ಸ್ಮಾರ್ಟ್ ಸಿಟಿಯ ಬೈಸಿಕಲ್ ಯೋಜನೆಯೇ ಪಂಕ್ಚರ್

ಸ್ಮಾರ್ಟ್ ಸಿಟಿಯ ಬೈಸಿಕಲ್ ಯೋಜನೆಯೇ ಪಂಕ್ಚರ್

ಪ್ರಚಾರದ ಕೊರತೆ, ತಾಂತ್ರಿಕ ಕಾರಣಗಳಿಂದ ಫಲ ನೀಡದ ಬೈಸಿಕಲ್ ಶೇರಿಂಗ್ ಸಿಸ್ಟಿಮ್ ಸ್ಕೀಂ

ದಾವಣಗೆರೆ, ಜು. 6- ಪಬ್ಲಿಕ್ ಬೈಸಿಕಲ್ ಶೇರಿಂಗ್ ಸಿಸ್ಟಿಮ್, ಇದು ದಾವಣಗೆರೆ ಸ್ಮಾರ್ಟ್ ಸಿಟಿಯ ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್ ಶಿಪ್  (ಪಿಪಿಪಿ) ಯೋಜನೆ.  ಸದ್ಯ ಸ್ಮಾರ್ಟ್ ಸಿಟಿಯ ಹಳ್ಳ ಹಿಡಿದಿರುವ ಯೋಜನೆಗಳ ಪೈಕಿ  ಇದೂ ಒಂದು.

ವಿದ್ಯಾರ್ಥಿಗಳು, ನೌಕರರು, ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು  9.99 ಕೋಟಿ ರೂಪಾಯಿ ವೆಚ್ಚದಲ್ಲಿ ರೂಪಿಸಲಾಗಿರುವ ಈ ಯೋಜನೆ ನಿರೀಕ್ಷಿತ ಫಲ ನೀಡಿಲ್ಲ.  ಇದಕ್ಕೆ ಮುಖ್ಯ ಕಾರಣ ಪ್ರಚಾರದ ಕೊರತೆ.

ದಾವಣಗೆರೆ ನಗರದ ವಿವಿಧ 20 ಸ್ಥಳಗಳಲ್ಲಿ ಬೈಸಿಕಲ್ ಡಾಕಿಂಗ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ.  100 ಸಾಮಾನ್ಯ ಬೈಸಿಕಲ್‌ಗಳು ಹಾಗೂ ಬ್ಯಾಟರಿ ಚಾಲಿತ 100 ಇ ಬೈಸಿಕಲ್‌ಗಳು ಈ ಸೆಂಟರ್‌ಗಳಲ್ಲಿವೆ. ರಸ್ತೆ ಬದಿಯಲ್ಲಿ ಈ ಸೈಕಲ್‌ಗಳಿದ್ದರೂ ಇವುಗಳ ಕುರಿತ ಮಾಹಿತಿ ಶೇ.90ರಷ್ಟು ಜನರಿಗೆ ತಿಳಿದಿಲ್ಲ. ಬಹಳಷ್ಟು ಜನರು ಇವು ಮಾರಾಟಕ್ಕೆ ಇಟ್ಟಿರುವ ಸೈಕಲ್‌ಗಳೆಂದೇ ಭಾವಿಸಿದ್ದಾರೆ. ಕೆಲವರು ಇದು ಸೈಕಲ್‌ ಹಾಗೂ ಸ್ಟ್ಯಾಂಡ್ ಎಂದು ತಿಳಿದು ಬೈಕುಗಳನ್ನು ಪಾರ್ಕ್‌ ಮಾಡಿದ ಉದಾಹರಣೆಗಳೂ ಇವೆ.

ಜನರಲ್ಲಿ ಅರಿವು ಮೂಡಿಸಿದಾಗ ಮಾತ್ರ ಯಾವುದೇ ಜನೋಪಯೋಗಿ ಯೋಜನೆಗಳು ಯಶಸ್ವಿಯಾಗಲು ಸಾಧ್ಯವಿದೆ. ಆದರೆ ಈ ಬೈಸಿಕಲ್ ಶೇರಿಂಗ್ ಯೋಜನೆಯ ಮಾಹಿತಿ ಯನ್ನು ಜನರಿಗೆ ತಲುಪಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಯೋಜನೆ ಆರಂಭವಾಗಿ ಹಲವು ವರ್ಷಗಳಾಗಿದ್ದರೂ ನಿರೀ ಕ್ಷಿತ ಮಟ್ಟದಲ್ಲಿ ಸೈಕಲ್‌ಗಳ ಬಳಕೆಯಾಗುತ್ತಿಲ್ಲ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಹುತೇಕ ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದ್ದು, ಮೊಬೈಲ್ ಇಲ್ಲದೇ ಇರುವುದು ಸೈಕಲ್ ಬಳಸಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಿಲ್ಲ ಎಂಬುದು ಒಂದು ಕಾರಣವಾದರೆ,  ಜನರಲ್ಲಿ ಬೈಕ್‌ ಮೇಲಿರುವ ವ್ಯಾಮೋಹ, ಸೈಕಲ್ ಬಗೆಗಿನ ನಿರಾಸಕ್ತಿಯೂ ಯೋಜನೆ ವಿಫಲತೆಗೆ ಕಾರಣ.

ಜೊತೆಗೆ ಸೈಕಲ್‌ಗಳ ಬಳಕೆಗೆ ಅನೇಕ ತಾಂತ್ರಿಕ ದೋಷಗಳಿವೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಲು ಸಾಧ್ಯವಾಗುತ್ತಿಲ್ಲ. ಸ್ಕ್ಯಾನ್ ಮಾಡಿದರೆ ಸೈಕಲ್ ಅನ್‌ಲಾಕ್‌ ಆಗುತ್ತಿಲ್ಲ ಎಂಬ ದೂರುಗಳಿವೆ. ಈಗಾಗಲೇ ಇಡಲಾಗಿರುವ ಸೈಕಲ್‌ಗಳಲ್ಲಿ ಹಲವಾರು ಸೈಕಲ್‌ಗಳ ಬಿಡಿ ಭಾಗಗಳು ಹಾಳಾಗಿ ಹೋಗಿವೆ. ಇದರಿಂದ ಮೊದಲು ಸೈಕಲ್‌ ಬಳಸಿದ್ದವರು, ಮತ್ತೆ ಬಳಕೆಗೆ ನಿರ್ಲಕ್ಷ್ಯ ವಹಿಸಿದ್ದಾರೆ.

ರೈಲ್ವೇ ನಿಲ್ದಾಣ ಹಾಗೂ ಜಿಎಂಐಟಿ ಬಳಿಯ ಡಾಕಿಂಗ್ ಸೆಂಟರ್‌ಗಳಲ್ಲಿ ಹೆಚ್ಚು ಸೈಕಲ್‌ಗಳು ಬಳಕೆಯಾಗುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ರೈಲ್ವೇ ನಿಲ್ದಾಣದ ಬಳಿ ಇರುವ ಸೈಕಲ್‌ ಗಳ ಮುಂದೆ ಫುಟ್‌ಪಾತ್ ವ್ಯಾಪಾರಿಗಳು ಬ್ಯಾಗುಗಳನ್ನು ಮಾರಾಟ ಮಾಡಲಾರಂಭಿಸಿದ್ದಾರೆ. ಇಲ್ಲಿ ಸೈಕಲ್‌ಗಳು ಹೊರ ತೆಗೆಯುವುದೂ ತುಸು ಕಷ್ಟವೇ.

ಹತ್ತಿರ ಹತ್ತಿರ ಹತ್ತು ಕೋಟಿಯ ಯೋಜನೆ. 20 ಕಡೆ 200 ಸೈಕಲ್‌ಗಳಿವೆ. ಇದು ಉಪಯೋಗವಾಗುತ್ತಿದೆಯೇ? ಎಷ್ಟು ಸೈಕಲ್‌ಗಳು ಬಳಕೆಯಾಗುತ್ತಿವೆ? ಎಂಬ ಮಾಹಿತಿಯೂ ಅಧಿಕಾರಿಗಳ ಬಳಿ ಇಲ್ಲದಿರುವುದು ದುರಂತ.


– ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ

error: Content is protected !!