ ಜಿ.ಶಿವಯೋಗಪ್ಪ ಹಾಗೂ ಎಸ್.ಜೆ.ವಿ.ಪಿ.ವಿದ್ಯಾಪೀಠದ ಉಪಾಧ್ಯಕ್ಷ ಡಿ.ಎಂ.ಹಾಲಸ್ವಾಮಿ, ಐಗೂರು ಚಂದ್ರಶೇಖರ್, ಕವಿತ ಕೊಟ್ರೇಶ್ ಡಿ.ಕೆ.ಎಂ., ಟಿ.ಎಸ್.ಎಸ್.ಸ್ವಾಮಿ, ಶ್ವೇತ ಶಂಭಣ್ಣ, ರಂಜಿತಾ ಶಶಿಧರ, ಗೀತಮ್ಮ ಹನುಮಂತಪ್ಪ, ಪರಮೇಶ್, ಮಲ್ನಾಡ ಪ್ರಭಾಕರ ಶೆಟ್ಟರು, ಡಿ.ಈಶ್ವರ ಅವರು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರು ರಕ್ಷೆ ಸ್ವೀಕರಿಸಿದರು.
ಕಾರ್ಯಕ್ರಮದ ಸಂಘಟಕರಾದ ದೇವರಮನೆ ಶಿವಕುಮಾರ ಮತ್ತು ಶಿವರಾಜ ಅವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಶಾಲು ಹೊದಿಸಿ ಸನ್ಮಾನಿಸಿ, ಗುರು ರಕ್ಷೆ ನೀಡಿ ಆಶೀರ್ವದಿಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಹರಿಹರದ ಕಾಂತರಾಜ ಮತ್ತು ವೀರೇಶ್ ಬಡಿಗೇರ ಅವರಿಂದ ಸಂಗೀತ ಜರುಗಿತು. ಟಿ.ಜಿ.ಸುರೇಶ ಸ್ವಾಗತಿಸಿದರು. ಎಂ.ಎಸ್.ಕೊಟ್ರಯ್ಯ ಜಗದ್ಗುರುಗಳಿಗೆ ಗೌರವ ಮಾಲಾರ್ಪಣೆ ಸಲ್ಲಿಸಿದರು. ಶುಭ ಐನಹಳ್ಳಿ ನಿರೂಪಿಸಿದರು.