ಅತಿ ಹಿಂದುಳಿದವರಿಗೆ ನ್ಯಾಯ, ಅಧಿಕಾರ

ಅತಿ ಹಿಂದುಳಿದವರಿಗೆ ನ್ಯಾಯ, ಅಧಿಕಾರ

ಕಾಂಗ್ರೆಸ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕನಾಥ್

ದಾವಣಗೆರೆ ಜು. 9 – ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಹಿಂದುಳಿದವರಲ್ಲೇ ಅತ್ಯಂತ ಹಿಂದುಳಿದವರು ಹಾಗೂ ಅಸ್ಪೃಶ್ಯರಿಗೇ ಅಸ್ಪೃಶ್ಯ ರಾದವರನ್ನು ಗುರುತಿಸಿ ಸಾಮಾಜಿಕ ನ್ಯಾಯ ಕಲ್ಪಿಸುವ ಜೊತೆಗೆ ಅವರು ಅಧಿಕಾರ ಚಲಾಯಿಸುವ ದಿನಗಳೂ ಬರಬೇಕು ಎಂದು ರಾಜ್ಯ ಕಾಂಗ್ರೆಸ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕನಾಥ್ ಕರೆ ನೀಡಿದರು.

ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ‘ಅವಕಾಶ ವಂಚಿತ ಹಾಗೂ ರಾಜಕೀಯ ವಂಚಿತ’ ತಳ ಸಮು ದಾಯಗಳ ಸಂಘಟನೆಯ ಉದ್ದೇಶದಿಂದ ಜಿಲ್ಲಾ ಸಾಮಾಜಿಕ ನ್ಯಾಯ ಸಮಿತಿ ರಚಿಸಲು ಕರೆಯ ಲಾಗಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ದಕ್ಕಲಿಗ ಸಮುದಾಯದವರು ಅಸ್ಪೃಶ್ಯರಿಗೇ ಅಸ್ಪೃಶ್ಯರಂತಿದ್ದಾರೆ. ಹಿಂದುಳಿದ ವರ್ಗಗಳಲ್ಲಿ 197 ಜಾತಿಯವರಿದ್ದು, ಇವರಲ್ಲಿ ಬಹುತೇಕ ಜಾತಿಯವರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಜೊತೆಗೆ ರಾಜಕೀಯ ಅವಕಾಶ ನೀಡುವ ಅಗತ್ಯವಿದೆ. ಈ ಎಲ್ಲ ಸಣ್ಣ ಸಮುದಾಯಗಳಿಗೆ ಮಾನ್ಯತೆ ನೀಡಲು ಸಂಘಟನೆ ಬೇಕಿದೆ ಎಂದರು.

ಮಹಾರಾಷ್ಟ್ರ ಹೊರತು ಪಡಿಸಿದರೆ ಕರ್ನಾಟಕದಲ್ಲೇ ಅಲೆಮಾರಿಗಳ ಸಂಖ್ಯೆ ಅತಿ ಹೆಚ್ಚಾಗಿದೆ. ಬಿಜೆಪಿ – ಆರ್.ಎಸ್.ಎಸ್.ಗಳು ಈ ಸಮುದಾಯಗಳನ್ನು ದಾರಿ ತಪ್ಪಿಸುತ್ತಿವೆ. ಇವರನ್ನು ಸಂಪರ್ಕಿಸಿ ಕಾಂಗ್ರೆಸ್ ಪಕ್ಷಕ್ಕೆ ತರಬೇಕಿದೆ ಎಂದು ದ್ವಾರಕನಾಥ್ ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯ ವಿಭಾಗದದವರು ಆದಿವಾಸಿ ಹಾಗೂ ಅಲೆಮಾರಿಗಳನ್ನು ಸಂಪರ್ಕಿಸಿ ಸಂಘಟಿ ಸಿದ್ದೆವು. 16-17 ಜಿಲ್ಲೆಗಳಲ್ಲಿ ಸಂಘಟನೆ ನಡೆಸಿ ದ್ದು, ಈ ಎಲ್ಲ ಕಡೆಗಳಲ್ಲಿ ಕಾಂಗ್ರೆಸ್‌ಗೆ ದೊರೆತ ಮತಗಳು ಶೇ.3-5ರಷ್ಟು ಹೆಚ್ಚಾಗಿವೆ ಎಂದರು.

ಇನ್ನೊಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಅಷ್ಟರ ಒಳಗೆ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿವೆ. ಕಾಂಗ್ರೆಸ್ ಪಕ್ಷ ಬಲಪಡಿಸುವ ಸಲುವಾಗಿ ತಳ ಸಮುದಾಯಗಳನ್ನು ಸಂಪರ್ಕಿಸಬೇಕು ಎಂದವರು ಕರೆ ನೀಡಿದರು.

ಮಹಿಳೆಯರಿಗೆ ಶೇ.50 ಪ್ರಾತಿನಿಧ್ಯ : ಜಿಲ್ಲಾ ಹಾಗೂ ಬ್ಲಾಕ್ ಮಟ್ಟದಲ್ಲಿ ಸಾಮಾಜಿಕ ನ್ಯಾಯ ಸಮಿತಿಗಳನ್ನು ರಚನೆ ಮಾಡಲಾಗುವುದು. 

ಈ ಸಮಿತಿಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಪ್ರಾತಿನಿಧ್ಯ ಕೊಡಲೇಬೇಕು ಎಂದು ಡಾ. ಸಿ.ಎಸ್. ದ್ವಾರಕಾನಾಥ್ ಹೇಳಿದರು.

ಮುಸ್ಲಿಂರಲ್ಲಿ 150 ಜಾತಿ : ಮುಸ್ಲಿಂರಲ್ಲೂ ಜಾತಿಗಳಿವೆ. ಈ ಸಮುದಾಯದಲ್ಲಿ 150ರಷ್ಟು ಜಾತಿಗಳಿವೆ. ಮುಸ್ಲಿಮರಲ್ಲೂ ಅವಕಾಶ ವಂಚಿತ ಜಾತಿಯವರಿಗೆ ಸಾಮಾಜಿಕ ನ್ಯಾಯ ಕಲ್ಪಿಸಬೇಕಿದೆ ಎಂದವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದೆ. ಹಿಂದುಳಿದ ವರ್ಗಗಳಲ್ಲಿ ಸಾಮಾಜಿಕ ನ್ಯಾಯದ ಅರಿವು ಮೂಡಿಸಲು ಹಾಗೂ ಅವಕಾಶ ಕಲ್ಪಿಸಲು ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ವೇದಿಕೆಯ ಮೇಲೆ ರಾಜ್ಯ ಸಮಿತಿಯ ಉಪಾಧ್ಯಕ್ಷೆ ವಿ. ಪದ್ಮಾವತಿ, ಪ್ರಧಾನ ಕಾರ್ಯದರ್ಶಿಗಳಾದ ಚಮನ್ ಪರ್ಜಾನಾ, ನಾಗರಾಜ್, ಸಂಘಟನಾ ಕಾರ್ಯದರ್ಶಿ ಸಂತೋಷ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಬಾಯಿ, ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ಉತ್ತರ ವಲಯ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಅಹಿಂದ ಮತಗಳಿಂದ ಬಹುಮತ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ, ಪರಿಶಿಷ್ಟರು ಹಾಗೂ  ಹಿಂದುಳಿದ ವರ್ಗಗಳು ಒಟ್ಟಾಗಿ ಮತದಾನ ಮಾಡದೇ ಹೋಗಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಬಹಳ ಕಷ್ಟವಾಗಿರುತ್ತಿತ್ತು ಎಂದು ಕಾಂಗ್ರೆಸ್ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷ ಡಾ. ಸಿ.ಎಸ್. ದ್ವಾರಕಾನಾಥ್ ಹೇಳಿದರು.

ಆ ಸಮುದಾಯಗಳ ಬೆಂಬಲದಿಂದ ಅಷ್ಟೊಂದು ಬಹುಮತ ಪಡೆಯಲು ಸಾಧ್ಯವಾಯಿತು ಎಂದವರು ತಿಳಿಸಿದರು.

error: Content is protected !!