ಸಾಧನೆ ಕಳಪೆಯಾದರೆ ಶಿಸ್ತು ಕ್ರಮ : ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್
ದಾವಣಗೆರೆ, ಜು. 28 – ತಾಲ್ಲೂಕು ಮಟ್ಟದಲ್ಲಿ ವಿವಿಧ ಇಲಾಖೆಗಳು ಯಾವ ರೀತಿ ಕೆಲಸ ಮಾಡುತ್ತಿವೆ ಎಂಬುದರ ಬಗ್ಗೆ ನಿಗಾ ವಹಿಸಿ ಗ್ರೇಡಿಂಗ್ (ಶ್ರೇಣಿ) ರೂಪಿಸಲಾಗುವುದು. ಸಾಧನೆ ಕಳಪೆಯಾದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಜನಪರವಾಗಿ ಹಾಗೂ ತ್ವರಿತವಾಗಿ ಕೆಲಸ ಮಾಡಬೇಕು. ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಕಾರ್ಯಕ್ಷೇತ್ರಗಳಿಗೆ ಭೇಟಿ ನೀಡಿ ಸಮಸ್ಯೆ ಅರಿತು ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಲಾಗಿದೆ. ತಾಲ್ಲೂಕುಗಳ ಕಾರ್ಯ ನಿರ್ವಹಣೆ ಕುರಿತು ತಿಳಿಯಲು ಪ್ರತಿ ತಿಂಗಳು ಕಂದಾಯ ಅಧಿಕಾರಿಗಳ ಸಭೆ ಮಾಡಲಾಗುವುದು ಎಂದು ಹೇಳಿದರು. ಅನ್ನ ಭಾಗ್ಯ ಯೋಜನೆಯಡಿ ಬಿ.ಪಿ.ಎಲ್. ಪಡಿತರದಾರರಿಗೆ ನೀಡಲಾಗುತ್ತಿರುವ ಹಣ ತೊಡಕುಗಳಿಂದಾಗಿ ಈ ತಿಂಗಳು ಸಿಗದೇ ಇದ್ದರೆ, ಮುಂದಿನ ತಿಂಗಳು ನೀಡಲು ಯೋಜನೆ ಇದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದರು.
ಜಿಲ್ಲೆಯಲ್ಲಿ ಶೇ.55ರಷ್ಟು ಬಿತ್ತನೆ
ಜಿಲ್ಲೆಯಲ್ಲಿ ಇದುವರೆಗೂ ಶೇ.22ರಷ್ಟು ಹೆಚ್ಚುವರಿ ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 2.45 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಶೇ. 55 ರಷ್ಟು ಬಿತ್ತನೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ. ಭದ್ರಾ ಜಲಾಶಯದಲ್ಲಿ ಪ್ರಸ್ತುತ 159.1 ಅಡಿ ನೀರಿದ್ದು ಇದು 163 ಅಡಿಗೆ ಏರಿಕೆಯಾದ ತಕ್ಷಣ ಬೆಳೆಗಳಿಗೆ ನೀರು ಬಿಡಲಾಗುತ್ತದೆ. ಈ ಬಗ್ಗೆ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ನಿರ್ಣಯಿಸಲಾಗುತ್ತದೆ ಎಂದವರು ಹೇಳಿದರು.
ಜುಲೈನಲ್ಲಿ 29480 ಮೆ.ಟನ್ ರಸಗೊಬ್ಬರ ಬೇಡಿಕೆ ಇದ್ದು, 44563 ಮೆ.ಟನ್ ಗೊಬ್ಬರ ದಾಸ್ತಾನಿದೆ. ಇದುವರೆಗೂ 43218 ಕ್ವಿಂಟಾಲ್ ಬಿತ್ತನೆ ಬೀಜ ವಿತರಣೆ ಮಾಡಿದ್ದು, 10444 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿರುತ್ತದೆ ಎಂದರು.
ಶಾಲೆ, ಸ್ಮಶಾನಗಳಿಗೆ ಜಾಗ ನೀಡಲು ಆದ್ಯತೆ
ಪ್ರತಿ ಗ್ರಾಮಗಳಲ್ಲಿ ಲಭ್ಯವಿರುವ ಸರ್ಕಾರಿ ಜಾಗಗಳನ್ನು ಗುರುತಿಸಿ ಅದನ್ನು ಶಾಲೆ, ಆಸ್ಪತ್ರೆ, ಅಂಗನವಾಡಿ ಹಾಗೂ ಸ್ಮಶಾನಗಳಿಗೆ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ಎಲ್ಲ ಗ್ರಾಮಗಳಲ್ಲೂ ಸ್ಮಶಾನದ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಚಾನಲ್ ಜಾಗಗಳು ಒತ್ತುವರಿಯಾದ 9 ಸಾವಿರ ಸರ್ವೇ ನಂಬರ್ಗಳಿವೆ. ಸರ್ಕಾರ ಚಾನಲ್ ಜಾಗ ಪಡೆದುಕೊಂಡರೂ ಆರ್.ಟಿ.ಸಿ.ಯಲ್ಲಿ ಇಂಡೀಕರಣ ಆಗಿಲ್ಲ. ಈ ಬಗ್ಗೆ ಮೊದಲು ಕ್ರಮ ತೆಗೆದುಕೊಳ್ಳಲಾಗು ವುದು. ನಂತರದಲ್ಲಿ ಕೆರೆ, ಸರ್ಕಾರಿ ಜಮೀನು ಹಾಗೂ ಅರಣ್ಯ ಜಮೀನು ಒತ್ತುವರಿಗಳ ವಿರುದ್ಧ ಕ್ರಮ ತೆಗೆದು ಕೊಳ್ಳಲಾಗುವುದು ಎಂದವರು ತಿಳಿಸಿದರು.
ಪ್ರತಿ ಗ್ರಾಮದಲ್ಲೂ ನಿವೇಶನ ಹಾಗೂ ಮನೆ ಇಲ್ಲದವರಿಗೆ ಕಂದಾಯ ಜಮೀನಿನಲ್ಲಿ ಅವಕಾಶ ಕಲ್ಪಿಸಲಾಗುವುದು. ಜಮೀನು ಲಭ್ಯವಿರದೇ ಇದ್ದರೆ ಖಾಸಗಿಯವ ರಿಂದಲಾದರೂ ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಆಧಾರ್ ಜೋಡಣೆ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಜಿಲ್ಲೆಯ 40 ಸಾವಿರ ಪಡಿತರದಾರರ ಖಾತೆಗಳಿಗೆ ಹಣ ಜಮಾ ಆಗಿರಲಿಲ್ಲ. ಈ ತೊಡಕುಗಳನ್ನು ಬಗೆಹರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದವರು ಹೇಳಿದರು.
ಮಳೆ ಕಾರಣದಿಂದಾಗಿ ಆಗಬಹುದಾದ ಅನಾಹುತಗಳ ತಡೆಗೆ ಮುನ್ನೆಚ್ಚರಿಕಾ ಕ್ರಮಕ್ಕೆ ಸೂಚನೆಗಳನ್ನು ನೀಡಲಾಗಿದೆ. ಮಳೆ ಕಾರಣದಿಂದ ಸಾವು ಸಂಭವಿಸಿದರೆ ಇಲ್ಲವೇ ಮನೆ ಕುಸಿದರೆ 24 ಗಂಟೆಗಳ ಒಳಗೆ ಪರಿಹಾರ ತಲುಪಿಸಲು ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
51 ಅಂಗನವಾಡಿ ಹಾಗೂ 11 ಶಾಲೆಗಳು ಮಳೆಯಿಂದ ಸೋರುತ್ತಿರುವುದು ಕಂಡು ಬಂದಿದೆ. ಈ ರೀತಿಯ ಸಮಸ್ಯೆ ಇರುವ ಶಾಲಾ ಕಟ್ಟಡಗಳನ್ನು ಗುರುತಿಸಿ ಪರ್ಯಾಯ ಯೋಜನೆ ರೂಪಿಸುವಂತೆ ಸೂಚನೆ ನೀಡಲಾಗಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಉಪಸ್ಥಿತರಿದ್ದರು.