ಮನುಕುಲಕ್ಕೆ ಭಾರತೀಯರು ನೀಡಿರುವ ಅದ್ಭುತ ಕೊಡುಗೆಗಳಲ್ಲಿ ಯೋಗವೂ ಒಂದು

ಮನುಕುಲಕ್ಕೆ ಭಾರತೀಯರು ನೀಡಿರುವ ಅದ್ಭುತ ಕೊಡುಗೆಗಳಲ್ಲಿ ಯೋಗವೂ ಒಂದು

ಪುತ್ತೂರು ಶಲ್ಯ ವೈದ್ಯ ರಾಮರಾಜು ಅಭಿಮತ

ದಾವಣಗೆರೆ, ಜೂ. 25- ಮನುಕುಲಕ್ಕೆ ಭಾರತೀಯರು ನೀಡಿರುವ ಅದ್ಭುತ ಕೊಡುಗೆಗಳಲ್ಲಿ ಯೋಗವು ಒಂದು, ಯೋಗವು ಯಾವುದೇ ಒಂದು ಧರ್ಮದ ಆಚರಣೆಯ ವಸ್ತುವಲ್ಲ. ಇದೊಂದು ಜೀವನ ಕ್ರಮ. ಪ್ರತಿಯೊಬ್ಬ ಮನುಷ್ಯನೂ  ಅಳವಡಿಸಿಕೊಳ್ಳಬೇಕಾದ ಪದ್ಧತಿಯೇ ಈ ಯೋಗ, ಹಾಗಾಗಿಯೇ ಇಂದು ಯೋಗವು ವಿಶ್ವ ಮಾನ್ಯತೆಯನ್ನು ಪಡೆದಿರುವುದು. ಋಷಿಮುನಿಗಳು ಮನುಷ್ಯನನ್ನೇ ಕೇಂದ್ರವಾಗಿಟ್ಟುಕೊಂಡು ಮನುಷ್ಯರ ಜೀವನದ ಸಮಸ್ತ ದುಃಖ, ದುಮ್ಮಾನಗಳನ್ನು ನಿವಾರಣೆಗೈಯ್ಯುವ ವಿದ್ಯೆಯಾದ ಯೋಗವನ್ನು ಮನುಕುಲಕ್ಕೆ ನೀಡಿದ್ದಾರೆ ಎಂದು ಪುತ್ತೂರಿನ ಶಲ್ಯ ವೈದ್ಯ ಬಿ. ರಾಮರಾಜು ತಿಳಿಸಿದರು.

ನಗರದ ಮೋಕ್ಷ ಹೆಲ್ತ್, ಹ್ಯೂಮನ್ ರಿಸೋರ್ಸ್ ಮತ್ತು ರೂರಲ್ ಡೆವಲಪ್‌ಮೆಂಟ್ ಆರ್ಗನೈಸೇಷನ್ ಮತ್ತು ಎಸ್.ಟಿ.ಆರ್. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವತಿಯಿಂದ ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ  ಉಚಿತ ಯೋಗ ಕಾರ್ಯಾಗಾರವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಸದೃಢ ಶರೀರ ಹಾಗೂ ಸ್ವಸ್ಥ ಮನಸ್ಸನ್ನು ರೂಪಿಸಲು, ಜೀವನ ಕ್ರಮದಲ್ಲಿಯೇ ಮಹತ್ತರ ಪರಿವರ್ತನೆ ತರಲು ಯೋಗ ಮಾರ್ಗ ಸಹಮತವಾಗುತ್ತಿದೆ. ಈ ಜೀವನದಲ್ಲಿ ಕಾಣಬರುತ್ತಿರುವ ಒತ್ತಡ, ಉದ್ವೇಗ, ಅತೃಪ್ತಿ, ಅರಿಷಡ್ವರ್ಗಗಳ ಅಧಿಪತ್ಯ ಇವುಗಳ ಮೇಲೆ ನಿಯಂತ್ರಣ ಸಾಧಿಸಿ, ಬದುಕನ್ನು ಊರ್ಧ್ವಮುಖಿಯಾಗಿಸಲು ಯೋಗವೇ ಒಂದು ಮಾರ್ಗ ಎಂದು ರಾಮರಾಜು ತಿಳಿಸಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶ್ರೀಮತಿ ತುಳಸಿ ಮಾತನಾಡಿ, ಯೋಗವು ನಮ್ಮ ಪುರಾತನ ತತ್ವಶಾಸ್ತ್ರ. ಇದು ಒಂದು ಜೀವನ ಶೈಲಿ ಹಾಗೂ ಕಲೆ. ಒಬ್ಬ ಮನುಷ್ಯನ ಸರ್ವೋನ್ನತ ಏಳಿಗೆಗೆ ಇದು ತುಂಬಾ ಸಹಕಾರಿ. ಯೋಗವು ಇಂದು ವಿಶ್ವಮಾನ್ಯವಾಗಿ ಜಾತಿ, ಮತ, ಧರ್ಮಗಳನ್ನು ಮೀರಿ ಬೆಳೆಯುತ್ತಿದೆ. ಎಲ್ಲಾ ಪಂಥದ ಜನರೂ ಒಂದಲ್ಲಾ ಒಂದು ಕಾರಣಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದಾರೆ. ಯೋಗವು ವಿಶ್ವದಾದ್ಯಂತ ಜನಪ್ರಿಯವಾಗುತ್ತಿರುವುದೇನೋ ನಿಜ. ಆದರೆ ಇದೇ ಸಂದರ್ಭದಲ್ಲಿ ಇದರ ಮೂಲ ಉದ್ದೇಶವೂ ಮರೆಯಾಗುವಂತಿದೆ. ಯೋಗದಿಂದ ಆಕರ್ಷಕ ಮೈಕಟ್ಟನ್ನು ಪಡೆಯುವ ಹಂಬಲ ಕೆಲವರಿಗಾದರೆ, ಕೆಲವರಿಗೆ ಮುಪ್ಪಿನಲ್ಲೂ ಯುವಕರಂತೆ ಕಾಣಿಸಿಕೊಳ್ಳುವ ಬಯಕೆ. ಇದೆಲ್ಲವೂ ಯೋಗದಿಂದ ಸಾಧ್ಯ ಎಂದು ತಿಳಿಸಿದರು.

ಎಸ್.ಟಿ.ಆರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಂಧ್ಯ ಗಂಗಾಧರ ವರ್ಮ ಮಾತನಾಡಿ, ಯೋಗವೆಂಬುದು ಕೇವಲ ವ್ಯಾಯಾಮವಲ್ಲ, ಇದು ಒಂದು ಜೀವನ ಶೈಲಿ, ಪತಂಜಲಿ ಮುನಿಯು ಯೋಗವನ್ನು ಅಷ್ಟಾಂಗ ಯೋಗದ ಮೂಲಕ ವಿಭಾಗಿಸಿದ್ದಾರೆ. ಅವುಗಳೆಂದರೆ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿಗಳು. ಪತಂಜಲಿಯ ಅಷ್ಟಾಂಗ ಯೋಗದ ಈ ಎಂಟು ಮೆಟ್ಟಿಲುಗಳನ್ನು ಹತ್ತುವ ಸಲುವಾಗಿ ಸಾಧಕನು ಅಭ್ಯಾಸ- ವೈರಾಗ್ಯಗಳನ್ನು ರೂಢಿಸಿಕೊಂಡು ಚಿತ್ತವನ್ನು ಏಕಾಗ್ರಗೊಳಿಸಲು, ಎಲ್ಲ ದಿಕ್ಕುಗಳಲ್ಲಿಯೂ ಹರಿದು ಹಂಚಿ ಹೋಗುವ ಮನಃ  ಶಕ್ತಿಯನ್ನು ಸಂಚಯಿಸಲು ಯತ್ನಿಸಬೇಕು ಎಂದು ತಿಳಿಸಿದರು.

ಶ್ರೀಮತಿ ಸುಧಾ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕು. ಪವಿತ್ರಾ ಪ್ರಾರ್ಥಿಸಿದರು. ಆಸ್ಪತ್ರೆಯ ಮ್ಯಾನೇಜರ್ ಪ್ರಹ್ಲಾದ್ ಕೊಪ್ಪದ್ ಸ್ವಾಗತಿಸಿದರು. ಕೃತಿಕ್ ರೋಷನ್ ಹಾಗೂ ಶ್ರೀನಿವಾಸ್ ನಿರೂಪಿಸಿದರು. ಶಿಲ್ಪ ವಂದಿಸಿದರು.

error: Content is protected !!