ಆಕಾಶವೇ ಚಪ್ಪರ, ತುಂತುರು ಮಳೆಯೇ ಅಕ್ಷತೆ

ಆಕಾಶವೇ ಚಪ್ಪರ, ತುಂತುರು ಮಳೆಯೇ ಅಕ್ಷತೆ

ರಾಜ್ಯ ಮಹಿಳಾ ನಿಲಯದಲ್ಲಿ ಮಂತ್ರ ಮಾಂಗಲ್ಯ, ಯವತಿಯರಿಗೆ ಕಂಕಣ ಭಾಗ್ಯ

ದಾವಣಗೆರೆ, ಜು. 26- ಅಲ್ಲಿ ಆಕಾಶವೇ ಚಪ್ಪರ, ಭೂಮಿಯೇ ಹಸೆಮಣೆ, ಸುತ್ತಲಿನ ಹಸಿರು ಗಿಡ-ಮರಗಳೇ ತಳಿರುತೋರಣ, ತುಂತುರು ಮಳೆ ಹನಿಗಳೇ ಅಕ್ಷತೆ, ಬಂದವರೇ ಬಂಧುಗಳು..!

ಹೌದು, ಇಲ್ಲಿನ ಶ್ರೀರಾಮನಗರದಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿನ ಯುವತಿಯರಿಬ್ಬರು ಬುಧವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು.  ಇಲ್ಲಿಯವರೆಗೂ ಇಲ್ಲಿ 40 ವಿವಾಹಗಳು ನಡೆದಿವೆ. ಆದರೆ ಇಂದು ನಡೆದದ್ದು ಮಾತ್ರ ವಿಶೇಷ ಅದುವೇ `ಮಂತ್ರ ಮಾಂಗಲ್ಯ’

ಸಂಬಂಧಿಕರಿಲ್ಲದೆ ಬಂದು ಸೇರುವ ಹೆಣ್ಣಿಗೆ ತಾನೂ ಸಹ ಎಲ್ಲರಂತೆ ಗೃಹಿಣಿಯಾಗುತ್ತೇನೆಂಬ ಸಂತಸ. ಹುಡುಗನಿಗೆ ಜೊತೆಗಾತಿ ಸಿಕ್ಕಳೆಂಬ ಹರ್ಷ. ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಿಗೆ ಹಾಗೂ ಅಧಿಕಾರಿಗಳಿಗೆ ತಾವೊಂದು ಪುಣ್ಯದ ಕೆಲಸ ಮಾಡಿದ ನಿರಮ್ಮಳ ಭಾವ.

ಜೀವನದಲ್ಲಿ ವಿವಿಧ ಸಂಕಷ್ಟಗಳಿಂದಾಗಿ ಇಲ್ಲಿಗೆ ಬಂದು ಸೇರುವ ಯುವತಿಯರನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿನ ಯುವಕರೇ ವರಿಸಿದ್ದು ಹೆಚ್ಚು. ಆ ಭಾಗದಲ್ಲಿ ಕೃಷಿಕರಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಾರೆ ಎಂಬುದೊಂದು ಇದಕ್ಕೆ ಪ್ರಮುಖ ಕಾರಣ. ಈ ಬಾರಿ ಇದೇ ಜಿಲ್ಲೆಯ ಹರಿಹರ ತಾಲ್ಲೂಕಿನ ಹುಡುಗನೊಬ್ಬ ಇಲ್ಲಿನ ಯುವತಿಯನ್ನು ಮದುವೆಯಾದದ್ದು ಮತ್ತೊಂದು ವಿಶೇಷ.

ರಾಜ್ಯ ಮಹಿಳಾ ನಿಲಯದಲ್ಲಿ 9 ವರ್ಷಗಳ ಕಾಲ ಆಶ್ರಯ ಪಡೆದ ರಮ್ಯ (30) ಮತ್ತು ವಿನೋದ (34) ಎಂಬ ಇಬ್ಬರು ಯುವತಿಯರ ವಿವಾಹ ಇಂದು ನಡೆಯಿತು. ಸಂಪ್ರದಾಯವನ್ನು ಕೈಬಿಟ್ಟು, ಪುರೋಹಿತರನ್ನು ಕರೆಸದೇ ಸರಳ ವಿಧಾನದಲ್ಲಿ ವಿವಾಹ ಮಹೋತ್ಸವವನ್ನು ನೆರವೇರಿಸಲಾಯಿತು. 

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪದ ಉಂಬಳಮನೆಯ ನಿವಾಸಿ ನಾಗರಾಜ ಪರಮೇಶ್ವರ ಹೆಗಡೆ  ಎಂಬ ಯುವಕ ರಮ್ಯಳಿಗೆ ಜೊತೆಯಾದರು. ಇವರಿಗೆ ಸ್ವಂತ ಅಡಿಕೆ ತೋಟವಿದೆ. ಜೊತೆಗೆ ಕ್ಯಾಟರಿಂಗ್ ಕೆಲಸ ಮಾಡುತ್ತಾರೆ.

ಸಂಸ್ಥೆಯ ಮತ್ತೋರ್ವ ಯುವತಿ ವಿನೋದಳನ್ನು ಹರಿಹರ ತಾಲ್ಲೂಕಿನ ದೇವರಬೆಳಕೆರೆ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಯು.ಎಂ ವರಿಸಿದ್ದಾರೆ.  ತಮ್ಮದೇ ಆದ ವ್ಯವಸಾಯ ಭೂಮಿ ಹೊಂದಿರುವ ಈತ ಸಹ ಆರ್ಥಿಕವಾಗಿ ಸದೃಢನಾಗಿದ್ದಾನೆ.

ಇಬ್ಬರೂ ಯುವತಿಯರು  ಜೀವನದಲ್ಲಿ ಸಾಕಷ್ಟು ಸಂಕಷ್ಟಗಳಿಗೆ ಒಳಗಾಗಿ ನಮ್ಮ ಸಂಸ್ಥೆಗೆ ಬಂದು ಸಣ್ಣ ಪುಟ್ಟ ತರಬೇತಿ ಪಡೆದು ಸ್ವಾವಲಂಬಿಗಳಾಗಿದ್ದಾರೆ ಎನ್ನುತ್ತಾರೆ ಮಹಿಳಾ ನಿಲಯದ ಅಧಿಕಾರಿ. 

ವಿವಾಹದ ನಂತರ ಮಾತನಾಡಿದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಧಿವೃದ್ಧಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ, ಸಂಪ್ರದಾಯವನ್ನು ಕೈಬಿಟ್ಟು ರಾಷ್ಟ್ರಕವಿ ಕುವೆಂಪುರವರ ಮಂತ್ರ ಮಾಂಗಲ್ಯ ಧಾರಣೆಯಂತೆ ಜಾತಿ, ಕುಲ, ಮತಗಳೆನ್ನದೇ ಮಹಿಳಾ ನಿಲಯದ ಯುವತಿಯರ ವಿವಾಹವನ್ನು ನೆರವೇರಿಸಲಾಗಿದೆ ಎಂದರು.

ಇಬ್ಬರೂ ಮಹಿಳೆಯರು ಸ್ವ-ಇಚ್ಛೆಯಿಂದ ಸಂಸ್ಥೆಯಿಂದಲೇ ವಿವಾಹವಾಗಿ ಬಿಡುಗಡೆಯಾಗಲು ಒಪ್ಪಿದ್ದರಿಂದ, ಪೊಲೀಸ್ ವಿಚಾರಣೆ ಮೂಲಕ ವರರ ವ್ಯಕ್ತಿತ್ವ ಹಾಗೂ ಸ್ಥಳ ಪರಿಶೀಲನೆ ನಡೆಸಿದ ನಂತರ ವಿವಾಹದ ಮಾಹಿತಿಯನ್ನು ಇಲಾಖಾ ನಿರ್ದೇಶಕರಿಗೆ ರವಾನಿಸಿ, ಅವರ ಅನುಮೋದನೆ ಹಾಗೂ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ವಿವಾಹವನ್ನು ಏರ್ಪಡಿಸಲಾಗಿದೆ ಎಂದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ದಾವಣಗೆರೆ ಇವರ ಸಹಯೋಗದಲ್ಲಿ ಜರುಗಿದ ವಿವಾಹ ಮಹೋತ್ಸವದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್.ಕೆ ಆಗಮಿಸಿ ವಧು-ವರರಿಗೆ ಆಶೀರ್ವದಿಸಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಕೆ ಪ್ರಕಾಶ್, ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಸೌಮ್ಯ ಶ್ರೀ, ರಾಜ್ಯ ಮಹಿಳಾ ನಿಲಯ, ದಾವಣಗೆರೆ ಅಧೀಕ್ಷಕಿ ಶ್ರೀಮತಿ ಶಕುಂತಲಾ ಬಿ ಕೋಳೂರ ಉಪಸ್ಥಿತರಿದ್ದರು.

error: Content is protected !!