ವಿದ್ಯುತ್ ದರ ಹೆಚ್ಚಳ ಹಿಂಪಡೆಯಲು ಅಕ್ಕಿ ಗಿರಣಿ ಮಾಲೀಕರ ಒತ್ತಾಯ

ವಿದ್ಯುತ್ ದರ ಹೆಚ್ಚಳ ಹಿಂಪಡೆಯಲು  ಅಕ್ಕಿ ಗಿರಣಿ ಮಾಲೀಕರ ಒತ್ತಾಯ

ದಾವಣಗೆರೆ, ಜು.1- ವಿದ್ಯುತ್ ದರ ಏರಿಕೆ, ಎಪಿಎಂಸಿ ಕಾಯ್ದೆ ಹಿಂಪಡೆಯುವ  ಮತ್ತಿತರೆ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಲ್ಲದೇ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ತಮ್ಮ  ಸಾಧಕ-ಬಾಧಕಗಳನ್ನು ವಿವರಿಸಿದರು.

ಜಿಲ್ಲಾ ಅಕ್ಕಿಗಿರಣಿ ಮಾಲೀಕರ ಸಂಘದ ಕಾರ್ಯದರ್ಶಿ ಕೋಗುಂಡಿ ಬಕ್ಕೇಶಪ್ಪ, ನಂದಿಗಾವಿ ರಾಜಣ್ಣ, ರಾಜಣ್ಣ ಕಡೇಕೊಪ್ಪ, ಚಂದ್ರಪ್ಪ, ರಾಜಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿದ್ಯುತ್ ದರ  ಹೆಚ್ಚಳದಿಂದ ಈಗಾಗಲೇ ಅಕ್ಕಿ ಗಿರಣಿದಾರರಿಗೆ ಆರ್ಥಿಕವಾಗಿ ಹೊರೆಯಾಗಿರುತ್ತದೆ. ಈ ಹೆಚ್ಚಳದಿಂದ ಗಿರಣಿಗಳನ್ನು ನಡೆಸುವುದು ಕಷ್ಟಕರವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತವೆ.  ಆದ್ದರಿಂದ ವಿದ್ಯುತ್ ದರ ಹೆಚ್ಚಳವನ್ನು ಹಿಂಪಡೆಯಬೇಕು

ಎಪಿಎಂಸಿ ಕಾಯ್ದೆಯನ್ನು ಪುನಃ ಹಿಂದಿನ ರೀತಿಯಂತೆ ತಿದ್ದುಪಡಿ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರದಿಂದ ಅಕ್ಕಿ ಗಿರಣಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲಾಗದು.  ಅಕ್ಕಿ ಗಿರಣಿ ಉದ್ಯಮಗಳು ಮತ್ತೆ ತೊಂದರೆಗೆ ಸಿಲುಕುತ್ತವೆ. 

ಅಕ್ಕಿ ಗಿರಣಿದಾರರು ಕೃಷಿ ಮಾರುಕಟ್ಟೆಯ ಯಾವುದೇ ಸೌಕರ್ಯದ ಬಳಕೆ, ಅವಶ್ಯಕತೆ ಇಲ್ಲವಾದ್ದರಿಂದ ಅಕ್ಕಿ ಗಿರಣಿದಾರರನ್ನು ಸದರಿ ಕಾಯ್ದೆಯ ವ್ಯಾಪ್ತಿಯಿಂದ ಹೊರತುಪಡಿಸಬೇಕು.  ಈ ಸಂಬಂಧ ಚರ್ಚಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ರಾಜ್ಯದಲ್ಲಿ ಬೆಳೆಯುತ್ತಿರುವ ಭತ್ತದ ಜೊತೆ ಜೊತೆಗೆ ಹೊರ ರಾಜ್ಯಗಳಿಂದಲೂ ಭತ್ತವನ್ನು ಸರ್ಕಾರವೇ  ಎಂಎಸ್‌ಪಿ ಯೋಜನೆ ಅಡಿಯಲ್ಲಿ ಅಧಿಕ ಪ್ರಮಾಣದ ಭತ್ತವನ್ನು ಖರೀದಿಸಿ ತಂದು ನಮ್ಮ ಗಿರಣಿಗಳಲ್ಲಿಯೇ ಸಂಸ್ಕರಿಸುವಂತಾಗಿ, ಅಧಿಕ ಪ್ರಮಾಣದ ಅಕ್ಕಿ ನಮ್ಮ ರಾಜ್ಯದ ಜನತೆಗೆ ಲಭ್ಯವಾಗುವಂತೆ ಸರ್ಕಾರವು ಸಿಎಂಆರ್‌ ಮಿಲ್ ಪಾಯಿಂಟ್  ಪ್ರಕ್ರಿಯೆಯನ್ನು  ತೀವ್ರಗತಿಯಲ್ಲಿ ಮುಂದುವರೆಸಿ ಕಾರ್ಯಗತಗೊಳಿಸಿದಲ್ಲಿ ‘ಅನ್ನಭಾಗ್ಯ’ ಯೋಜನೆಗೆ ಪೂರಕವಾಗುತ್ತದೆ ಎನ್ನುವ ಅಂಶವನ್ನು ಸರ್ಕಾರಕ್ಕೆ ತಿಳಿಸಬಯಸುತ್ತೇವೆ.

ಸರ್ಕಾರವು ಈ ವಿಷಯಗಳಲ್ಲಿ ಜಾರಿಗೊಳಿಸುವ ಯಾವುದೇ ಕ್ರಮಗಳು ರಾಜ್ಯದ ಅಕ್ಕಿಗಿರಣಿಗಳ ಹಿತಾಸಕ್ತಿಗೆ ಪ್ರತಿಕೂಲವಾಗಿದ್ದಲ್ಲಿ, ಅಕ್ಕಿ ಗಿರಣಿಗಳು ಕಾರ್ಯನಿರ್ವಹಿಸದೆ ಸ್ಥಗಿತಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಅಂತಹ ಸಂದಿಗ್ದ ಪರಿಸ್ಥಿತಿಗೆ ಅವಕಾಶ ನೀಡಬಾರದೆಂದು ಸರ್ಕಾರಕ್ಕೆ ಸಂಘವು ಮನವಿ ಮಾಡಿದೆ.

error: Content is protected !!