ರಂಗಭೂಮಿ ಕ್ಷೇತ್ರವನ್ನು ಉಳಿಸಿ, ಬೆಳೆಸಿ

ರಂಗಭೂಮಿ ಕ್ಷೇತ್ರವನ್ನು ಉಳಿಸಿ, ಬೆಳೆಸಿ

‘ಬಳೆಗಾರ ಹನುಮವ್ವ’ ನಾಟಕ ಪ್ರದರ್ಶನ ಉದ್ಘಾಟಿಸಿ ಓಂಕಾರ ಶಿವಾಚಾರ್ಯ ಶ್ರೀ

ದಾವಣಗೆರೆ, ಜು. 18- ರಂಗಭೂಮಿ ಕಲೆ ಅಳಿವಿನಂಚಿನಲ್ಲಿದ್ದು,  ಈ ಕಲಾಕ್ಷೇತ್ರವನ್ನು ಉಳಿಸಿ, ಬೆಳೆಸಬೇಕಿರುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಪಿ.ಬಿ.ರಸ್ತೆಯಲ್ಲಿನ ಟಿ.ಎಂ. ವಿನಾಯಕ ಪಿ.ಎಂ.ಪಿ.ಎಸ್ ಕಾಂಪೌಂಡ್‌ನಲ್ಲಿ ಭಾನುವಾರ ಶ್ರೀ ಸಂತ ಷರೀಫ ಶಿವಯೋಗಿ ನಾಟ್ಯ ಸಂಘ ಇಂದು ಹಮ್ಮಿಕೊಂಡಿದ್ದ ‘ಬಳೆಗಾರ ಹನುಮವ್ವ’ ಸಾಮಾಜಿಕ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

ಮೊಬೈಲ್‌ಗಳು, ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಹಾವಳಿಯಿಂದಾಗಿ ವೃತ್ತಿ ರಂಗಭೂಮಿ ನಶಿಸುತ್ತಿರುವುದು ನಿಜಕ್ಕೂ ಬೇಸರ ತರಿಸಿದೆ ಎಂದ ಶ್ರೀಗಳು, ರಂಗಭೂಮಿ ಮನರಂಜನೆ ಜೊತೆಗೆ ಉತ್ತಮ ಸಂದೇಶಗಳನ್ನೂ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರವನ್ನು ಉಳಿಸಿ, ಬೆಳೆಸಬೇಕಿದೆ ಎಂದು ಹೇಳಿದರು.

ಸಾಮಾಜಿಕ ನ್ಯಾಯಸಮ್ಮತವಾದ ಸಾಹಿತ್ಯ ಮತ್ತು ಸಂಸ್ಕೃತಿಯನ್ನೊಳಗೊಂಡ ಬಳೆಗಾರ ಹನುಮವ್ವ ನಾಟಕ ಅದ್ಭುತವಾಗಿ ಮೂಡಿ ಬಂದಿದೆ. ದಾವಣಗೆರೆಯಲ್ಲಿ ಸಾಕಷ್ಟು ನಾಟಕಗಳು ಮುನ್ನೆಲೆಗೆ ಬಂದಿವೆ. ಈ ನಾಟಕ ವೀಕ್ಷಿಸಲು ಹೆಚ್ಚಿನ ಜನರು ಸೇರಿರುವುದು ಸಂತಸ ತಂದಿದೆ ಎಂದು ಹೇಳಿದರು.

ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸವರಾಜ ಐರಣಿ ಮಾತನಾಡಿ, ದಾವಣಗೆರೆ ಕಲೆ, ಕಲಾವಿದರ ತವರೂರಾಗಿದೆ. ಚಿಂದೋಡಿ ಹಾಗೂ ಕಂಚಿಕೆರೆ ಕುಟುಂಬದವರು ರಂಗಭೂಮಿಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಈ ಎರಡೂ ಮನೆತನಗಳ ಮೂರನೇ ಪೀಳಿಗೆ ಈಗಲೂ ನಾಟಕಗಳಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್, ಉದ್ಯಮಿ ಟಿ.ಎಂ.ವಿನಾಯಕ ಸ್ವಾಮಿ, ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ಪಾಲಿಕೆ ಸದಸ್ಯೆ ಆಶಾ ಉಮೇಶ್, ಚನ್ನಬಸವಯ್ಯ, ಕೆ.ಎಂ.ಪರಮೇಶ್ವರಯ್ಯ, ನಿರ್ದೇಶಕ ಮಂಜುನಾಥ ಕುಂದೂರ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!