ಫ.ಗು. ಹಳಕಟ್ಟಿ ತ್ಯಾಗದಿಂದ ನಾಡಿಗೆ ವಚನ ಭಂಡಾರ

ಫ.ಗು. ಹಳಕಟ್ಟಿ ತ್ಯಾಗದಿಂದ ನಾಡಿಗೆ ವಚನ ಭಂಡಾರ

ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಹಾಗೂ ಶ್ರೀ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಜಿಲ್ಲಾಧಿಕಾರಿ ಕಾಪಶಿ

ದಾವಣಗೆರೆ, ಜು. 3 – ವಿಶ್ವ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಕನ್ನಡ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ ಜನತೆಗೆ ಪರಿಚಯಿಸಿದ ಡಾ.ಫ.ಗು. ಹಳಕಟ್ಟಿಯವರ ತ್ಯಾಗ ಅವಿಸ್ಮರಣೀಯ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಡಾ.ಫ.ಗು ಹಳಕಟ್ಟಿಯವರ ಜನ್ಮ ದಿನದ ಅಂಗವಾಗಿ ಏರ್ಪಡಿಸಲಾದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಹಾಗೂ ಶ್ರೀ ಹಡಪದ ಅಪ್ಪಣ್ಣ ಜಯಂತಿ  ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಇವರ ಸಹಯೋಗ ದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹಳಕಟ್ಟಿಯವರು ತಮ್ಮ ಅಮೂಲ್ಯವಾದ ವಚನ ಬಂಡಾರವನ್ನು ಕನ್ನಡ ನಾಡಿಗೆ ನೀಡಿ ಉಪಕರಿಸಿದ್ದಾರೆ. 12ನೇ ಶತಮಾನದ ವಚನ ಗ್ರಂಥಗಳನ್ನು ಸಂಗ್ರಹಿಸಿ ಪ್ರಕಟಿಸದಿದ್ದರೆ, ವಚನ ಸಾಹಿತ್ಯದ ಸಾರವನ್ನು ತಿಳಿಯಲು ಸಾಧ್ಯ ವಾಗುತ್ತಿರಲಿಲ್ಲ ಎಂದು ಅವರು ಹೇಳಿದರು.

ಹಳಕಟ್ಟಿ ಅವರು ವೈಯಕ್ತಿಕ ಜೀವನದ ಆಸೆ, ಆಕಾಂಕ್ಷೆಗಳನ್ನು ತೊರೆದು ಸಾಮಾಜಿಕ ಹಿತಕ್ಕಾಗಿ ವಚನ ಸಾಹಿತ್ಯವನ್ನು ಉಳಿಸಿ ಬೆಳೆಸಿದರು. ಕನ್ನಡ ಸಾಹಿತ್ಯ ಸಮೃದ್ಧಿಯಲ್ಲಿ ವಚನಗಳು ತಮ್ಮದೇ ಆದ ಪ್ರಾಮುಖ್ಯತೆ ಪಡೆದಿವೆ ಎಂದರು.

ಹಡಪದ ಅಪ್ಪಣ್ಣನವರು ಜಾತಿ, ಧರ್ಮ, ವರ್ಣ ಹಾಗೂ ವರ್ಗರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಇವರ ವಚನಗಳು ಬಸವಣ್ಣನವರ ಮೇಲಿನ ಗೌರವ, ಭಕ್ತಿಯನ್ನು ವ್ಯಕ್ತಪಡಿಸುತ್ತದೆ. ಬಸವಣ್ಣನವರು ಅಪ್ಪಣ್ಣನನ್ನು ಆಪ್ತ ಕಾರ್ಯದರ್ಶಿಯಾಗಿ ಮಾಡಿಕೊಂಡಿದ್ದರು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಕನ್ನಡ ಸಾಹಿತ್ಯ ದಲ್ಲಿ ವಚನಗಳನ್ನು ಸಂಗ್ರಹಿಸಿದ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ. ಹಡಪದ ಅಪ್ಪಣ್ಣನವರು ತಮ್ಮ ವಚನ ಸಾಹಿತ್ಯದಲ್ಲಿ ಜೀವನದ ನೈತಿಕ ನೆಲೆಗಟ್ಟಿನ ವಿಚಾರಗಳನ್ನು ತಿಳಿಸಿದ್ದಾರೆ ಎಂದರು.

ಹೊನ್ನಾಳಿಯ ಅಭಿನಯತ್ರಿ ಕಲಾ ತಂಡದ ವತಿಯಿಂದ ನೃತ್ಯ ಪ್ರದರ್ಶಿಸಲಾಯಿತು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ, ಜಿಲ್ಲಾ ಪಂಚಾಯ್ತಿ ಉಪ ನಿರ್ದೇಶಕಿ ಶಾರದ, ದೂಡಾ ಆಯುಕ್ತ ಬಸವನಗೌಡ, ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಶಶಿಧರ್ ಬಸಾಪುರ, ಶಿವಾನಂದ ಗುರೂಜಿ, ಎನ್.ಜಿ ಶಿವಕುಮಾರ್, ದಿಳ್ಳೆಪ್ಪ, ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!