ದಾವಣಗೆರೆ, ಆ.2- ಮನೆಗಳ್ಳತನ, ದರೋಡೆ, ಮಹಿಳೆಯರ ಸರಗಳ್ಳತನ ಸೇರಿ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಠಾಣೆ ವ್ಯಾಪ್ತಿಯ 134 ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ದೂರನ್ನು ಭೇದಿಸಿರುವ ಪೊಲೀಸರು 1.68 ಕೋಟಿ ರೂ. ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದು ವಾರಸುದಾರರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಪ್ರಾಪರ್ಟಿ ರಿಟರ್ನ್ ಪರೇಡ್’ನಲ್ಲಿ ಕಳೆದ ಜನವರಿ 2022 ರಿಂದ ಜೂನ್ 2023ರ ವರೆಗೆ 134 ಪ್ರಕರಣಗಳಿಗೆಸಂಬಂಧಿಸಿದಂತೆ 1713.682 ಗ್ರಾಂ. ಬಂಗಾರ, 2737.9ಗ್ರಾಂ ಬೆಳ್ಳಿ ಆಭರಣಗಳು, 16 ಮೋಟರ್ ಬೈಕ್‌ಗಳು, ಟ್ರ್ಯಾಕ್ಟರ್ ಮತ್ತು ಬಿಡಿ ಭಾಗಗಳು,178 ಕೆಜಿ ಅಡಿಕೆ, 3 ಮೊಬೈಲ್, ಒಟ್ಟು 2,31,650 ನಗದು ಮತ್ತು ಕೃಷಿ ಉಪಕರಣಗಳು ಸೇರಿ ಒಟ್ಟು 1,68,96,744 ರೂ. ಮೌಲ್ಯದ ಮಾಲುಗಳನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ನೇತೃತ್ವದಲ್ಲಿ ವಾರಸುದಾರರಿಗೆ ಹಿಂದಿರುಗಿಸಲಾಯಿತು.
ಕಳೆದುಕೊಂಡಿದ್ದ ಸ್ವತ್ತುಗಳನ್ನು ಮರಳಿ ಪಡೆದವರು ಸಂತಸ ಹಂಚಿಕೊಳ್ಳುತ್ತಾ, ಪೊಲೀಸರಿಗೆ ಧನ್ಯವಾದ ಹೇಳಿದರು.
ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಹೋಗಿದ್ದಾಗ 4.5 ಕೆಜಿ ಬೆಳ್ಳಿ, 25 ತೊಲ ಬಂಗಾರ ಕಳ್ಳತನವಾಗಿತ್ತು. ಅದರಲ್ಲಿ 25 ತೊಲ ಚಿನ್ನ ವಾಪಸ್ ಸಿಕ್ಕಿದೆ ಎಂದು ಜಗಳೂರಿನ ನವೀನಾ ಎಂಬ ಮಹಿಳೆ ಸಂತಸ ಹಂಚಿಕೊಂಡರು.
ಐಗೂರು ಗೊಲ್ಲರಹಟ್ಟಿಯ ತಿಪ್ಪೇಸ್ವಾಮಿ ಮಾತನಾಡಿ, 8-10 ಕ್ವಿಂಟಾಲ್ ಹಸಿ ಅಡಕೆ ಕಳ್ಳತನವಾಗಿತ್ತು, ಅದರಲ್ಲಿ 23 ಸಾವಿರ ರೂ. ವಾಪಸ್ ಬಂದಿದೆ. ಇತ್ತೀಚೆಗೆ ಅಡಕೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು ಪೊಲೀಸರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು
2022ರ ಏ. 16ರಂದು ತಮ್ಮ ಮನೆಯಲ್ಲಿ 42 ಸಾವಿರ ರೂ.ಗಳ ಕಳ್ಳತನವಾಗಿತ್ತು. ಪ್ರಕರಣ ಪತ್ತೆಯಾದ ನಂತರ 3400 ರೂ. ವಾಪಸ್ ಸಿಕ್ಕಿದೆ ಎಂದು ಆನಗೋಡು ಗ್ರಾಮದ ರೈತ ಎಚ್.ಎಸ್. ಸಿದ್ದಪ್ಪ ಹೇಳಿದರು.
ಕುಂಬಳೂರಿನ ಇಟಗಿ ಹನುಮಂತಪ್ಪ, ಹರಿಹರದ ಕೆ.ಟಿ. ರಾಮಚಂದ್ರಪ್ಪ ತಮ್ಮ ಸ್ವತ್ತು ವಾಪಸ್ ಸಿಕ್ಕಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಿ. ಬಸರಗಿ ಮಾತನಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೈಕ್ ಮಾಲೀಕರ ಹೆಸರು ಬದಲಾವಣೆ ಮಾಡಿ ವಂಚಿಸಿದ ಪ್ರಕರಣ ಜಿಲ್ಲೆಯಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವ ಸಂದರ್ಭದಲ್ಲಿ ಅದರ ಮಾಲೀಕ ಯಾರು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಮಾಂತರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ, ಪಿ.ಐ ಲಿಂಗನಗೌಡ ನೆಗಳೂರ್, ಮಾಯಕೊಂಡ ವೃತ್ತ ಸಿಪಿಐ ನಾಗರಾಜ್, ಹರಿಹರ ವೃತ್ತ ಸಿಪಿಐ ಸತೀಶ್, ಹರಿಹರ ನಗರ ಪಿ.ಐ ದೇವಾನಂದ, ಜಗಳೂರು ಪಿ.ಐ ಶ್ರೀನಿವಾಸ್, ಬಿಳಿಚೋಡು ಠಾಣೆ ಪಿ.ಐ ಸೋಮಶೇಖರ್, ಕೆಂಚಾರೆಡ್ಡಿ, ಮತ್ತು ಉಪ-ವಿಭಾಗದ ಎಲ್ಲಾ ಪಿಎಸ್‌ಐಗಳು ಹಾಗೂ ಉಪ-ವಿಭಾಗದ ಅಪರಾಧ ವಿಭಾಗದ ಸಿಬ್ಬಂದಿಗಳು ಭಾಗವಹಿಸಿದ್ದರು.