ವಿದ್ಯುತ್ ಬೇಡಿಕೆ ಹೆಚ್ಚಳ, ಉತ್ಪಾದನೆ ಇಳಿಕೆಯಿಂದ ಹೆಚ್ಚಿದ ಸಮಸ್ಯೆ
ದಾವಣಗೆರೆ, ಆ. 10 – ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಯ ಕಾರಣದಿಂದ ಜನರು ಶೂನ್ಯ ಬಿಲ್‌ನ ಸಂಭ್ರಮದಲ್ಲಿರುವ ಮಧ್ಯೆಯೇ, ವಿದ್ಯುತ್ ಕಡಿತದ ಬಿಸಿ ತಟ್ಟುತ್ತಿದೆ.
ಅದರಲ್ಲೂ ಕಳೆದ ವಾರದಲ್ಲಿ ಸಂಜೆ ಹಾಗೂ ರಾತ್ರಿ ವೇಳೆ ವಿದ್ಯುತ್ ಕಡಿತ ಜನರನ್ನು ಹೆಚ್ಚಾಗಿ ತಟ್ಟುತ್ತಿದೆ. ವಿದ್ಯುತ್ ಉತ್ಪಾದನೆ ಕುಂಠಿತವಾಗಿರುವುದೇ ಇದಕ್ಕೆ ಕಾರಣ. ರಾಜ್ಯದಲ್ಲಿ ಶಾಖೋತ್ಪನ್ನ ಹಾಗೂ ಪವನ ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ವಿದ್ಯುತ್ ಪೂರೈಕೆಯೇ ಕಡಿಮೆಯಾಗಿರುವ ಕಾರಣ ವಿತರಣೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇರುವಷ್ಟು ವಿದ್ಯುತ್‌ನಲ್ಲೇ ಪರಿಸ್ಥಿತಿ ನಿಭಾಯಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಳಗಿನ ವೇಳೆ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ಆದರೆ, ಸಂಜೆ ವೇಳೆ ವಿದ್ಯುತ್ ಬೇಡಿಕೆ ಹೆಚ್ಚಾಗಿರುವ ಕಾರಣ, ಅಘೋಷಿತ ವಿದ್ಯುತ್ ಕಡಿತ ಅನಿವಾರ್ಯವಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಯಾವ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆಯಾಗುತ್ತದೆ ಎಂಬ ಬಗ್ಗೆ ಸ್ಪಷ್ಟನೆ ಸಿಗುತ್ತಿಲ್ಲ. ಹೀಗಾಗಿ ವಿದ್ಯುತ್ ಕಡಿತದ ಅವಧಿ ನಿಗದಿಪಡಿಸಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ನೋಡಿಕೊಂಡು ವಿದ್ಯುತ್ ಕಡಿತವಾಗುತ್ತಿದೆ ಎಂದೂ ಮೂಲಗಳು ತಿಳಿಸಿವೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು (ಕೆಪಿಸಿಎಲ್) ಕಲ್ಲಿದ್ದಲು ಖರೀದಿಯ ಬಾಕಿ ಉಳಿಸಿಕೊಂಡಿದೆ. ಇದೇ ಕಲ್ಲಿದ್ದಲು ಪೂರೈಕೆಗೆ ಸಮಸ್ಯೆಯಾಗುತ್ತಿದೆ. ಕಂಪನಿಗಳು ಕೆ.ಪಿ.ಸಿ.ಎಲ್.ಗೆ ಕಲ್ಲಿದ್ದಲು ಬಾಕಿ ವಿಷಯದಲ್ಲಿ ಒತ್ತಡ ಹೇರುತ್ತಿವೆ ಎಂಬ ವರದಿಗಳೂ ಬಂದಿದ್ದವು.
ಕಳೆದ ಜುಲೈನಲ್ಲಿ ನಿರಂತರ ಮಳೆ ಇರುತ್ತಿದ್ದ ಜೊತೆಗೆ ಚಳಿಯೂ ಹೆಚ್ಚಾಗಿತ್ತು. ಈ ಸಂದರ್ಭದಲ್ಲಿ ವಿದ್ಯುತ್ ಬೇಡಿಕೆ ಕಡಿಮೆ ಇತ್ತು. ಆಗಸ್ಟ್‌ನಲ್ಲಿ ಮಳೆ ನಿಂತಿರುವ ಜೊತೆಗೆ ತಾಪಮಾನವೂ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲೇ ವಿದ್ಯುತ್ ಕಡಿತವಾಗುತ್ತಿರುವುದು ಜನರು ಬೆವರಿಳಿಸುವಂತೆ ಮಾಡುತ್ತಿದೆ.
ಈ ನಡುವೆ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಗೃಹ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಎಂಬ ವಾದಗಳೂ ಕೇಳಿ ಬರುತ್ತಿವೆ. ಒಟ್ಟಾರೆ ವಿದ್ಯುತ್ ಉಚಿತ, ಪವರ್ ಕಟ್ ಖಚಿತ ಎಂಬಲ್ಲಿಗೆ ಪರಿಸ್ಥಿತಿ ಬಂದಿದೆ.