ಗುರು ಮಂದಿರಗಳಲ್ಲಿ ಪೌರ್ಣಿಮೆ ಸಂಭ್ರಮ

ಗುರು ಮಂದಿರಗಳಲ್ಲಿ ಪೌರ್ಣಿಮೆ ಸಂಭ್ರಮ

ದಾವಣಗೆರೆ, ಜು. 3- ನಗರದಲ್ಲಿ ಸೋಮವಾರ ಶ್ರದ್ಧಾ ಭಕ್ತಿಯಿಂದ ಗುರು ಪೌರ್ಣಿಮೆ  ಆಚರಿಸಲಾಯಿತು.

ಶ್ರೀ ಸಾಯಿಬಾಬಾ ಮಂದಿರಗಳು, ಶ್ರೀ ರಾಘವೇಂದ್ರ ಸ್ವಾಮಿ ಮಠಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು. ಭಕ್ತರು ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಗುರುವಿನ ದರ್ಶನ ಪಡೆದರು.

ಗುರು ಜಾತ್ರೆ: ಎಂ.ಸಿ.ಸಿ. ಎ ಬ್ಲಾಕ್‌ನಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಗುರು ಪೂರ್ಣಿಮೆ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಬೆಳಿಗ್ಗೆ 6 ಗಂಟೆಯಿಂದಲೇ ಕಾಕಡಾರತಿ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. 9 ಗಂಟೆಗೆ ದೀಪಾ ರಾಧನೆ, ಕಲಶ ಸ್ಥಾಪನೆ, ಗೋಪುರ ಧ್ವಜಾರೋಹಣ ಕಾರ್ಯಕ್ರಮಗಳು ನಡೆದವು. ವಿಶೇಷ ಅಲಂಕಾರ ಮಾಡಲಾಗಿತ್ತು.

ಬೆಳಿಗ್ಗೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ಸಾಯಿಬಾಬಾ ಅವರ ದರ್ಶನ ಮಾಡಿದರು. ಟ್ರಸ್ಟ್ ವತಿಯಿಂದ ಭಕ್ತರಿಗೆ ಬಾಬಾ ಅವರ ಬೆಳ್ಳಿಯ ಮೂರ್ತಿಗೆ ಹಾಲಿನ ಅಭಿಷೇಕ ಮಾಡಲು ಅವಕಾಶ ಕಲ್ಪಿಸಲಾಗಿತ್ತು. 

ಮಂದಿರದ ಸುತ್ತಲಿನ ವಾತಾವರಣ ಜಾತ್ರೆಯನ್ನು ನೆನಪು ಮಾಡುವಂತಿತ್ತು. ಮಂದಿರಕ್ಕೆ ಹೋಗುವ ರಸ್ತೆಗೆ ಪೆಂಡಾಲ್ ಹಾಕಲಾಗಿತ್ತು. ರಸ್ತೆ ಬದಿಯಲ್ಲಿ ಹಣ್ಣು, ಹೂ, ಆಟಿಕೆ ಸೇರಿದಂತೆ ವಿವಿಧ ಬಗೆಯ ವಸ್ತುಗಳ ಮಾರಾಟಗಾರರಿದ್ದರು.

ದರ್ಶನಕ್ಕೆ ಜನ ನಾ ಮುಂದು ತಾ ಮುಂದು ಎಂದು ಧಾವಿಸುತ್ತಿದ್ದುದು ಕಂಡು ಬಂತು. ತುರ್ತು ಸೇವೆಗೆ 50  ರೂ.ಗಳ ಟಿಕೆಟ್ ನೀಡಲಾಗಿತ್ತು. ಅಲ್ಲಿಯೂ ಜನಸಂದಣಿ ಹೆಚ್ಚಾಗಿತ್ತು. ಜನರ ನಿಯಂತ್ರಣಕ್ಕೆ ಟ್ರಸ್ಟ್‌ನ ಸೇವಾ ಕರ್ತರು ಹರಸಾಹಸ ಪಡಬೇಕಾಯಿತು.

ಗುರು ಮಂದಿರಗಳಲ್ಲಿ ಪೌರ್ಣಿಮೆ ಸಂಭ್ರಮ - Janathavani

ಮಂದಿರದ ಮುಂಭಾಗ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ನೆಲ ಮಹಡಿ, ಮೊದಲ ಹಾಗೂ ಎರಡನೇ ಮಹಡಿಯಲ್ಲಿ ಅನ್ನ ಸಂತರ್ಪಣೆ ಕಾರ್ಯ ಅಚ್ಚುಕಟ್ಟಾಗಿ ನಡೆಯಿತು. 

ಗುರುಪೂರ್ಣಿಮೆ ಅಂಗವಾಗಿ ಸಾಯಿ ಸತ್ಯನಾರಾಯಣ ಪೂಜೆ ನಡೆಯಿತು. ರಾತ್ರಿ 8.30ಕ್ಕೆ ಪಾಲಕಿ ಉತ್ಸವ, ಧುನಿ ಪೂಜೆ, ಶೇಜಾರತಿ ನಡೆಯಿತು.

ದತ್ತಾತ್ರೇಯ ಮಂದಿರದಲ್ಲಿ ಸಂಭ್ರಮ: ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಿವಾನಂದ ತೀರ್ಥ ಗುರು ಅಧ್ಯಾತ್ಮ ಮಂದಿರ, ಶ್ರೀ ಗುರು ದತ್ತಾತ್ರೇಯ ದೇವಾಲಯದಲ್ಲಿ ಗುರುಪೂರ್ಣಿಮಾ ಅಂಗವಾಗಿ ವಿಶೇಷ ಪೂಜೆಗಳು ನಡೆದವು.

ಶ್ರೀ ಗುರು ದತ್ತಾತ್ರೇಯ ಸ್ವಾಮಿಯ 37ನೇ ವಾರ್ಷಿಕೋತ್ಸವ ಪ್ರತಿಷ್ಠಾಪನಾ ಸುಸ್ಮರಣ ಮತ್ತು 108 ಶ್ರೀ ಸತ್ಯದತ್ತ ವ್ರತ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.

ಪ್ರಾತಃಕಾಲ ಕಾಕಡಾರತಿ, ಗಣಪತಿ ಪೂಜೆ, ಪಂಚಾಮೃತ ಅಭಿಷೇಕ ನಡೆಯಿತು. ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆ 10ಕ್ಕೆ 108 ಕಳಶಗಳ ಶ್ರೀ ಸತ್ಯ ದತ್ತವ್ರತ ಪೂಜೆ ನಡೆಯಿತು.  

ಸಂಜೆ ಶ್ರೀ ಸಾಯಿ ಭಜನಾ ಮಂಡಳಿ ಹಾಗೂ ಶ್ರೀ ವೈಷ್ಣವಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆಯಿಂದ ರಾತ್ರಿ ವರೆಗೂ ಭಕ್ತರು ಗುರುವಿನ ದರ್ಶನ ಪಡೆದರು. ಸುಮಾರು 2 ಸಾವಿರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಪಿ.ಜೆ. ಬಡಾವಣೆ ಹಾಗೂ ಕಸ್ತೂರಬಾ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲೂ ಸಹ ಗುರುರಾಯರಿಗೆ ವಿಶೇಷ ಪೂಜೆಗಳು ನಡೆದು, ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀಮಠಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.

error: Content is protected !!