ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್‌ನಲ್ಲಿನ ಕಾರ್ಯಕ್ರಮದಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕಿನ ಉಪಾಧ್ಯಕ್ಷ ಯೋಗೇಶ್
ದಾವಣಗೆರೆ, ಜು. 10- ಎಲ್ಲರೂ ನೌಕರಿಯನ್ನೇ ಅರಸಿ ಕೊಂಡು ಹೋದರೆ ಆಹಾರವನ್ನು ಬೆಳೆದು ಕೊಡುವವರೇ ಇಲ್ಲ ವಾಗುತ್ತಾರೆ. ಈ ಸಂದಿಗ್ಧದಲ್ಲಿ ಬೃಹತ್ ಸಂಸ್ಥೆಗಳು ಪ್ರಸ್ತುತ ಕೃಷಿ ಕ್ಷೇತ್ರವನ್ನು ಪ್ರವೇಶಿಸಲು ತವಕಿಸುತ್ತಿವೆ ಎಂದು ಹೆಚ್‌ಡಿಎಫ್‌ಸಿ ಬ್ಯಾಂಕಿನ ಉಪಾಧ್ಯಕ್ಷ ಕೆ.ಆರ್. ಯೋಗೇಶ್ ಹೇಳಿದರು.
ನಗರದ ಬಾಪೂಜಿ ಇನ್‌ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್ ನ ವಾಣಿಜ್ಯ ವಿಭಾಗದ 2020-23ರ ಸಾಲಿನ ವಿದ್ಯಾರ್ಥಿಗಳಿಗೆ ವಿದಾಯ ಹೇಳುವ “ಬೀಐಹ್ಯಾವ್-2ಕೆ23” ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಎಷ್ಟೇ ವಿದ್ಯಾವಂತರಾದರೂ ಕೃಷಿ ಕ್ಷೇತ್ರದ ಅನುಭವ ಅತ್ಯವಶ್ಯ, ಅದು ಪ್ರಕೃತಿಯೊಂದಿಗೆ ಬೆರೆತು ಬಾಳುವ ಬದುಕನ್ನು ತಿಳಿಸುತ್ತದೆ ಎಂದರಲ್ಲದೆ ತಂತ್ರಜ್ಞಾನದ ತೀವ್ರಗತಿಯ ವೃದ್ಧಿಯು ಕೆಲಸದ ವಿಧಾನಗಳಲ್ಲೂ ಬದಲಾವಣೆಯನ್ನು ಉಂಟುಮಾಡುತ್ತಿದ್ದು ಇದು ಮಾರುಕಟ್ಟೆಯ ವ್ಯವಸ್ಥೆಯಲ್ಲೂ, ಬಳಕೆದಾರರ ಅಭಿರುಚಿಯಲ್ಲೂ ತೀವ್ರ ಬದಲಾವಣೆಯನ್ನು ತರುತ್ತಿದೆ. ಇವುಗಳ ಅರಿವು ಅನುಷ್ಠಾನದೊಂದಿಗೆ ಶಿಸ್ತು, ಸಮಯ ಪಾಲನೆ, ಸಮಾಜ ಗೌರವ ಇದ್ದವರು ಮಾತ್ರ ಯಶಸ್ವಿ ಉದ್ಯೋಗಿಗಳಾಗಲು ಸಾಧ್ಯ ಎಂದರು.
ಕಾಲೇಜಿನ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತ ಕೋರುತ್ತಾ ವಾಣಿಜ್ಯೋದ್ಯಮಗಳು ಆರ್ಥಿಕಾಭಿವೃದ್ಧಿಯ ಬೆನ್ನೆಲುಬುಗಳು ಎಂಬ ಅರಿವು ವಿದ್ಯಾರ್ಥಿಗಳಲ್ಲಿ ಅವಶ್ಯ ಎಂದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ವೀರಪ್ಪ, ಬಿಕಾಂ ಪದವಿಗೆ ಬೇಡಿಕೆ ಹೆಚ್ಚುತ್ತಿದೆ. ಪರೀಕ್ಷೆಯನ್ನು ಶ್ರದ್ಧೆಯಿಂದ, ಸಂತೋಷದಿಂದ ಎದುರಿಸಿ. ಪದವಿಯ ನಂತರ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
ಹರ್ಷಿತ ಮತ್ತು ಸ್ಪೂರ್ತಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಜ್ಞಾ ಪ್ರಾರ್ಥಿಸಿದರು. ವೈಷ್ಣವಿ ಅತಿಥಿಗಳನ್ನು ಪರಿಚಯಿಸಿದರು. ಐಶ್ವರ್ಯ, ಸೈಯದ್ ಅರ್ಮಾನ್, ಮಹ್ಮದ್ ಆದಿಲ್, ಅರ್ಚನಾ ವಂದಿಸಿದರು.