ಅರ್ಧದಷ್ಟು ಜನರಿಂದ ಗೃಹಲಕ್ಷ್ಮಿ ಅರ್ಜಿ ನಗರ ಪ್ರದೇಶಗಳಲ್ಲೇ ನೋಂದಣಿ ಹಿಂದೆ

ಅರ್ಧದಷ್ಟು ಜನರಿಂದ ಗೃಹಲಕ್ಷ್ಮಿ ಅರ್ಜಿ ನಗರ ಪ್ರದೇಶಗಳಲ್ಲೇ ನೋಂದಣಿ ಹಿಂದೆ

ದಾವಣಗೆರೆ ತಾಲ್ಲೂಕಿನ ಆವರಗೊಳ್ಳ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಭೇಟಿ ನೀಡಿ ಪರಿಶೀಲಿಸಿದರು.

ದಾವಣಗೆರೆ, ಜು. 28 – ಜಿಲ್ಲೆಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ 4.24 ಲಕ್ಷ ಅರ್ಜಿ ದಾಖಲಿಸುವ ಗುರಿ ಇದ್ದು, ಇದುವರೆಗೂ 2.20 ಲಕ್ಷದಷ್ಟು ಅರ್ಜಿಗಳು ದಾಖಲಾಗಿವೆ. ಇದ ರೊಂದಿಗೆ ಯೋಜನೆಗೆ ಅರ್ಜಿ ದಾಖಲಿಸುವಲ್ಲಿ ಅರ್ಧದಷ್ಟು ದಾರಿ ಕ್ರಮಿಸಿದಂತಾಗಿದೆ. ಈ ಯೋಜನೆಯ ಫಲಾನುಭವಿಗಳ ಖಾತೆಗೆ ತಿಂಗಳಿಗೆ 2 ಸಾವಿರ ರೂ. ಜಮಾ ಮಾಡಲಾಗುವುದು.

ಆದರೆ, ದಾವಣಗೆರೆ ನಗರದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರೆ, ಅರ್ಜಿ ದಾಖಲಿ ಸಲು ಕೇಂದ್ರಗಳ ಕೊರತೆ ಇದೆ. ಈ ಹಿನ್ನೆಲೆ ಯಲ್ಲಿ ದಾವಣಗೆರೆ ದಕ್ಷಿಣದಲ್ಲಿ 20 ಹಾಗೂ ಉತ್ತರದಲ್ಲಿ 7 ದಾಖಲಾತಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದೆ.

ಗೃಹಲಕ್ಷ್ಮಿ ಯೋಜನೆಗಾಗಿ ಇದುವ ರೆಗೂ ಶೇ.80ರಷ್ಟು ನೋಂದಣಿ ಪೂರ್ಣ ಗೊಂಡಿರುವ ಗ್ರಾಮ ಒನ್‌ ಕೇಂದ್ರಗಳಿಂದ ಕಂಪ್ಯೂಟರ್‌ ಆಪರೇಟರ್‌ಗಳನ್ನು ಪಡೆದು, ದಾವಣಗೆರೆ ಉತ್ತರ ಹಾಗೂ ದಕ್ಷಿಣದ ಕೇಂದ್ರಗಳಿಗೆ ನಿಯೋಜಿಸಲು ನಿರ್ಧರಿಸಲಾಗಿದೆ.

ಇದೇ ವೇಳೆ ದಾವಣಗೆರೆ ತಾಲ್ಲೂಕಿಗೆ 143 ಜನಪ್ರತಿನಿಧಿಗಳನ್ನು ನೇಮಿಸಲಾಗಿದೆ. ಇವರು ಜನರ ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ಅರ್ಜಿ ದಾಖಲಿಸಲು ನೆರವಾಗಲಿದ್ದಾರೆ. ಪ್ರಸಕ್ತ ದಾವಣಗೆರೆ ತಾಲ್ಲೂಕಿಗೆ ಮಾತ್ರ ಸೀಮಿತವಾಗಿ ಪ್ರಜಾಪ್ರತಿನಿಧಿಗಳ ನೇಮಕವಾಗಿದೆ.

ಬೇರೆ ತಾಲ್ಲೂಕುಗಳ ಪರಿಸ್ಥಿತಿ ಪರಿಶೀಲಿಸಿದ ನಂತರ ಪ್ರಜಾಪ್ರತಿನಿಧಿ ನೇಮಕ ಹಾಗೂ ಹೊಸ ಕೇಂದ್ರಗಳ ಸ್ಥಾಪನೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಜುಲೈ 19ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ದಾಖಲಿಸುವ ಪ್ರಕ್ರಿಯೆ ಆರಂಭಿಸಲಾಗಿತ್ತು. ಮೊದಲು ಮೊಬೈಲ್‍ಗೆ ಮೆಸೇಜ್ ಬಂದವರು ಮಾತ್ರ ಅರ್ಜಿ ದಾಖಲಿಸಬೇಕು ಎಂದು ತಿಳಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ತೊಡಕಾದ ಕಾರಣ, ಸೇವಾ ಸಿಂಧು ಕೇಂದ್ರಗಳಿಗೆ ಜನರು ನೇರವಾಗಿ ಬಂದು ಅರ್ಜಿ ದಾಖಲಿಸಬಹುದು ಎಂದು ತಿಳಿಸಲಾಗಿತ್ತು.

ಇದರಿಂದಾಗಿ ನಗರದ ದಾವಣಗೆರೆ ಒನ್ ಕೇಂದ್ರಗಳ ಎದುರು ದೊಡ್ಡ ಸಂಖ್ಯೆಯಲ್ಲಿ ಜನರು ಬಂದು ಸರದಿಯಲ್ಲಿ ನಿಲ್ಲುವಂತಾಗಿತ್ತು. ಮಳೆ ಹಾಗೂ ಚಳಿಯ ನಡುವೆಯೂ ಕೇಂದ್ರಗಳ ಎದುರು ಜನ ಜಮಾಯಿಸುತ್ತಿದ್ದರು.

ಇನ್ನು ಕೆಲವರು ನಗರ ಕೇಂದ್ರಗಳ ಸಹವಾಸವೇ ಬೇಡ ಎಂದು ಗ್ರಾಮಾಂತರ ಕೇಂದ್ರಗಳ ಕಡೆಗೂ ಮುಖ ಮಾಡಿದ್ದರು. ಪ್ರಜಾಪ್ರತಿನಿಧಿಗಳನ್ನು ನೇಮಕ ಮಾಡಿ ಮನೆಯಿಂದಲೇ ಅರ್ಜಿ ಪಡೆಯುವುದಾಗಿ ಸರ್ಕಾರ ಭರವಸೆ ನೀಡಿತ್ತಾದರೂ, ಇದುವರೆಗೂ ಪ್ರಜಾಪ್ರತಿನಿಧಿಗಳ ನೇಮಕ ಆಗಿರಲಿಲ್ಲ.

ಈ ತೊಡಕುಗಳ ನಡುವೆಯೇ, ಜಿಲ್ಲೆಯಲ್ಲಿ ಅರ್ಧದಷ್ಟು ಫಲಾನುಭವಿಗಳು ಅರ್ಜಿ ದಾಖಲಿಸಿದ್ದಾರೆ. ನಗರದಲ್ಲಿ ಹೊಸ ಕೇಂದ್ರಗಳ ಸ್ಥಾಪನೆ ಹಾಗೂ ಪ್ರಜಾಪ್ರತಿನಿಧಿಗಳ ನೇಮಕದಿಂದ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ.

error: Content is protected !!