ದೇಶದ ಸ್ವಾತಂತ್ರ್ಯಕ್ಕೆ ಕ್ರಾಂತಿ ಹೋರಾಟವೂ ಕಾರಣ

ದೇಶದ ಸ್ವಾತಂತ್ರ್ಯಕ್ಕೆ ಕ್ರಾಂತಿ ಹೋರಾಟವೂ ಕಾರಣ

ಕ್ವಿಟ್ ಇಂಡಿಯಾ ಹುತಾತ್ಮರ ಸ್ಮರಣೆಯಲ್ಲಿ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌

ದಾವಣಗೆರೆ, ಆ. 9 – ಅಹಿಂಸಾ ಹೋರಾಟದ ಜೊತೆಗೆ, ಸುಭಾಷ್‌ಚಂದ್ರ ಬೋಸ್‌ ನೇತೃತ್ವದಲ್ಲಿ ನಡೆದ ಕ್ರಾಂತಿ ಹೋರಾಟವೂ ಸೇರಿ ಭಾರತಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂದು ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ತಿಳಿಸಿದರು.

ಕ್ವಿಟ್ ಇಂಡಿಯಾ ಹೋರಾಟದ ವೇಳೆ ಹುತಾತ್ಮರಾದ ಆರು ಜನರ ಸ್ಮರಣೆಗಾಗಿ ಸ್ಥಳೀಯ ಮಹಾನಗರ ಪಾಲಿಕೆ ಆವರಣದಲ್ಲಿ ರುವ ಸ್ಮಾರಕದಲ್ಲಿ ಇಂದು ಆಯೋಜಿಸಲಾಗಿದ್ದ ತ್ರಿವರ್ಣ ರಾಷ್ಟ್ರಧ್ವಜ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಜನ ಹುತಾತ್ಮರಾಗಿದ್ದಾರೆ. ಸುಭಾಷ್ ಚಂದ್ರ ಬೋಸ್ ಅವರ ನೇತೃತ್ವದಲ್ಲಿ ಕ್ರಾಂತಿಕಾರಕ ಹೋರಾಟ ನಡೆದಿತ್ತು. ಆಗ ಭಾರತೀಯ ಸೈನಿಕರು ಬ್ರಿಟಿಷರ ವಿರುದ್ಧ ದಂಗೆ ಎದ್ದಿದ್ದರು. ಇನ್ನು ಭಾರತದಲ್ಲಿ ನಮ್ಮ ಆಟ ನಡೆಯುವುದಿಲ್ಲ ಎಂದು ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದರು ಎಂದವರು ಹೇಳಿದರು.

ಕ್ವಿಟ್ ಇಂಡಿಯಾ ಹೋರಾಟ ನಡೆಯುವಾಗ 1942ರ ಆಗಸ್ಟ್ 9ರಂದು ದಾವಣಗೆರೆ ಯಲ್ಲಿ ಆರು ಜನ ಬ್ರಿಟಿಷರ ಗುಂಡಿಗೆ ಸಿಲುಕಿ ಸಾವನ್ನಪ್ಪಿದರು. ಇಂತಹ ಹೋರಾಟಗಾರರನ್ನು ಸದಾ ಸ್ಮರಿಸಬೇಕು ಎಂದು ತಿಳಿಸಿದರು.

ಮಾಜಿ ಸೈನಿಕ ಎಂ. ಅಶೋಕ್ ಮಾತನಾಡಿ, ದೇಶದ ಹಿತಕ್ಕಾಗಿ ದುಡಿಯುವುದು ಎಲ್ಲಕ್ಕಿಂತ ದೊಡ್ಡದು. ಸೈನಿಕರು ದೇಶಕ್ಕಾಗಿ ಎಂತಹದೇ ತ್ಯಾಗಕ್ಕೆ ಸಿದ್ಧವಿರುತ್ತಾರೆ. ಅಂತಹ ಸೈನಿಕರಿಗೆ ಕೆಚ್ಚೆದೆ – ಹುಮ್ಮಸ್ಸು ಬರಬೇಕಾದರೆ ದೇಶದ ಒಳಗೆ ಶಾಂತಿ ಕಾಯ್ದುಕೊಳ್ಳಬೇಕು ಎಂದರು.

ಬಿಜೆಪಿ ಮುಖಂಡ ಎನ್. ರಾಜಶೇಖರ್ ಮಾತನಾಡಿ, ಕ್ರಾಂತಿಕಾರಿ ದೇಶಭಕ್ತರ ಇತಿಹಾಸದ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹಾಗೂ ಹತ್ತಾರು ವರ್ಷ ಜೈಲು ಶಿಕ್ಷೆ ಅನುಭವಿಸಿದವರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸದೇ ಇದ್ದರೆ ಪಾಪವಾಗುತ್ತದೆ ಎಂದರು.

ಕ್ವಿಟ್ ಇಂಡಿಯಾ ಹೋರಾಟದ ವೇಳೆ ಗುಂಡಿಗೆ ಸಿಲುಕಿ ಹುತಾತ್ಮರಾದ ಹಳ್ಳೂರು ನಾಗಪ್ಪ, ಅಕ್ಕಸಾಲಿ ವಿರೂಪಾಕ್ಷಪ್ಪ, ಬಿದರ ಕುಂದಿ ನಿಂಗಪ್ಪ, ಹದಡಿ ನಿಂಗಪ್ಪ, ಹಮಾಲಿ ತಿಮ್ಮಣ್ಣ ಹಾಗೂ ಮಾಗಾನಹಳ್ಳಿ ಹನುಮಂತಪ್ಪ ಅವರಿಗೆ ನಮನ ಸಲ್ಲಿಸಲಾಯಿತು.

ಮಾಜಿ ಸೈನಿಕರಾದ ಶಶಿಕಾಂತ್, ಕುಮಾರ್, ಎಂ. ಅಶೋಕ್ ಹಾಗೂ ಮಹಾಲಿಂಗಗೌಡ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಪ ಮೇಯರ್ ಯಶೋಧ ಹೆಗ್ಗಪ್ಪ, ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ಪೈಲ್ವಾನ್ ವೀರೇಶ್, ರಾಕೇಶ್ ಜಾಧವ್, ಎಲ್.ಡಿ. ಗೋಣೆಪ್ಪ, ಮುಖಂಡರಾದ ಲೋಕಿಕೆರೆ ನಾಗರಾಜ್, ಜಿ.ಎಸ್. ಶಾಮ್, ಅಣಬೇರು ಜೀವನಮೂರ್ತಿ, ಪಿ.ಸಿ.ಶ್ರೀನಿವಾಸ್, ಭಾಗ್ಯಮ್ಮ, ರಮೇಶ್ ನಾಯಕ್, ಮಲ್ಲಪ್ಪ, ಜಗದೀಶ್, ಆನಂದರಾವ್ ಶಿಂಧೆ, ನೀಲಗುಂದ ರಾಜು ಮತ್ತಿತರರು ಉಪಸ್ಥಿತರಿದ್ದರು.

error: Content is protected !!