ಪಾಲಿಕೆಯಲ್ಲಿ ಕಾಂಗ್ರೆಸ್ ಬಲ, ಕುಂದಿದ ಕಮಲ

ಪಾಲಿಕೆಯಲ್ಲಿ ಕಾಂಗ್ರೆಸ್ ಬಲ, ಕುಂದಿದ ಕಮಲ

ಮಹಾನಗರ ಪಾಲಿಕೆ ಸ್ಥಾಯಿ ಸಮಿತಿಗಳು ಕೈ ವಶ

ದಾವಣಗೆರೆ, ಆ. 11 – ನಾಲ್ಕೂ ಸ್ಥಾಯಿ ಸಮಿತಿಗಳು ಕಾಂಗ್ರೆಸ್ ಪಕ್ಷದ ವಶವಾಗುವುದರೊಂದಿಗೆ, ಪಾಲಿಕೆಯಲ್ಲಿ ಕೈ ಪಾಳೆಯ ಇನ್ನಷ್ಟು ಬಲ ಪಡೆದಿದೆ. ಪ್ರತಿ ಸ್ಥಾಯಿ ಸಮಿತಿಯ ಏಳು ಸದಸ್ಯರ ಪೈಕಿ ತಲಾ ನಾಲ್ಕನ್ನು ಕಾಂಗ್ರೆಸ್ ಹಾಗೂ ಬೆಂಬಲಿತರು ಪಡೆದಿದ್ದಾರೆ. ಬಿಜೆಪಿ ಮೂರು ಸ್ಥಾನಗಳನ್ನು ಪಡೆದಿದೆ.

ಶುಕ್ರವಾರ ಪಾಲಿಕೆಯಲ್ಲಿ ಯೋಜನೆ, ಲೆಕ್ಕ ಪತ್ರ, ತೆರಿಗೆ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಗಳಿಗಾಗಿ ತಲಾ 7 ಸದಸ್ಯರು ಆಯ್ಕೆಯಾಗಬೇಕಿತ್ತು. ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದ ಜಯಮ್ಮ ಗೋಪಿನಾಯ್ಕ ಹಾಗೂ ಸೌಮ್ಯ ನರೇಂದ್ರ ಕುಮಾರ್ ಅವರು ಕಾಂಗ್ರೆಸ್ ಪಾಳೆಯಕ್ಕೆ ಜಿಗಿದಿ ದ್ದರು. ಜೆಡಿಎಸ್‍ನ ಬಿ. ನೂರ್ ಜಹಾನ್ ಅವರು ಕಾಂಗ್ರೆಸ್‍ಗೆ ಬೆಂಬಲ ನೀಡಿದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ, ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಹಾಗೂ ಹರೀಶ್ ಕುಮಾರ್ ಅವರು ಉಪಸ್ಥಿತರಿದ್ದರು. ಇದರಿಂದಾಗಿ ಪಾಲಿಕೆಯಲ್ಲಿ ಕಾಂಗ್ರೆಸ್ 27 ಸದಸ್ಯರ ಬೆಂಬಲ ಪಡೆಯಿತು.

ಮತ್ತೊಂದೆಡೆ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಐವರು ಪರಿಷತ್ ಸದಸ್ಯರು ಗೈರಾಗಿದ್ದರು. ಇದರಿಂದಾಗಿ ಬಿಜೆಪಿ ಸಂಖ್ಯಾಬಲ 22ಕ್ಕೆ ಸೀಮಿತವಾಯಿತು.

ಬೆಳಿಗ್ಗೆ 11 ಗಂಟೆಗೆ ಸ್ಥಾಯಿ ಸಮಿತಿ ಚುನಾವಣೆಗೆ  ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ತೆರಿಗೆ, ಆರೋಗ್ಯ ಹಾಗೂ ಯೋಜನಾ ಸಮಿತಿಗಳಿಗೆ ತಲಾ 8 ಸದಸ್ಯರು ಹಾಗೂ ಲೆಕ್ಕ ಪತ್ರ ಸಮಿತಿಗೆ 10 ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ನಂತರ ಹೆಚ್ಚುವರಿಯಾಗಿ ಅರ್ಜಿ ಸಲ್ಲಿಸಿದ್ದ ಸದಸ್ಯರು ನಾಮ ಪತ್ರ ವಾಪಸ್ ಪಡೆದರು. ಅಂತಿಮವಾಗಿ ಎಲ್ಲಾ ನಾಲ್ಕು ಸ್ಥಾಯಿ ಸಮಿತಿಗಳಿಗೆ ತಲಾ ಏಳು ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.

ತೆರಿಗೆ ಹಾಗೂ ಹಣಕಾಸು ಸ್ಥಾಯಿ ಸಮಿತಿಗೆ ಹೆಚ್. ಉದಯಕುಮಾರ್, ಸೌಮ್ಯ ಎಸ್. ನರೇಂದ್ರ ಕುಮಾರ್, ಕಾರಿಗನೂರು ಜಾಕೀರ್ ಅಲಿ, ಸುಧಾ ಮಂಜುನಾಥ ಇಟ್ಟಿಗುಡಿ, ಆರ್. ಶಿವಾನಂದ, ರೇಖಾ ಸುರೇಶ್ ಗಂಡಗಾಳೆ ಹಾಗೂ ರೇಣುಕಾ ಶ್ರೀನಿವಾಸ್ ಆಯ್ಕೆಯಾಗಿದ್ದಾರೆ.

ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿಗೆ ನಾಗರಾಜು, ಸೈಯದ್ ಚಾರ್ಲಿ, ಮೀನಾಕ್ಷಿ ಎಂ. ಜಗದೀಶ್, ನಾಗರತ್ನಮ್ಮ, ಆರ್.ಎಲ್. ಶಿವಪ್ರಕಾಶ್, ಎಲ್.ಡಿ. ಗೋಣೆಪ್ಪ, ಹೆಚ್.ಆರ್. ಶಿಲ್ಪಾ ಆಯ್ಕೆಯಾಗಿದ್ದಾರೆ.

ಯೋಜನೆ ಹಾಗೂ ಸುಧಾರಣಾ ಸ್ಥಾಯಿ ಸಮಿತಿಗೆ ಅಬ್ದುಲ್ ಲತೀಫ್, ಎಂ.ಕೆ. ಶಿವಲೀಲಾ ಕೊಟ್ರಯ್ಯ, ಜೆ.ಡಿ. ಪ್ರಕಾಶ್, ಡಿ.ಎಸ್. ಆಶಾ, ಉಮಾ ಪ್ರಕಾಶ್, ಎಸ್.ಟಿ. ವೀರೇಶ್ ಹಾಗೂ ಎಸ್. ಶ್ವೇತಾ ಆಯ್ಕೆಯಾಗಿದ್ದಾರೆ.

ಲೆಕ್ಕಪತ್ರಗಳ ಸ್ಥಾಯಿ ಸಮಿತಿಗೆ ಅಹ್ಮದ್ ಕಬೀರ್ ಖಾನ್, ಕಲ್ಲಳ್ಳಿ ನಾಗರಾಜ್, ಬಿ. ನೂರ್ ಜಹಾನ್, ಆರ್. ಜಯಮ್ಮ, ಗೌರಮ್ಮ, ಗಾಯತ್ರಿ ಬಾಯಿ ಹಾಗೂ ಕೆ.ಎಂ. ವೀರೇಶ್ ಆಯ್ಕೆಯಾಗಿದ್ದಾರೆ.

error: Content is protected !!