ಎಲ್‌ಕೆಜಿಗೆ ಲಕ್ಷ, ಎಂಬಿಎ ಶುಲ್ಕಕ್ಕೆ ಅಲಕ್ಷೆ

ಎಲ್‌ಕೆಜಿಗೆ ಲಕ್ಷ, ಎಂಬಿಎ ಶುಲ್ಕಕ್ಕೆ ಅಲಕ್ಷೆ

ಗುಣಮಟ್ಟದ ಉನ್ನತ ಶಿಕ್ಷಣಕ್ಕಾಗಿ ಹೆಚ್ಚಿನ ಶುಲ್ಕಕ್ಕೆ ಹಿಂಜರಿಯಬಾರದು: ಸುಭಾಸ್

ದಾವಣಗೆರೆ, ಜು. 12 – ಗುಣಮಟ್ಟದ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಹಣ ಪಾವತಿಸುವುದು ಅನಿವಾರ್ಯವಾಗಿದೆ. ಉನ್ನತ ಶಿಕ್ಷಣದ ವೆಚ್ಚವನ್ನು ಸರ್ಕಾರವಷ್ಟೇ ಅಲ್ಲದೇ ಉದ್ಯಮಿ ಗಳು ಹಾಗೂ ವಿದ್ಯಾರ್ಥಿಗಳು ಭರಿಸಬೇಕಿದೆ ಎಂದು ಬಳ್ಳಾರಿಯ ವಿಜಯನಗರ ವಿಶ್ವವಿದ್ಯಾ ನಿಲಯದ ವಿಶ್ರಾಂತ ಕುಲಪತಿ ಪ್ರೊ. ಎಂ.ಎಸ್. ಸುಭಾಸ್ ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾನಿಲಯದ ಆಡಳಿತ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ವತಿಯಿಂದ `ಆತ್ಮನಿರ್ಭರ ಭಾರತ ಹಾಗೂ ನಿರ್ವಹಣಾ ಶಾಸ್ತ್ರದ ಹೊಸ ದಿಕ್ಕು’ ಎಂಬ ವಿಷಯ ಕುರಿತು ಆಯೋಜಿಸಲಾಗಿದ್ದ ರಾಷ್ಟ್ರ ಮಟ್ಟದ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಹುಂಡೈ ಕಾರಿನ ದರ ವಿಶ್ವದಲ್ಲಿ ಎಲ್ಲೇ ಖರೀದಿಸಿದರೂ ಬಹುತೇಕ ಒಂದೇ ರೀತಿ ಇರುತ್ತದೆ. ಆದರೆ, ಅಮೆರಿಕದಲ್ಲಿ ಎಂ.ಬಿ.ಎ. ಪದವಿ ಪಡೆಯಲು 20 ಸಾವಿರ ಡಾಲರ್‌ (ಸುಮಾರು 16 ಲಕ್ಷ ರೂ.) ಶುಲ್ಕವಿದೆ. ಭಾರತದಲ್ಲಿ ಮಾತ್ರ ಇದೇ ಪದವಿಗೆ ಲಕ್ಷ ರೂ. ನೀಡಬೇಕು ಎಂದರೂ ಹಿಂದೇಟು ಹಾಕುತ್ತಾರೆ ಎಂದರು.

ಖಾಸಗಿ ಪ್ರಾಥಮಿಕ ಶಾಲೆಗಳಿಗೆ ಲಕ್ಷ ರೂ.ಗಳನ್ನು ಕೊಡುವವರೇ ಉನ್ನತ ಶಿಕ್ಷಣಕ್ಕೆ ಹಣ ಕೊಡಲು ಹಿಂಜರಿಯುತ್ತಿದ್ದಾರೆ. ಉತ್ತಮ ಗುಣಮಟ್ಟದ ಶಿಕ್ಷಣ ಬೇಕಾದರೆ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಶುಲ್ಕ ಪಾವತಿ ಅನಿವಾರ್ಯ. ಹೀಗಾಗಿ, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಸಾಲ ಪಡೆಯಲೂ ಹಿಂಜರಿಯಬಾರದು. ಉದ್ಯಮ ವಲಯ ಸಹ ಉನ್ನತ ಶಿಕ್ಷಣಕ್ಕೆ ನೆರವು ನೀಡಬೇಕು ಎಂದವರು ಹೇಳಿದರು.

ಸರ್ಕಾರಿ ವಿಶ್ವವಿದ್ಯಾನಿಲಯಗಳು ಹಾಗೂ ಸರ್ಕಾರಿ ಕಾಲೇಜುಗಳು ಗುಣಮಟ್ಟದ ಶಿಕ್ಷಣ ನೀಡುವ ದಿಸೆಯಲ್ಲಿ ಸವಾಲುಗಳನ್ನು ಎದುರಿಸು ತ್ತಿವೆ. ಕರ್ನಾಟಕ ವಿಶ್ವವಿದ್ಯಾನಿಲಯ ಸೇರಿ ದಂತೆ, ಹಲವು ವಿ.ವಿ.ಗಳ ಬಜೆಟ್‌ನ ಶೇ.90 ರಷ್ಟು ಹಣ ವೇತನಕ್ಕೇ ಹೋಗುತ್ತಿದೆ. ಹೀಗಿ ರುವಾಗ ವಿಶ್ವವಿದ್ಯಾನಿಲಯಗಳ ಅಭಿವೃದ್ಧಿ ಹೇಗೆ ಸಾಧ್ಯ? ಎಂದವರು ಪ್ರಶ್ನಿಸಿದರು.

ಈ ನಡುವೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ನೆರವು ಹಾಗೂ ಹೂಡಿಕೆ ಸಿಗುತ್ತಿದೆ. ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳ ಉತ್ತಮ ದಿನಗಳು ಮುಗಿಯುತ್ತಿವೆ ಎಂದು ಸುಭಾಸ್ ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲೆಕ್ಕಪರಿಶೋಧಕ ಅಥಣಿ ವೀರಣ್ಣ, ಈ ಹಿಂದೆ ಕೈಗಾರಿಕೆಗಳನ್ನು ನಿಯಂತ್ರಿಸುವ ಕಾನೂನುಗಳಿದ್ದವು. ಇದರಿಂದಾಗಿ ಕೆಲವೇ ಕಂಪನಿಗಳಿಗೆ ಉತ್ಪಾದನಾ ಅವಕಾಶ ಸಿಗುತ್ತಿತ್ತು. ಈಗ ಉದಾರೀಕರಣ, ಖಾಸಗೀಕರಣ ಹಾಗೂ ಜಾಗತೀಕರಣವಾಗಿ ಹೆಚ್ಚು ಉದ್ಯಮಗಳಿಗೆ ಅವಕಾಶ ಸಿಗುತ್ತಿದೆ ಎಂದರು.

ದಾವಣಗೆರೆ ವಿ.ವಿ. ಕುಲಪತಿ ಪ್ರೊ. ಬಿ.ಡಿ. ಕುಂಬಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಕೆ.ಎಂ.ಎಫ್. ಆಡಳಿತ ವಿಭಾಗದ ನಿರ್ದೇಶಕ ಬಿ.ಪಿ. ಸುರೇಶ್, ಐ.ಎಸ್.ಇ.ಸಿ. ಸಂಸ್ಥೆಯ ಕೆ.ಬಿ.ರಾಮಪ್ಪ, ಪರೀಕ್ಷಾಂಗ ಕುಲಸಚಿವ ಕೆ. ಶಿವಶಂಕರ್, ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಜೆ.ಕೆ. ರಾಜು, ಕಾರ್ಯಕ್ರಮದ ಸಂಯೋಜಕ ಆರ್. ಶಿಶಿಧರ್ ಉಪಸ್ಥಿತರಿದ್ದರು.

ಮನೋಜ್ ಹಾಗೂ ಭರತ್ ಪ್ರಾರ್ಥಿಸಿದರು. ರಮೇಶ್ ಚಂದ್ರಹಾಸ್ ಸ್ವಾಗತಿಸಿದರು.

error: Content is protected !!