ಮನೆಗೆರಡು ಮರ – ದಾವಣಗೆರೆಗೆ ವರ

ಮನೆಗೆರಡು ಮರ – ದಾವಣಗೆರೆಗೆ ವರ

ದಾವಣಗೆರೆ, ಜೂ.16- ಪ್ರತಿಯೊಂದು ಮನೆಗೆ ಎರಡೆರಡು ಮರಗಳಿದ್ದರೆ ಗಾಳಿ, ನೆರಳು, ಆರೋಗ್ಯ, ಆನಂದ, ಪ್ರಕೃತಿ ಸೌಂದರ್ಯ ಎಲ್ಲಾ ಲಭಿಸುತ್ತವೆ. ಆರೋಗ್ಯ, ಆನಂದದ ಸಮಾಜವೂ ನಿರ್ಮಾಣವಾಗುತ್ತದೆ. ಆದ್ದರಿಂದ, ನಾಗರಿಕರಾದ ನಾವೆಲ್ಲರೂ ಜವಾಬ್ದಾರಿ ತೆಗೆದುಕೊಳ್ಳೋಣ ಎಂದು ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಗುರುಮೂರ್ತಿ ಕರೆ ನೀಡಿದರು. 

ನಗರದ ಎಂಸಿಸಿ ‘ಬಿ’ ಬ್ಲಾಕ್‍ನಲ್ಲಿ ಎಸ್.ಎಸ್. ಜನ್ಮ ದಿನೋತ್ಸವ ಮತ್ತು `ಮನೆಗೆರಡು ಮರ ದಾವಣಗೆರೆಗೆ ವರ’ ಘೋಷಣೆಯಡಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮನೆಗೆರಡು ಗಿಡನೆಟ್ಟು, ಪೋಷಿಸಿ ಹಸಿರ ಬನ ಸೃಷ್ಟಿಸೋಣ, ಸ್ವಚ್ಚ ಮತ್ತು ಹಸಿರಿನ ಮಾದರಿ ಕ್ಲಾಸ್ ಕಾಲೋನಿಯಾಗಿ ಮಾಡೋಣ ಎಂದು ತಿಳಿಸಿದರು.

ಪ್ರತಿಯೊಬ್ಬರು ಶಾಸಕ ಶಾಮನೂರು ಶಿವಶಂಕರಪ್ಪ ಅವರಂತೆ ಗುಣ ಸಂಪಾದನೆ ಮಾಡಬೇಕು. ಶಿಕ್ಷಣ ಸೇವೆ, ಸಮಾಜ ಸೇವೆ, ರಾಜಕೀಯ ಧುರೀಣತ್ವ, ದಾನ, ಜ್ಞಾಪಕ ಶಕ್ತಿ ಇದು ಅವರು ಗಳಿಸಿದ ಆಸ್ತಿ. ಅವರಂತೆ ಎಲ್ಲರೂ ಸಮಾಜ ಸೇವೆಗೆ ಮುಂದಾಗಬೇಕು ಎಂದು ಹೇಳಿದರು.

ಕರುಣಾ ಜೀವ ಟ್ರಸ್ಟಿನ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಮಾತನಾಡಿ, ನಾವು ವೈದ್ಯರು ಆರೋಗ್ಯ ನೀಡಲಾಗುವುದಿಲ್ಲ. ನೀವು ಹಸಿರ ಉಸಿರಾಗಿಸಿಕೊಂಡು ನಿಮ್ಮ ಆರೋಗ್ಯ ನೀವೇ ರಕ್ಷಣೆ ಮಾಡಿಕೊಳ್ಳಬೇಕು ಎಂದರು. 

ಸ್ನೇಹ ಬಳಗದ ಮಾಜಿ ಅಧ್ಯಕ್ಷೆ ಮಂಜುಳಾ ಬಸವಲಿಂಗಪ್ಪ ಮಾತನಾಡಿ, ಸಸಿಯನ್ನು ಸಾಕುವುದು ಶಿಶುವನ್ನು ಸಾಕಿದಂತೆ, ಮೂರು ವರ್ಷ ಗಿಡ ಸಾಕಿದರೆ ಅದು ನಮ್ಮನ್ನು ನೂರು ವರ್ಷ ಸಾಕುತ್ತದೆ. ಗಿಡ ಮರಗಳು ಮುಂದಿನ ಪೀಳಿಗೆಗೆ ನಾವು ನೀಡುವ ಕೊಡುಗೆಗಳು ಎಂದು ಹೇಳಿದರು.

 ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ಮೊಹಮ್ಮದ್ ಉಸ್ಮಾನ್ ಅಂಗಡಿ, ಭರತ್ ಮೈಲಾರ್, ಸಂತೆಬೆನ್ನೂರು ಜಾವೇದ್ ಸಾಬ್, ವೈ. ವೆಂಕಟರೆಡ್ಡಿ, ಮುರುಗೇಶ್, ನಿಖಿಲ್, ಪ್ರಮೋದ್, ಮನು, ಗುರು ತ್ರಿವೇಣಿ ಮಲ್ಲೇಶ್, ರೇಖಾ ಸುದರ್ಶನ್, ಯಶೋಧ, ಸರೋಜ, ಗೀತಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!