ಸಂಸ್ಥೆ ಬೆಳೆಯಬೇಕಾದರೆ ಜಾತಿ, ಪಕ್ಷ ಇರಬಾರದು

ಸಂಸ್ಥೆ ಬೆಳೆಯಬೇಕಾದರೆ ಜಾತಿ, ಪಕ್ಷ ಇರಬಾರದು

ವಿಶ್ವಬಂಧು ಸೊಸೈಟಿ ಬೆಳ್ಳಿ ಮಹೋತ್ಸವದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಹರಿಹರ, ಜು. 27 – ಸಮಾಜದಲ್ಲಿ ಒಂದು ಸಂಸ್ಥೆ ಹೆಮ್ಮರವಾಗಿ ಬೆಳೆಯತೊಡಗಿದೆ ಹಾಗೂ ಪ್ರಗತಿ ಹೊಂದುತ್ತಿದೆ ಎಂದು ಗೊತ್ತಾದ ತಕ್ಷಣವೇ ಅದನ್ನು ಮುಳುಗಿಸುವ ಸಂಚನ್ನು ಮಾಡುವವರು ಸಮಾಜದಲ್ಲಿ ಜಾಸ್ತಿಯಾಗಿದ್ದಾರೆ. ಆದರೆ ಶ್ರೀ ವಿಶ್ವಬಂಧು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿಗಳು ಮತ್ತು ಷೇರುದಾರರು ತಂಡವಾಗಿ ಕಾರ್ಯನಿರ್ವಹಿಸಿ, ಪಾರದರ್ಶಕತೆ ಮತ್ತು ದಕ್ಷತೆಯಿಂದ ಇರುವುದರಿಂದ ಸೊಸೈಟಿ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿದೆ ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಪಟ್ಟಾಧ್ಯಕ್ಷರಾದ ಶ್ರೀ  ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ನಗರದ ಸಿದ್ದೇಶ್ವರ ಪ್ಯಾಲೇಸ್ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ ಶ್ರೀ ವಿಶ್ವಬಂಧು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಯಮಿತದ ಬೆಳ್ಳಿಹಬ್ಬ ಮಹೋತ್ಸವ ನೆನಪಿನ ಶಿವ ಸದನದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಸಂಸ್ಥೆಯೊಂದು ಎತ್ತರಕ್ಕೆ ಬೆಳೆಯುವಾಗ ಅದರಲ್ಲಿ ಜಾತಿ ಹಾಗೂ ಪಕ್ಷ ಸೇರದಂತೆ ಎಚ್ಚರಿಕೆ ವಹಿಸಬೇಕು. ಜಾತಿ ಹಾಗೂ ಪಕ್ಷ ಮಾಡುವಷ್ಟು ಅನಾಹುತಗಳನ್ನು ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ ಎಂದೂ ಶ್ರೀಗಳು ತಿಳಿಸಿದರು.  1999ರಲ್ಲಿ ಈ ವಿಶ್ವಬಂಧು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯನ್ನು ನಾನು ಉದ್ಘಾಟನೆ ಮಾಡಿದ್ದೆ. ಇಂದು ನನ್ನಿಂದ ಬೆಳ್ಳಿ ಮಹೋತ್ಸವದ ಆಚರಣೆ ಮಾಡಿಕೊಳ್ಳುವಂತೆ ಆಗಿರುವುದು ಸಂತಸ ತಂದಿದೆ ಎಂದರು.

ತುಂಗಭದ್ರಾ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಾಜಿ ಅಧ್ಯಕ್ಷ ಡಿ. ಹೇಮಂತರಾಜ್ ಮಾತನಾಡಿ, ಬೆಳ್ಳೂಡಿ ರಾಮಚಂದ್ರಪ್ಪನವರಿಗೆ ಸಹಕಾರಿ ಸಂಘದಲ್ಲಿ ಸಾಕಷ್ಟು ಅನುಭವ ಇರುವ ಕಾರಣ ಸೊಸೈಟಿ ಹೆಮ್ಮರವಾಗಿ ಬೆಳೆಸುವ ಶಕ್ತಿ ದೊರೆತಿದೆ ಎಂದರು.

ಕೆ.ಎಂ.ಎಫ್ ಮಾಜಿ ಅಧ್ಯಕ್ಷ ಬಿ. ಜಗದೀಶಪ್ಪ ಮಾತನಾಡಿ, ಈ ಸೊಸೈಟಿ ಕೋಟಿ ರೂ.ಗಳಿಗೂ ಅಧಿಕ ಲಾಭ ಗಳಿಸಿದೆ. ಸೊಸೈಟಿಯಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶ ನೀಡಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸಹಕಾರಿ ಸಂಘವನ್ನು ಮುನ್ನಡೆಸುವುದು ಸುಲಭವಲ್ಲ.
ಸರಿಯಾದ ಸಾಮರ್ಥ್ಯ ಇದ್ದರೆ ಮಾತ್ರ ಸೊಸೈಟಿಯ ಉನ್ನತಿ ಸಾಧ್ಯ ಎಂದರು.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಸಹಕಾರಿ ಸಂಘಗಳು ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಕೊಡಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಶ್ರೀ ವಿಶ್ವಬಂಧು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಬೆಳ್ಳೂಡಿ ಬಿ. ರಾಮಚಂದ್ರಪ್ಪ ಮಾತ ನಾಡಿ, 1999ರಲ್ಲಿ 4 ಲಕ್ಷ ರೂ.ಗಳ ಬಂಡವಾಳದೊಂದಿಗೆ ಆರಂಭವಾದ ಸೊಸೈಟಿ ಇಂದು 1 ಕೋಟಿ 9 ಲಕ್ಷ ರೂ.ಗಳ ಲಾಭ ಗಳಿಸಿದೆ.  ಬೆಳ್ಳಿ ಮಹೋತ್ಸವದ ನೆನಪಿಗಾಗಿ ಸಂತೆಬೆನ್ನೂರು ಗ್ರಾಮದಲ್ಲಿ ಇನ್ನೊಂದು ಶಾಖೆಯನ್ನು ತೆರೆದು, ಇನ್ನಷ್ಟು ಪ್ರಗತಿಯ ಹೆಜ್ಜೆ ಇಡಲಾಗುತ್ತಿದೆ ಎಂದರು. 

ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ. ಹೆಚ್.ಎಸ್.  ಮಂಜುನಾಥ ಕುರ್ಕಿ ಮಾತನಾಡಿ, ಪ್ರಜಾ ಸತ್ತಾತ್ಮಕ ತಳಹದಿಯ ಮೇಲೆ ಸಹಕಾರ ಸಂಘಗಳು ರಚಿಸಲ್ಪಟ್ಟು ವಿಶ್ವದಾದ್ಯಂತ ತನ್ನ ವ್ಯಾಪ್ತಿಯನ್ನು ಪಸರಿಸಿವೆ. ಜಾತಿ, ಧರ್ಮ, ಪಂಥ, ಭಾಷೆ ಮೀರಿ ಆರ್ಥಿಕ ಬದುಕನ್ನು ಹಸನು ಮಾಡಿವೆ ಎಂದರು.

ಈ ವೇಳೆ ನಿಟ್ಟೂರಿನ ಸಾವಯವ ಕೃಷಿ ತಜ್ಞರಾದ ಸರೋಜಮ್ಮ ಎನ್. ಪಾಟೀಲ್, ಭಾರತೀಯ ನೌಕಾಪಡೆಗೆ ಆಯ್ಕೆಯಾದ ಭೂಮಿಕಾ ಮತ್ತು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. 25 ನೇ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ಬೆಳ್ಳೂಡಿ ಬಿ. ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಡಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ. ಹಾಲೇಶಪ್ಪ, ಶ್ರೀ ವಿಶ್ವಬಂಧು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪಾಧ್ಯಕ್ಷರಾದ ಡಿ. ವನಜಾಕ್ಷಮ್ಮ ಕುಂಬಳೂರು, ನಿರ್ದೇಶಕರಾದ ಕೆ. ಕುಮಾರ್ ಹೊಳೆ ಸಿರಿಗೆರೆ, ಹೆಚ್. ನಾಗರಾಜ್ ಅಮರಾವತಿ, ಹೆಚ್. ಶಾಂತವೀರಪ್ಪ ಯಲವಟ್ಟಿ, ಕೆ. ದೇವೇಂದ್ರಪ್ಪ ಹೊಳೆ ಸಿರಿಗೆರೆ, ಕೆ.ಜಿ. ಮೂರ್ತಿ ಕುಂಬಳೂರು, ಕೆ.ಎಸ್. ದೇವರಾಜ್ ಕುಂಬಳೂರು, ಪಾರ್ವತಮ್ಮ ಶೇಖರಪ್ಪ ಹರಿಹರ, ಜಿ. ಮಲ್ಲಪ್ಪ ಬೆಳ್ಳೂಡಿ, ಕಡೇಮನೆ ಪುಟ್ಟಪ್ಪ ಕುಂಬಳೂರು, ಎನ್.ಕೆ. ಪ್ರಕಾಶ್ ಬೆಳ್ಳೂಡಿ, ಎನ್ ನಾಗರಾಜ್ ಹೊಳೆ ಸಿರಿಗೆರೆ, ಮುಖ್ಯ ವ್ಯವಸ್ಥಾಪಕ ಕೆ.ಟಿ. ಶಂಭುಲಿಂಗಪ್ಪ, ಮಾಜಿ ಅಧ್ಯಕ್ಷ ಸುರೇಶಪ್ಪ, ಬಸಪ್ಪ, ವೆಂಕಟೇಶ,   ಸಿಬ್ಬಂದಿಗಳಾದ ಬಿ.ಎಸ್. ರಾಘವೇಂದ್ರ, ಕೆ.ಹೆಚ್. ಉಮೇಶ್, ಬಿ. ಗಣೇಶ್, ಜಿ.ಎಂ. ರವಿಕುಮಾರ್, ಜಿ.ಎನ್. ನಿರ್ಮಲ ಇತರರು ಹಾಜರಿದ್ದರು.

ಪ್ರಾರ್ಥನೆಯನ್ನು ರವಿಭಟ್ ದಂಪತಿ, ಸ್ವಾಗತ ಕೆ. ಕುಮಾರ್ ಹೊಳೆಸಿರಿಗೆರೆ, ನಿರೂಪಣೆಯನ್ನು ವ್ಯವಸ್ಥಾಪಕ ಕೆ.ಟಿ. ಶಂಭುಲಿಂಗಪ್ಪ  ನೆರವೇರಿಸಿದರು.

error: Content is protected !!