ಜೀವನ ಶುದ್ಧೀಕರಿಸಿ, ಸುಂದರವಾಗಿಸುವುದು ಧರ್ಮದ ಮೂಲ ಗುರಿ

ಜೀವನ ಶುದ್ಧೀಕರಿಸಿ, ಸುಂದರವಾಗಿಸುವುದು ಧರ್ಮದ ಮೂಲ ಗುರಿ

ಅಧಿಕ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ಸಮಾರಂಭದ ಎರಡನೇ ದಿನದ ಕಾರ್ಯಕ್ರಮದಲ್ಲಿ ರಂಭಾಪುರಿ ಜಗದ್ಗುರುಗಳು

ದಾವಣಗೆರೆ, ಆ.10- ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ಧರ್ಮ, ಸಂಸ್ಕೃತಿಯ ಅರಿವು ಅವಶ್ಯ. ಮನುಷ್ಯ ಜೀವನವನ್ನು ಶುದ್ಧಗೊಳಿಸಿ, ಸುಂದರವಾಗಿರಿಸುವುದೇ ಧರ್ಮದ ಮೂಲ ಗುರಿಯಾಗಿದೆ ಎಂದು ಬಾಳೆ ಹೊನ್ನೂರು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಹೇಳಿದರು.

ನಗರದ ಅಭಿನವ ರೇಣುಕ ಮಂದಿರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ನಡೆದ 2ನೇ ದಿನದ ಜನ ಜಾಗೃತಿ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಬಾಳಿನ ಭಾಗ್ಯೋದಯಕ್ಕೆ ಧರ್ಮದ ಬೆಳಕು ಅಗತ್ಯ. ಸಮರ ಜೀವನವನ್ನು
ಅಮರ ಜೀವನಕ್ಕೆ ಕೊಂಡೊಯ್ಯುವುದೇ ನಿಜವಾದ ಧರ್ಮ. ಸತ್ಯ ಮತ್ತು ಪ್ರಾಮಾಣಿಕತೆಗಿಂತ ಮಿಗಿಲಾದ ಧರ್ಮ ಬೇರೊಂದಿಲ್ಲ. ಸತ್ಯವೇ ಒಂದು ಧರ್ಮ. ಇದು ಧರ್ಮವನ್ನು ರಕ್ಷಿಸುವ ರಕ್ಷಾಕವಚ. ಧರ್ಮದ ರಕ್ಷಾಕವಚ ನಾಶಗೊಂಡರೆ ಜಗದಲ್ಲಿ ಯಾವುದೂ ಉಳಿಯದು ಎಂದರು.

ಪರಿಶುದ್ಧ ಮತ್ತು ಪವಿತ್ರ ಜೀವನ ರೂಪಿತಗೊಳ್ಳಲು ಶ್ರೀ ಜಗದ್ಗುರು ರೇಣುಕಾ ಚಾರ್ಯರು ನಿರೂಪಿಸಿದ ತತ್ವ, ಸಿದ್ಧಾಂತಗಳ ಅರಿವು, ಆಚರಣೆ ಮುಖ್ಯವಾಗಿದೆ. ಈ ದಿಶೆಯಲ್ಲಿ ಸರ್ವರೂ ಅರಿತು ಬಾಳಿದರೆ ಮಾನವ ಜೀವನ ಸಾರ್ಥಕಗೊಳ್ಳುವುದು ಎಂದು ಹೇಳಿದರು.

 ‘ಸಹಕಾರಿ ಸೇವಾ ಭೂಷಣ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಹಕಾರಿ ಧುರೀ ಣರೂ, ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷರೂ ಆದ ಎನ್.ಎ.ಮುರುಗೇಶ ಆರಾಧ್ಯ ಅವರು, ಆಷಾಢ ಮಾಸ ಅಶುಭ ಎನ್ನುವ ಬಗ್ಗೆ ಯಾವುದೇ ಶಾಸ್ತ್ರದಲ್ಲಾಗಲೀ, ವೇದ, ಪುರಾಣಗಳಲ್ಲಾಗಲೀ, ಉಪನಿಷತ್ತುಗಳ ಲ್ಲಾಗಲೀ ಉಲ್ಲೇಖ ಇಲ್ಲ. ಆಷಾಢ ಮಾಸದಲ್ಲಿ ಮಳೆ ಜಾಸ್ತಿ ಇದ್ದು, ಕೃಷಿ ಚಟುವಟಿಕೆಗಳಿಗೆ ಹಿನ್ನಡೆ ಇರುವುದರಿಂದ ಮತ್ತು ಶುಭ ಕಾರ್ಯಗಳನ್ನು ಮಾಡಲು ಸರಿಯಾದ ವ್ಯವಸ್ಥೆಗಳಿಲ್ಲದ ಕಾರಣ ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದು ಕಡಿಮೆ ಎಂದು ಅಭಿಪ್ರಾಯಪಟ್ಟರು.

ಹೆಚ್ಚಾಗಿ ಆಷಾಢ ಮಾಸದಲ್ಲಿಯೇ ವಿಶೇಷ ಪೂಜೆಗಳು, ಜನಜಾಗೃತಿ ಧರ್ಮ ಸಮಾವೇಶಗಳು ನಡೆಯುತ್ತವೆ. ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಕೂಡ ಜನರಲ್ಲಿದೆ. ಗುರುಪೂರ್ಣಿಮೆ,  ನಾಡದೇವತೆ ಚಾಮುಂಡೇಶ್ವರಿ ದೇವಿಯ ಜನ್ಮದಿನ, ಅಮರನಾಥಯಾತ್ರೆ, ಪುರಿ ಜಗನ್ನಾಥ ರಥ ಕೂಡ ಆಷಾಢ ಮಾಸದಲ್ಲಿಯೇ ಬರುತ್ತವೆ ಎಂದು ಹೇಳಿದರು.

ನಾಡಿನ ವೀರಶೈವ ಮಠಗಳು ಅಕ್ಷರ ದಾಸೋಹ ಮತ್ತು ಅನ್ನ ದಾಸೋಹದ ಮೂಲಕ ಖ್ಯಾತಿ ಪಡೆದಿವೆ. ರಂಭಾಪುರಿ ಪೀಠ ಕೂಡ ಜನಜಾಗೃತಿ ಧರ್ಮ ಸಮಾರಂಭಗಳ ಮೂಲಕ ಜನರಿಗೆ ಒಳಿತು ಬಯಸುವ ಕೆಲಸ ಮಾಡುತ್ತಾ ಬಂದಿದೆ ಎಂದರು.

ನನಗೆ ಬಂದಿರುವ ಪ್ರಶಸ್ತಿ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸಮಾಜದ ಋಣ ತೀರಿಸುವಲ್ಲಿ ಇದು ಸಹಕಾರಿಯಾಗಲಿದೆ ಎಂದು ಮುರುಗೇಶ್ ತಿಳಿಸಿದರು.

ಮುಕ್ತಿಮಂದಿರ ಕ್ಷೇತ್ರದ ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. 

ಹಂಪಸಾಗರ ನವಲಿ ಹಿರೇಮಠದ
ಶ್ರೀ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು. ಹರಪನಹಳ್ಳಿ ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ಮೂತ್ರರೋಗ ತಜ್ಞ ಡಾ. ನವೀನ್, ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆ ಅಧ್ಯಕ್ಷ ದೇವರಮನಿ ಶಿವಕುಮಾರ್, ರಾಜಶೇಖರ ಗುಂಡಗಟ್ಟಿ ಮತ್ತಿತರರು ಭಾಗವಹಿಸಿದ್ದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ವಿದ್ಯಾನಗರ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಹೆಚ್. ದೇವರಾಜ್, ಅಂಭಾಭವಾನಿ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಗೋಪಾಲರಾವ್ ಮಾನೆ, ವಿಶ್ವ ಹಿಂದೂ ಪರಿಷದ್ ಮುಖಂಡ ಅರುಣ ಗುಡ್ಡದಕೆರೆ, ಉದ್ಯಮಿ ಕೆ.ಎಸ್. ಶ್ಯಾಮಪ್ರಕಾಶ್, ಮೋತಿ ಪ್ಯಾರಡೈಸ್ ಮಾಲೀಕ ಸುಬ್ರಹ್ಮಣ್ಯ ಮೋತಿ, ಕೆ.ಎಂ.ಮಂಜುನಾಥ್, ಬೇತೂರು ತಿಪ್ಪೇಸ್ವಾಮಿ, ಡಿ.ವಿ. ಆರಾಧ್ಯಮಠ, ಡಿ.ಕೆ. ರಮೇಶ್ ಇವರು ಗುರುರಕ್ಷೆಗೆ ಪಾತ್ರರಾದರು. 

ಮಹಾನಗರ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್ ಸ್ವಾಗತಿಸಿದರು. ಕೆ.ಎಂ. ರುದ್ರಮುನಿಸ್ವಾಮಿ ನಿರೂಪಿಸಿದರು. ಜಯಪ್ರಕಾಶ್ ಮಾಗಿ ಜಗದ್ಗುರುಗಳಿಗೆ ಮಾಲಾರ್ಪಣೆ ಮಾಡಿದರು. ಹರಿಹರದ ಸಂಗೀತ ಶಿಕ್ಷಕ ಕಾಂತರಾಜ್ ಹಾಗೂ ವೀರೇಶ್ ಬಡಿಗೇರ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. 

error: Content is protected !!