ಶ್ರೀ ಮಹಾವೀರ ಸಂಘದ ನೇತೃತ್ವದಲ್ಲಿ ಜೈನ ಸಮಾಜದಿಂದ ನಗರದಲ್ಲಿ ಪ್ರತಿಭಟನೆ
ದಾವಣಗೆರೆ, ಜು. 10- ಜೈನ ಮುನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಶ್ರೀ ಮಹಾವೀರ ಸಂಘದ ನೇತೃತ್ವದಲ್ಲಿ ಜೈನ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಜೈನ ಸಮಾಜದ ಮುಖಂಡ ಗೌತಮ್ ಜೈನ್ ಅವರು, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕು ಹಿರೇಕೋಡಿ ಗ್ರಾಮದ ನಂದಿ ಪರ್ವತ ಎಂಬ ಆಶ್ರಮದಲ್ಲಿ ದಿಗಂಬರ ಜೈನ ಮುನಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಅಪಹರಿಸಿಕೊಂಡು ಹೋಗಿ ಬರ್ಬರವಾಗಿ ಹತ್ಯೆಗೈದಿರುವುದು ಅತ್ಯಂತ ಖಂಡನೀಯ ಎಂದರು.
ಜೈನ ಮುನಿಗಳ ಶರೀರವನ್ನು ವಿಕೃತಗೊಳಿಸಿ ಕೊಲೆ ಮಾಡಿರುವುದನ್ನು ನಾಗರಿಕ ಸಮಾಜ ತೀವ್ರವಾಗಿ ಖಂಡಿಸಿದೆ. ಘಟನೆ ಕುರಿತಂತೆ ಬೆಳಗಾವಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ತ್ವರಿತಗತಿಯಲ್ಲಿ ಕಾರ್ಯಾಚರಣೆ ಮಾಡಿ ಹಂತಕರನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಆದರೆ ತಪ್ಪಿತಸ್ಥರಿಗೆ ಕೂಡಲೇ ಕಠಿಣ ಶಿಕ್ಷೆ ವಿಧಿಸಬೇಕು. ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜೈನ ಸಮುದಾಯದ ಮುಖಂಡರಾದ ಅಜಿತ್ ಕುಮಾರ್, ಸುದರ್ಶನ ಕುಮಾರ್, ಬಿ.ಎಸ್. ಸುನೀಲ್ ಕುಮಾರ್, ಎಸ್.ಟಿ. ಟಾಕಪ್ಪ, ಜಿನದತ್ತ, ಆದಿನಾಥ್, ಎಸ್.ಕೆ. ದೇವೇಂದ್ರಪ್ಪ, ನೇಮಿರಾಜ್, ಚಂದ್ರಪ್ರಭು, ಸುರೇಶ್ ಕುಮಾರ್, ಧನ್ಯಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.