ಬೀದಿ ನಾಯಿಗಳ ಹಾವಳಿಗೆ ಹೈರಾಣಾದ ಜನತೆ

ಬೀದಿ ನಾಯಿಗಳ ಹಾವಳಿಗೆ ಹೈರಾಣಾದ ಜನತೆ

ಸ್ಥಳಾಂತರ ಅಸಾಧ್ಯ, ಸಂತಾನ ಶಕ್ತಿ ಹರಣ ಚಿಕಿತ್ಸೆಗೂ ಸಿಗದ ನಿರೀಕ್ಷಿತ ಫಲ

ದಾವಣಗೆರೆ, ಜು. 5- ಸ್ಮಾರ್ಟ್ ಸಿಟಿ ದಾವಣಗೆರೆಯಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.  ಪ್ರತಿ ಬಡಾವಣೆ, ರಸ್ತೆಯಲ್ಲಿ ಓಡಾಡಿದರೂ ನಾಯಿಗಳ ಗುಂಪು ದರ್ಶನ ನೀಡುತ್ತದೆ.

ರಾತ್ರಿ ಒಂಟಿಯಾಗಿ ಸಂಚರಿಸುವಾಗ, ಸೈಕಲ್ಲು, ಬೈಕುಗಳಲ್ಲಿ ಹೋಗುವಾಗ ಹಿಂದಿನಿಂದ ಓಡಿ ಬಂದು ತಮ್ಮ ರೌದ್ರಾವತಾರ ತೋರಿಸುತ್ತಿದ್ದ ನಾಯಿಗಳು, ಈಗ ಬೆಳಿಗ್ಗೆಯೂ ಕಾಡಲಾರಂಭಿಸಿವೆ. 

ಚಿಕ್ಕ ಮಕ್ಕಳು ವಯೋ ವದ್ಧರು ರಸ್ತೆಯಲ್ಲಿ ಸಂಚರಿಸಲು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ.   ಬೆದರಿಸುವ ಬೀದಿ ನಾಯಿಗಳಿಗೆ ಬೆದರಿ ಓಡಿ ಹೋಗಬೇಕೋ? ಅಥವಾ ಅವುಗಳೊಂದಿಗೆ ಯುದ್ಧಕ್ಕೆ ನಿಲ್ಲಬೇಕೋ? ಎಂದು ಅರಿಯದೆ  ಜನತೆ ಕಂಗಾಲಾಗಿದ್ದಾರೆ.

ಬಿಡಾಡಿ ನಾಯಿಗಳನ್ನು ಹಿಡಿದು ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ನಗರದಲ್ಲಿ  ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಪಾಲಿಕೆಯ ಯತ್ನ ನಿರೀಕ್ಷಿತ ಫಲ ನೀಡುತ್ತಿಲ್ಲ.

ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಬೀದಿನಾಯಿಗಳ ಶಾಶ್ವತ ಸ್ಥಳಾಂತರಕ್ಕೆ ಅವಕಾಶ ಇಲ್ಲ. ಹೀಗಾಗಿ, ಅವುಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿ, ಮತ್ತೆ ಅದೇ ಜಾಗದಲ್ಲಿ ಬಿಡಲಾಗುತ್ತಿದೆ. ಈ ಶಸ್ತ್ರಚಿಕಿತ್ಸೆಗಾಗಿ ಒಂದು ನಾಯಿಗೆ 1,650  ರೂ.ಗಳನ್ನು ವೆಚ್ಚ ಮಾಡಲಾಗುತ್ತದೆ.

ಕಳೆದ ವರ್ಷ  ಪಾಲಿಕೆ ವ್ಯಾಪ್ತಿಯ 4,500 ನಾಯಿಗಳಿಗೆ ಸಂತಾನ ಶಕ್ತಿಹರಣ  ಚಿಕಿತ್ಸೆ ಮಾಡಲಾಗಿದೆ.  ಅದರ ಹಿಂದಿನ ವರ್ಷ 2021ರಲ್ಲಿ 2,500 ನಾಯಿಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷ ಮತ್ತೆ   2500 ಶ್ವಾನಗಳ ಚಿಕಿತ್ಸೆಗೆ ಟೆಂಡರ್ ಕರೆಯಲಾಗಿದೆ. ಟೆಂಡರ್ ಸಲ್ಲಿಕೆಗೆ ಇದೇ ಜುಲೈ 15 ಕಡೆಯ ದಿನಾಂಕವಾಗಿದೆ.

ಮಹಾನಗರ ಪಾಲಿಕೆ ಮೂಲಗಳ ಪ್ರಕಾರ ಪ್ರಸ್ತುತ ನಗರದಲ್ಲಿ ಅಂದಾಜು 10 ರಿಂದ 12 ಸಾವಿರ ಬೀದಿ ನಾಯಿಗಳಿವೆ. ಕಳೆದ ಐದಾರು ತಿಂಗಳಿನಿಂದ ಬೀದಿ ನಾಯಿ ಕಚ್ಚಿದ ಯಾವ ಘಟನೆಯೂ ನಡೆದಿಲ್ಲ ಎಂಬುದೊಂದೇ ಸಮಾಧಾನಕರ ವಿಷಯ.  ಆದರೆ ರಾತ್ರಿ ವೇಳೆ ಬೀದಿ ನಾಯಿಗಳ ಜಗಳ, ಕೂಗಾಟ ವಾರ್ಡ್ ನಿವಾಸಿಗಳ ನಿದ್ದೆ ಗೆಡಿಸಿರುವುದು,  ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿರುವುದಂತೂ ಸತ್ಯ.

ಜನರ ಮೇಲೆ ದಾಳಿ ಮಾಡುತ್ತಿದ್ದ ಬೀದಿ ನಾಯಿಗಳು ಈಗ ಮನೆ ಮುಂದೆ ನಿಲ್ಲಿಸಿದ ಬೈಕ್‌ಗಳನ್ನೂ ಟಾರ್ಗೆಟ್ ಮಾಡಲಾರಂಭಿಸಿರುವುದು ಹೊಸ ತಲೆನೋವಾಗಿ ಪರಿಣಮಿಸಿದೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಸೀಟ್​ಗಳನ್ನು ನಾಯಿಗಳು ಹರಿಯುತ್ತಿವೆ. ಈ ನಾಯಿಗಳು ಒಮ್ಮಿಂದೊಮ್ಮೆಲೆ ಬೈಕ್​ ಸೀಟ್​ಗಳ ಮೇಲೆ ದಾಳಿ ಮಾಡುತ್ತಿರವುದು ಅಚ್ಚರಿಯ ಸಂಗತಿ.

ನಾಯಿ ಹಿಡಿಯುವ ವಾಹನಗಳು ಬಂದಾಗ ಅನೇಕ ಜನರು ತಮ್ಮ ಮನೆಗಳಲ್ಲಿ ನಾಯಿಗಳನ್ನು ಆಶ್ರಯಿಸಲು ಅವಕಾಶ ಮಾಡಿಕೊಡುತ್ತಾರೆ. ಈ ರೀತಿ ಮಾಡಬಾರದು ಎಂಬುದು ಅಧಿಕಾರಿಗಳ ಆಶಯ.
ಸಂತಾನ ಶಕ್ತಿ ಹರಣ ಚಿಕಿತ್ಸೆ ಜೊತೆಗೆ ನಾಯಿಗಳ ನಿಯಂತ್ರಣಕ್ಕೆ ಪರ್ಯಾಯ ಮಾರ್ಗವನ್ನು ಹುಡುಕಿ,  ಭಯಮುಕ್ತರನ್ನಾಗಿ ಮಾಡಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.


– ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ

error: Content is protected !!