ರಾಷ್ಟ್ರ ಪಥವನ್ನು ವಿದ್ಯಾರ್ಥಿಗಳು ಅರಿಯಲು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಕರೆ
ದಾವಣಗೆರೆ, ಆ. 8 – ದೇಶಕ್ಕೆ ಸ್ವಾತಂತ್ರ್ಯ ದೊರೆತ ಇತಿಹಾಸ, ನಂತರದಲ್ಲಿ ದೇಶದ ಬೆಳವಣಿಗೆ ಹಾಗೂ ಈಗಿನ ಅಭಿವೃದ್ಧಿ ಪಥದ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಕರೆ ನೀಡಿದರು.
ಅವರು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಾನಗರ ಪಾಲಿಕೆ, ಎನ್.ಸಿ.ಸಿ, ಎನ್.ಎಸ್.ಎಸ್.ಘಟಕ, ಗ್ರಾಮ ಸ್ವರಾಜ್ ಅಭಿಯಾನದ ಸಂಯುಕ್ತಾಶ್ರಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಏರ್ಪಡಿಸಲಾದ ‘ಕ್ವಿಟ್ ಇಂಡಿಯಾ ಚಳುವಳಿ ಒಂದು ನೆನಪು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದ 1942 ರ ಆಗಸ್ಟ್ 8 ರಂದು ಕ್ವಿಟ್ ಇಂಡಿಯಾ ಚಳುವಳಿ ಆರಂಭವಾಗಿತ್ತು. ಕ್ವಿಟ್ ಇಂಡಿಯಾ ಚಳುವಳಿ ಸ್ವಾತಂತ್ರ್ಯ ಗಳಿಸಲು ಸಮುದಾಯ ಚಳವಳಿಯಾಗಿತ್ತು ಎಂದರು.
ದೇಶ ಯಾವ ರೀತಿ ಸ್ವಾತಂತ್ರ್ಯ ಪಡೆಯಿತು ಮತ್ತು ನಂತರದ ಅವಧಿಯಲ್ಲಿನ ಬಡತನ ನಿರ್ಮೂಲನೆ ಕಾರ್ಯಕ್ರಮಗಳು ಮತ್ತು ಇಂದು ಯಾವ ಹಂತದಲ್ಲಿ ದೇಶ ಅಭಿವೃದ್ದಿ ಪಥದಲ್ಲಿದೆ, ಇದರಲ್ಲಿ ನನ್ನ ಪಾತ್ರವೇನು ಎನ್ನುವುದನ್ನು ವಿದ್ಯಾರ್ಥಿಗಳು ಅರಿಯಬೇಕಿದೆ ಎಂದರು.
ಗಾಂಧೀಜಿಯವರು ಸತ್ಯಹರಿಶ್ಚಂದ್ರ ಕಥೆಯನ್ನು ಓದುತ್ತಿದ್ದರು. ಆದರೆ ನಮ್ಮ ಯುವ ಜನಾಂಗ ಹೆಚ್ಚು ಸಾಮಾಜಿಕ ಜಾಲತಾಣಗಳ ಮೇಲೆ ಅವಲಂಬಿತವಾಗಿದ್ದು, ಇಲ್ಲಿ ಸತ್ಯವನ್ನು ಮರೆ ಮಾಚುವ ಪ್ರಸಂಗ ಬರಬಾರದು. ಸತ್ಯತೆ ಬಗ್ಗೆ ವಿದ್ಯಾರ್ಥಿಗಳು ಪರಿಶೀಲನೆ ಮಾಡಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಮಂಜಣ್ಣ ಕ್ವಿಟ್ ಇಂಡಿಯಾ ಚಳುವಳಿ ಒಂದು ನೆನಪು ಕುರಿತು ಉಪನ್ಯಾಸ ನೀಡಿ, ನಾವು ಕೇವಲ ಟ್ರಾಫಿಕ್ ಸಿಗ್ನಲ್‍ಗಳಲ್ಲಿ 10 ಸೆಕೆಂಡುಗಳ ಕಾಲ ಕಾಯುವುದಿಲ್ಲ. ಅಂತಹದರಲ್ಲಿ ನಮಗೆ ಸ್ವಾತಂತ್ರ್ಯವನ್ನು ಒದಗಿಸಿಕೊಡಲು ಅನೇಕ ಸ್ವಾತಂತ್ರ್ಯ ಹೋರಾಟಗಾರರು ವರ್ಷಗಟ್ಟಲೇ ಜೈಲಿನಲ್ಲಿ ತಮ್ಮ ಜೀವನದ ಅತ್ಯಮೂಲ್ಯ ಸಮಯವನ್ನು ಕಳೆಯಬೇಕಾಯಿತು. ಅಂತಹ ಮಹಾ ನಾಯಕರನ್ನು ಸ್ಮರಿಸುವ ದಿನ ಇದಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್.ಎಂ.ಮರುಳಸಿದ್ದಪ್ಪ, ಎನ್.ಎಸ್.ಎಸ್.ವಿಭಾಗೀಯ ಅಧಿಕಾರಿ ಪ್ರದೀಪ್, ಎನ್.ಸಿ.ಸಿ.ಸುಬೇದಾರ್ ಮಾಲುಂಜಾಕರ್, ಹವಾಲ್ದಾರ್ ಧರ್ಮವೀರ್, ಗ್ರಾಮ ಸ್ವರಾಜ್ ಅಭಿಯಾನ್ ಆವರಗೆರೆ ರುದ್ರಮುನಿ, ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳ ಸಂಘದ ಯುವ ಕಾರ್ಯಕರ್ತೆ ಉಷಾರಾಣಿ, ಚಿತ್ರಿಕಿ ಶಿವಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ತೇಜಸ್ವಿ ಪಟೇಲ್ ಹಾಗೂ ವಿವಿಧ ಕಾಲೇಜಿನ ಉಪನ್ಯಾಸಕರು, ಎನ್.ಸಿ.ಸಿ. ಕೆಡೆಟ್, ಎನ್.ಎಸ್.ಎಸ್.ಸ್ವಯಂ ಸೇವಕರು ಭಾಗವಹಿಸಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿ, ಗಾಂಧಿ ಭವನದಲ್ಲಿ ಗಾಂಧೀಜಿಯ ಚಿಂತನೆಗಳ ಕುರಿತು ಚಟುವಟಿಕೆಗಳು ನಿರಂತರವಾಗಿ ನಡೆಯಬೇಕಾಗಿದೆ ಮತ್ತು ಇಲ್ಲಿ ಸುಸಜ್ಜಿತವಾದ ಗ್ರಂಥಾಲಯವು ಆರಂಭವಾಗಲಿದ್ದು ಓದುಗರಿಗೆ ಮುಕ್ತ ಅವಕಾಶ ಇರುತ್ತದೆ. ಗ್ರಂಥಾಲಯವನ್ನು ಶೀಘ್ರದಲ್ಲಿಯೇ ಆರಂಭಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಇಪ್ಟಾ ಕಲಾವಿದರಾದ ಐರಣಿ ಚಂದ್ರು ಮತ್ತು ತಂಡದವರು ಜಾಗೃತಿ ಮತ್ತು ದೇಶಭಕ್ತಿಗೀತೆಗಳನ್ನು ಹಾಡಿದರು.