ಜಗಳೂರು, ಜೂ.30- ಸಾಸ್ವೇಹಳ್ಳಿ ಏತ ನೀರಾವರಿ ಕಾಮಗಾರಿ ಪ್ರಗತಿಯ ಮಾದರಿಯಲ್ಲಿ ಜಗಳೂರು 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಪ್ರಗತಿಯ ವರದಿ ಪಟ್ಟಿ ತಯಾರಿಸಿ ಶೀಘ್ರ ಪ್ರತ್ಯೇಕ ಸಭೆ ನಡೆಸಲು ಸಿರಿಗೆರೆ ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಲಹೆ ನೀಡಿದರು.
ಸಿರಿಗೆರೆ ಬೃಹನ್ಮಠದ ನ್ಯಾಯಪೀಠದಲ್ಲಿ ಇಂದು ಕರೆದಿದ್ದ 57 ಕೆರೆ ತುಂಬಿಸುವ ಯೋಜನೆಗಳ ಕಾಮಗಾರಿ ಪ್ರಗತಿ ಪರಿಶೀ ಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ 6 ವರ್ಷಗಳ ಹಿಂದೆ ಭರಮಸಾಗರ ಹಾಗೂ ಜಗಳೂರು ಕೆರೆ ತುಂಬಿಸುವ ಅವಳಿ ಯೋಜನೆಗಳು ಒಟ್ಟಿಗೆ ಸಾಕಾರಗೊಂಡಿದ್ದವು.ಆದರೆ ಜಗಳೂರು ಕೆರೆ ತುಂಬಿಸುವ ಯೋಜನೆ ಪೈಪ್ ಲೈನ್ ಕಾಮಗಾರಿ ವಿಳಂಬವಾಗಿದೆ ಎಂದು ಶ್ರೀಗಳು ಅಸಮಧಾನ ವ್ಯಕ್ತಪಡಿಸಿದರು.
ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಕೊನೆಯಲ್ಲಿ ಆರಂಭವಾಗಿದ್ದರೂ ತ್ವರಿತಗತಿ ಯಲ್ಲಿ ಕಾಮಗಾರಿ ನಡೆದು ಮುಕ್ತಾಯದ ಹಂತದಲ್ಲಿದೆ. ಕೂಡಲೇ ಅಧಿಕಾರಿಗಳು ಗುತ್ತಿಗೆದಾರರು ಪೂರ್ಣ ಹಾಗೂ ಅಪೂರ್ಣಗೊಂಡಿರುವ ಕಾಮಗಾರಿಗಳ ವಿವರಗಳ ದಾಖಲಾತಿ ವರದಿ ತಯಾರಿಸಿ ಸಂಸದರು, ಶಾಸಕರಿಗೆ ಹಾಗೂ ನ್ಯಾಯ ಪೀಠಕ್ಕೆ ತಲುಪಿಸಬೇಕು ಎಂದು ಸೂಚಿಸಿದರು.
ತುಪ್ಪದಹಳ್ಳಿ ಕೆರೆಯ ನೀರಿನ ಪೌಂಟೇನ್ (ಚಿಲುಮೆ) ಭರಮಸಾಗರ ಕೆರೆಯ ಮಾದರಿಯಲ್ಲಿ ನಿರ್ಮಾಣ ಮಾಡಬೇಕು. ತುಪ್ಪದಹಳ್ಳಿ ಕೆರೆಯಿಂದ ಉಳಿದ ಕೆರೆಗಳಿಗೆ ಶೀಘ್ರ ಪೈಪ್ ಲೈನ್ ಕಾಮಗಾರಿ ಪೂರ್ಣಗೊಳಿಸಿ ಮಾರ್ಗ ಮಧ್ಯೆ ಅಡೆತಡೆಗಳು ಬಂದರೆ ಸ್ಥಳಿಯ ಶಾಸಕರ ಗಮನಕ್ಕೆ ತಂದು ತಾಂತ್ರಿಕ ದೋಷ ಸರಿಪಡಿಸಿಕೊಳ್ಳಬೇಕು. ಕಾಮಗಾರಿ ವಿಳಂಬ ಮಾಡಿದರೆ ಪೆನಾಲ್ಟಿ ಹಾಗೂ ನೊಟೀಸ್ ಜಾರಿಮಾಡಲು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕಗೆ ಸೂಚಿಸಿದರು.
ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ತುಪ್ಪದಹಳ್ಳಿ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಿದಾಗ ಕ್ಷೇತ್ರದ ರೈತರಲ್ಲಿ ಮಂದಹಾಸ ಮೂಡಿತ್ತು. ಆದರೆ ನಂತರ ಗುತ್ತಿಗೆದಾರ ಹಾಗೂ ಇಂಜಿನಿಯರ್ ಗಳ ನಿರ್ಲಕ್ಷ್ಯದಿಂದ ಪೈಪ್ ಲೈನ್ ಕಾಮಗಾರಿ ವಿಳಂಬವಾಗಿದೆ. ರೈತರು ನೀರು ಹರಿಯುವ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ. ಜಗಳೂರು ಕೆರೆಗೆ ನೀರು ಹರಿಸಿದರೆ 30 ಕೆರೆಗಳು ಭರ್ತಿಯಾಗಲಿವೆ. ಸಬೂಬು ಹೇಳದೇ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಧನಂಜಯ್ ಮಾಹಿತಿ ನೀಡಿ, ತುಪ್ಪದಹಳ್ಳಿ ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಶೀಘ್ರದಲ್ಲಿ 11 ಕೆರೆಗಳಿಗೆ ನೀರು ಹರಿಸಲು ಸಿದ್ದತೆ ನಡೆಸಲಾಗಿದೆ ಎಂದರು.
ದೀಟೂರು ಬಳಿ ಜಾಕ್‌ವೆಲ್, ಪಂಪ್ ಹೌಸ್, ಕಂಟ್ರೋಲ್ ರೂಂ, ಸ್ಟ್ರೀಮಿಂಗ್, ಚಟ್ನಹಳ್ಳಿ ಡಿಲೆವರಿ ಛೇಂಬರ್, ಕಾಮಗಾರಿ ಮುಕ್ತಾಯವಾಗಿದೆ. 18 ಕಿ.ಮೀ. ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. 7 ಕಿ.ಮೀ. ಪೈಪ್ ಲೈನ್ ಕಾಮಗಾರಿಗೆ 1.5 ಸುತ್ತಳತೆಯ ಪೈಪ್‌ಗಳು ಪೂರೈಕೆಯಾಗಿಲ್ಲ. ವಾರದೊಳಗೆ ಸರಿಪಡಿಸಲಾಗುವುದು ಎಂದರು.
ಕರ್ನಾಟಕ ನೀರಾವರಿ ನಿಗಮ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ್ ಬಸಪ್ಪ ಗುಂಗೆ ಮಾತನಾಡಿ, ಜಗಳೂರು ತಾಲ್ಲೂಕಿನ 57 ಕೆರೆ ತುಂಬಿಸುವ ಯೋಜನೆಯ ಪೈಪ್ ಲೈನ್ ಕಾಮಗಾರಿ ಪ್ರಗತಿ ವರದಿ ಪಡೆಯಲಾಗುವುದು. ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ವಿಳಂಬ ನೀತಿ ಅನುಸರಿಸಿದರೆ ನಿಯಮಾನುಸಾರ ಗುತ್ತಿಗೆದಾರರಿಗೆ ಪೆನಾಲ್ಟಿ ಹಾಗೂ ನೋಟಿಸ್ ಜಾರಿ ಮಾಡಲಾಗುವುದು ಎಂದರು.
ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಮಾಯಕೊಂಡ ಶಾಸಕ ಬಸವಂತಪ್ಪ, ಶಿವಮೊಗ್ಗ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಪ್ರಶಾಂತ್, ಅಪ್ಪರ್ ಭದ್ರಾ ಇಲಾಖೆಯ ಮುಖ್ಯ ಇಂಜಿನಿಯರ್ ಶಿವಾನಂದ ಬಣಕಾರ್, ಗುತ್ತಿಗೆದಾರ ದಯಾನಂದ ಸೇರಿದಂತೆ, ರೈತ ಮುಖಂಡರುಗಳು ಭಾಗವಹಿಸಿದ್ದರು.
ಶ್ರೀಗಳಿಗೆ ಶಾಸಕರಿಂದ ಸನ್ಮಾನ: ಅವರು ಸಭೆಗೂ ಮುನ್ನ ಶಾಸಕ ಬಿ.ದೇವೇಂದ್ರಪ್ಪ ಅವರು ತರಳಬಾಳು ಶ್ರೀಗಳಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕಲ್ಲೇಶ್ ರಾಜ್ ಪಟೇಲ್, ಷಂಷೀರ್ ಅಹಮ್ಮದ್, ಶಶಿಧರ ಪಟೇಲ್, ಪಲ್ಲಾಗಟ್ಟೆ ಶೇಖರಪ್ಪ, ಪ್ರಕಾಶ್ ರೆಡ್ಡಿ, ಸುಧೀರ್ ರೆಡ್ಡಿ, ಗೌಸ್, ತಿಮ್ಮಣ್ಣ ಸೇರಿದಂತೆ ರೈತ ಮುಖಂಡರುಗಳು ಇದ್ದರು.